ಚೆನ್ನೈ: ತಮಿಳುನಾಡು ಮೂಲದ ಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಹುಚ್ಚಾಟ ನಿಲ್ಲುತ್ತಿಲ್ಲ. ಈಕೆ ಪೋಸ್ಟ್ ಮಾಡಿದ್ದ ಕಾಳಿ ದೇವಿಯ ಪೋಸ್ಟರ್‌ನ್ನು ಟ್ವಿಟರ್ ಈಗಾಗಲೇ ಡಿಲೀಟ್ ಮಾಡಿದೆ. ಕಾಳಿ ಕೈಯಲ್ಲಿ ಸಿಗರೇಟ್ ಮತ್ತು ಎಲ್‌ಜಿಬಿಟಿಕ್ಯೂ ಸಮುದಾಯದ ಬಾವುಟ ಕೊಟ್ಟು ಚಿತ್ರಿಸಿದ್ದ ಈ ಪೋಸ್ಟರ್ ತುಂಬ ವಿವಾದ ಸೃಷ್ಟಿಸಿತ್ತು. ಅವರು ಕಾಳಿ ಎಂಬ ಸಾಕ್ಷ್ಯ ಚಿತ್ರವನ್ನು ಕೆನಡಾದ ಟೊರಂಟೋದ ಆಗಾ ಖಾನ್ ಮ್ಯೂಸಿಯಂನಲ್ಲಿ ಪ್ರದರ್ಶನ ಮಾಡಬೇಕಿತ್ತು. ಅದಕ್ಕೆ ಸಂಬಂಧಪಟ್ಟ ಪೋಸ್ಟರ್‌ನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಆದರೆ ಕಾಳಿ ಮಾತೆಯ ಕೈಯಲ್ಲಿ ಸಿಗರೇಟ್ ಮತ್ತು ಎಲ್‌ಜಿಬಿಟಿಕ್ಯೂ ಬಾವುಟ ನೋಡಿದ ಹಿಂದೂ ಸಮುದಾಯದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಪೋಸ್ಟರ್ ಬಗ್ಗೆ ಟೊರಂಟೊದ ಮ್ಯೂಸಿಯಂ ಕ್ಷಮೆಯನ್ನೂ ಕೇಳಿತ್ತು. ಇದೆಲ್ಲದರ ಮಧ್ಯೆ ಟ್ವಿಟರ್ ಆ ಪೋಸ್ಟ್‌ನ್ನು ಡಿಲೀಟ್ ಮಾಡಿದೆ. “ಲೀನಾ ಮಣಿಮೇಕಲೈ ಅವರ ಟ್ವೀಟ್‌ಗೆ ಭಾರತದಲ್ಲಿ ಆಕ್ಷೇಪ ವ್ಯಕ್ತವಾಗುತ್ತಿದ್ದು, ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಹೀಗಾಗಿ ಅದನ್ನು ತಡೆ ಹಿಡಿಯಲಾಗಿದೆʼ ಎಂದು ಹೇಳಿದೆ.
ಇಷ್ಟಾದ ಮೇಲೆ ಕೂಡ ಲೀನಾ ಅವರ ಅಧಿಕ ಪ್ರಸಂಗತನ ಮುಂದುವರಿದಿದೆ. ಇಂದು ಮುಂಜಾನೆ ಇನ್ನೊಂದು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಶಿವ-ಪಾರ್ವತಿಯ ಪಾತ್ರಧಾರಿಗಳು ಸಿಗರೇಟ್ ಸೇದುತ್ತಿರುವ ದೃಶ್ಯ ಇದೆ. ಅವರಿಬ್ಬರೂ ಯಾವುದೋ ನಾಟಕದಲ್ಲಿ ಶಿವ-ಪಾರ್ವತಿಯ ಪಾತ್ರ ಮಾಡುವವರು. ಅದೇ ವೇಷ -ಭೂಷಣದಲ್ಲಿಯೇ ಸಿಗರೇಟ್ ಸೇದುತ್ತಿದ್ದಾರೆ. ಆ ಫೋಟೋವನ್ನು ಲೀನಾ ಮಣಿಮೇಕಲೈ ಪೋಸ್ಟ್ ಮಾಡಿಕೊಂಡಿದ್ದಾರೆ.
ಬಿಜೆಪಿಯಿಂದ ಹಣ ಪಡೆದು, ಟ್ರೋಲ್ ಮಾಡುವವರಿಗೆ ಈ ಚಿತ್ರ ಕಾಣುವುದಿಲ್ಲವೇ? ಈ ಜಾನಪದ ಕಲಾವಿದರು ತಮ್ಮ ನಾಟಕ ಪ್ರದರ್ಶನ ಮುಗಿದ ಮೇಲೆ ಹೇಗೆ ಎಂಜಾಯ್ ಮಾಡುತ್ತಿದ್ದಾರೆ ಎಂಬುದನ್ನು ನೋಡಿ. ಅಂದಹಾಗೇ, ಈ ಚಿತ್ರ ನನ್ನ ಸಿನಿಮಾದ್ದು ಅಲ್ಲ. ಭಾರತದ ಪ್ರತಿ ಹಳ್ಳಿಗಳಲ್ಲೂ ಇಂಥ ದೃಶ್ಯ ಕಾಣಸಿಗುತ್ತದೆ. ಆದರೆ ಸಂಘ ಪರಿವಾರದವರು ತಮ್ಮ ದ್ವೇಷ ಮತ್ತು ಧಾರ್ಮಿಕ ಮತಾಂಧತೆಯಿಂದ ಇಂಥವರನ್ನೆಲ್ಲ ನಾಶ ಮಾಡಲು ಹೊರಟಿದ್ದಾರೆ. ಹೀಗಾದರೆ ʼಹಿಂದುತ್ವದ ಪರ್ಯಾಯ ಭಾರತʼ ಎನ್ನಿಸಿಕೊಳ್ಳುವುದಿಲ್ಲ. ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ʼಇಂಥ ಟ್ರೋಲ್‌ಗಳಿಂದೆಲ್ಲ ನನ್ನ ಕಲಾ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂಥ ಹುಚ್ಚು ಜನರ ಮಾಬ್ ಮಾಫಿಯಾಕ್ಕೆ ಹೆದರಿ ನನ್ನ ಸ್ವಾತಂತ್ರ್ಯ ಕಳೆದುಕೊಂಡರೆ, ನಾನು ಎಲ್ಲರ ಸ್ವಾತಂತ್ರ್ಯ ಹರಣ ಮಾಡಿದಂತೆ. ಏನು ಬರುತ್ತೋ ಬರಲಿ, ನಾನು ಎದುರಿಸುತ್ತೇನೆ. ಹೀಗೇ ಇರುತ್ತೇನೆʼ ಎಂದೂ ಹೇಳಿಕೊಂಡಿದ್ದಾರೆʼ.
ಇದನ್ನೂ ಓದಿ: ಕಾಳಿ ಪೋಸ್ಟರ್ ವಿವಾದ | ಜೈ ಮಾ ಕಾಳಿ! ಬೆಂಕಿಗೆ ತುಪ್ಪ ಸುರಿದ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ