Site icon Vistara News

ದೇಶದಲ್ಲಿ ಬಿಎ.4 ಉಪ-ರೂಪಾಂತರಿ 2ಕೇಸ್‌ಗಳು ಪತ್ತೆ; ಆರೋಗ್ಯ ತಜ್ಞರಿಂದ ಎಚ್ಚರಿಕೆ

BA.4

ಕೊರೊನಾದ ಒಂದೊಂದೇ ರೂಪಾಂತರಗಳು, ಅದರ ಉಪ ತಳಿಗಳು ಹೊರಬೀಳುತ್ತಲೇ ಇವೆ. ಭಾರತದಲ್ಲಿ ಮೂರನೇ ಅಲೆಗೆ ಕಾರಣವಾಗಿದ್ದ ಒಮಿಕ್ರಾನ್‌ ವಿವಿಧ ಉಪ ರೂಪಾಂತರಗಳನ್ನು ಹೊಂದಿದ್ದು, ಅದರಲ್ಲಿ ಒಂದಾದ ಬಿಎ.4 (BA.4) ಭಾರತದಲ್ಲೂ 2ಕೇಸ್‌ಗಳು ಪತ್ತೆಯಾಗಿವೆ. ಸದ್ಯ ಹೈದರಾಬಾದ್‌ ಮತ್ತು ಚೆನ್ನೈನಲ್ಲಿ ಬಿಎ.4 ಉಪ ರೂಪಾಂತರಿ ಕಾಣಿಸಿಕೊಂಡಿದ್ದು, ಹೆದರುವ ಅಗತ್ಯವಿಲ್ಲ ಆದರೆ ಎಚ್ಚರಿಕೆಯಿಂದ ಇರಬೇಕು ಎಂದು ಭಾರತದ ಕೊವಿಡ್‌ ಜಿನೋಮ್‌ ಸಿಕ್ವೆನ್ಸಿಂಗ್‌ ನೆಟ್ವರ್ಕ್‌ INSACOG (Indian SARS-CoV-2 Genomics Consortium) ತಿಳಿಸಿದೆ. ಒಮಿಕ್ರಾನ್‌ನ ಉಪ ರೂಪಾಂತರಿಗಳಾದ ಬಿಎ 4 ಮತ್ತು ಬಿಎ 5 ಎರಡೂ ಕೂಡ ನಿರ್ಲಕ್ಷ್ಯ ಮಾಡುವಂಥ ವೈರಾಣುಗಳಲ್ಲ. ದಕ್ಷಿಣಾಫ್ರಿಕಾದಲ್ಲಿ ಜನವರಿಯಿಂದ ಈ ವೈರಸ್‌ಗಳ ಪ್ರಸರಣ ಹೆಚ್ಚಾಗಿದ್ದು, ಐದನೇ ಅಲೆಗೆ ಕಾರಣವಾಗಿವೆ. ಯುಎಸ್‌ ಮತ್ತು ವಿವಿಧ ಯುರೋಪಿಯನ್‌ ದೇಶಗಳಲ್ಲಿ ಬಿಎ 4 ಮತ್ತು ಬಿಎ 5 ಪ್ರಸರಣ ಹೆಚ್ಚುತ್ತಿದೆ.

ಒಮಿಕ್ರಾನ್‌ನ ಬಿಎ.4 ಮತ್ತು ಬಿಎ.5 ಉಪವರ್ಗಗಳು ಮೊದಲು ಕಾಣಿಸಿಕೊಂಡಿದ್ದು 2022ರ ಜನವರಿಯಲ್ಲಿ, ದಕ್ಷಿಣ ಆಫ್ರಿಕಾದ ಲಿಂಪೋಪೋದಲ್ಲಿ. ನಂತರ ಆ ದೇಶದ ಅನೇಕ ಭಾಗಗಳಲ್ಲಿ ಪತ್ತೆಯಾಯಿತು. ಹಿಂದಿನ ಬಿಎ.2 ತಳಿಗಿಂತೂ ಜಾಸ್ತಿ ಸೋಂಕು ಉಂಟು ಮಾಡಬಲ್ಲವು ಎಂಬುದು ಆರೋಗ್ಯ ತಜ್ಞರ ಹೇಳಿಕೆ. ಒಮಿಕ್ರಾನ್‌ನ ಉಪ ತಳಿ ಬಿಎ.2 ಒಮಿಕ್ರಾನ್‌ಗಿಂತಲೂ ಹೆಚ್ಚಿನ ಪ್ರಸರಣ ಸಾಮರ್ಥ್ಯ ಹೊಂದಿತ್ತು. ಆದರೆ ಈಗಿನ ಬಿಎ.4 ಮತ್ತು ಬಿಎ.5ಗಳು ಬಿಎ.2ನ್ನೂ ಮೀರಿಸುವಂತಿವೆ ಎಂದು ದಕ್ಷಿಣ ಆಫ್ರಿಕಾದ ಕ್ವಾಝುಲು-ನಟಾಲ್ ಮತ್ತು ಸ್ಟೆಲೆನ್‌ಬೋಶ್ ವಿಶ್ವವಿದ್ಯಾಲಯಗಳಡಿ ಬರುವ ಸಂಸ್ಥೆಗಳ ಮುಖ್ಯಸ್ಥ ಟ್ಯುಲಿಯೊ ಡಿ ಒಲಿವೇರಾ ತಿಳಿಸಿದ್ದಾರೆ.

ಇದನ್ನೂ ಓದಿ: ನಡುರಾತ್ರಿ ಏನಾಗುತ್ತೆ ಹೃದಯಕ್ಕೆ? ಜಯದೇವ ಆಸ್ಪತ್ರೆ ಹೊರಗೆಡಹಿದ ಸತ್ಯ

ಈ ಎರಡೂ ತಳಿಗಳು ವೇಗವಾಗಿ ಹರಡುತ್ತವೆ ಆದರೆ ಆಸ್ಪತ್ರೆಗೆ ದಾಖಲಾಗುವಷ್ಟು ಅಥವಾ ಸಾಯುವಷ್ಟು ದೊಡ್ಡ ಮಟ್ಟದ ಅಪಾಯ ಉಂಟು ಮಾಡುವುದಿಲ್ಲ. ಈಗಾಗಲೇ ಬಹುತೇಕ ಎಲ್ಲರೂ ಕೊವಿಡ್‌ 19 ಲಸಿಕೆ ತೆಗೆದುಕೊಂಡಿದ್ದರಿಂದ ಹೆದರುವ ಅಗತ್ಯವಿಲ್ಲ ಎಂದೂ ಒಲಿವೇರಾ ಮಾಹಿತಿ ನೀಡಿದ್ದಾರೆ. ಹಾಗಿದ್ದಾಗ್ಯೂ ಭಾರತದಲ್ಲಿ ಬಿಎ.4 ವೈರಸ್‌ ಹೆಚ್ಚಿನ ಪ್ರಭಾವ ಉಂಟು ಮಾಡಲಾರದು. ಈ ವೈರಾಣು ಕಾರಣದಿಂದ ಕೊವಿಡ್‌ 19 ಕೇಸ್‌ಗಳಲ್ಲಿ ಏರಿಕೆಯಾಗುವ ಸಾಧ್ಯತೆ ಇಲ್ಲ ಎಂದು ರಾಷ್ಟ್ರೀಯ ರೋಗ ನಿಯಂತ್ರಣಾ ಕೇಂದ್ರ ತಿಳಿಸಿದೆ. ಹಾಗೊಮ್ಮೆ ಬಿಎ.4 ವೈರಸ್‌ ಸೋಂಕು ಹರಡಿದರೂ ಕೂಡ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಅತ್ಯಂತ ಕಡಿಮೆ ಇರಲಿದೆ ಎಂದೂ ತಿಳಿಸಿದೆ.

ಇದನ್ನೂ ಓದಿ : Tomato Flu | ಕೇರಳ ಗಡಿಭಾಗದ ಜಿಲ್ಲೆಗಳಲ್ಲಿ ಕಟ್ಟೆಚ್ಚರ: ಮಕ್ಕಳಿಗೆ ಸೋಂಕು ಬಾರದಂತೆ ತಡೆಯಲು ಇಲ್ಲಿದೆ ಮಾಹಿತಿ

.

Exit mobile version