ನವ ದೆಹಲಿ: ಭಾರತದ ವಿಮಾನಗಳಿಗೆಲ್ಲ ಏನೋ ಗ್ರಹಚಾರವೇ ಶುರುವಾಗಿದೆ. ಒಂದಾದ ಮೇಲೆ ಒಂದರಂತೆ ವಿವಿಧ ಏರ್‌ಲೈನ್ಸ್ ಕಂಪನಿಗಳಿಗೆ ಸೇರಿದ ವಿಮಾನಗಳಲ್ಲಿ ತಾಂತ್ರಿಕ ದೋಷ ಕಂಡುಬರುತ್ತಿದೆ. ಇಂಡಿಗೋ, ವಿಸ್ತಾರಾ, ಸ್ಪೈಸ್‌ಜೆಟ್ ಆಯ್ತು ಈಗ ಗೋ ಫಸ್ಟ್ ಫ್ಲೈಟ್‌ಗಳ ಸರದಿ. ಇಂದು ಗೋ ಫಸ್ಟ್ ಸಂಸ್ಥೆಯ ಎರಡು ವಿಮಾನಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಅದರಲ್ಲಿ ಒಂದು ವಿಮಾನ ಮಾರ್ಗವನ್ನೇ ಬದಲಿಸಿದರೆ, ಮತ್ತೊಂದು ವಿಮಾನ ಟೇಕ್ ಆಫ್ ಆದ ಸ್ಥಳಕ್ಕೇ ವಾಪಸ್ ಹೋಗಿ ಲ್ಯಾಂಡ್ ಆಗಿದೆ.
ಮುಂಬೈನಿಂದ ಲೇಹ್‌ಗೆ ಹೊರಟಿದ್ದ ಗೋ ಫಸ್ಟ್ A320ದ ಜಿ8-386 ವಿಮಾನ ಹಾರಾಟ ಪ್ರಾರಂಭಿಸಿ ಕೆಲವೇ ಕ್ಷಣದಲ್ಲಿ ಎಂಜಿನ್ ಇಂಟರ್‌ಫೇಸ್ ಘಟಕದಲ್ಲಿ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅದರ ಮಾರ್ಗ ಬದಲಿಸಿ, ದೆಹಲಿಗೆ ತಂದು ಲ್ಯಾಂಡ್ ಮಾಡಲಾಗಿದೆ. ಹಾಗೇ, ಇನ್ನೊಂದು ಜಿ8 6202 ವಿಮಾನ ಇಂದು ಬೆಳಗ್ಗೆ 11.40ಕ್ಕೆ ಶ್ರೀನಗರದಿಂದ ದೆಹಲಿಗೆ ಹೊರಟಿತ್ತು. ವಾಯುಮಾರ್ಗದಲ್ಲಿ ಸ್ವಲ್ಪ ದೂರ ಹೋಗುತ್ತಿದ್ದಂತೆ 2ನೇ ಎಂಜಿನ್‌ನ ಎಕ್ಸಾಸ್ಟ್ ಗ್ಯಾಸ್ (ನಿಷ್ಕಾಸ ಅನಿಲ)ನ ಉಷ್ಣತೆ ಮಿತಿಮೀರಿದ ಪರಿಣಾಮ ಅದು ವಾಪಸ್ ಶ್ರೀನಗರಕ್ಕೆ ಹೋಗಿ ಲ್ಯಾಂಡ್ ಆಯಿತು.
ಇದನ್ನೂ ಓದಿ: ಸ್ಪೈಸ್‌ಜೆಟ್‌ನಲ್ಲಿ 18 ದಿನಗಳಲ್ಲಿ 8 ಸಲ ತಾಂತ್ರಿಕ ದೋಷ ಪತ್ತೆ, ಡಿಜಿಸಿಎ ನೋಟಿಸ್
ಈ ಎರಡೂ ವಿಮಾನಗಳಲ್ಲಿ ತಾಂತ್ರಿಕ ದೋಷ ಕಂಡು ಬಂದ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಫ್ಲೈಟ್‌ಗಳನ್ನು ಸಂಪೂರ್ಣವಾಗಿ ತಪಾಸಣೆ ನಡೆಸಿ, ಯಾವುದೇ ದೋಷವಿಲ್ಲ ಎಂದು ಖಚಿತಪಡಿಸಿಕೊಂಡ ಬಳಿಕವಷ್ಟೇ ಅವುಗಳ ಹಾರಾಟಕ್ಕೆ ಪುನಃ ಅನುಮತಿ ಕೊಡಲಾಗುವುದು ಎಂದು ಡಿಜಿಸಿಎ (ನಾಗರಿಕ ವಿಮಾನಯಾನ ನಿರ್ದೇಶನಾಲಯ) ಮಹಾನಿರ್ದೇಶಕ ಅರುಣ್ ಕುಮಾರ್ ತಿಳಿಸಿದ್ದಾರೆ. ಗೋ ಫಸ್ಟ್ ಸಂಸ್ಥೆ ಇನ್ನೂ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ.
ಇತ್ತೀಚೆಗೆ ವಿಮಾನಗಳ ತಾಂತ್ರಿಕ ದೋಷ ಪದೇಪದೆ ವರದಿಯಾಗುತ್ತಿದೆ. ಜೂ.೧೯ರಿಂದ ಜುಲೈ 17ರವರೆಗೆ ಒಟ್ಟು 9 ಇಂಥ ಪ್ರಕರಣಗಳು ವರದಿಯಾಗಿದ್ದವು. ಆ ಸಾಲಿಗೆ ಈಗ ಇನ್ನೆರಡು ಸೇರಿಕೊಂಡಿವೆ. ಅಲ್ಲಿಗೆ ಜೂ.19ರಿಂದ ಜುಲೈ 19ರವರೆಗೆ (ಒಂದು ತಿಂಗಳು) ಒಟ್ಟು 11 ವಿಮಾನಗಳಲ್ಲಿ ಹೀಗೆ ಮಾರ್ಗ ಮಧ್ಯೆಯ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಅದರಲ್ಲೂ ಅತ್ಯಂತ ಹೆಚ್ಚು ಈ ಸಮಸ್ಯೆ ಕಾಣಿಸಿದ್ದು ಸ್ಪೈಸ್‌ಜೆಟ್ ವಿಮಾನಗಳಲ್ಲೇ. ಇನ್ನು ಯಾವೆಲ್ಲ ಕಂಪನಿಯ ವಿಮಾನಗಳಲ್ಲಿ ದೋಷ ಕಂಡು ಬರುತ್ತಿದೆಯೋ ಆ ಸಂಸ್ಥೆಗೆ ಡಿಜಿಸಿಎ ಶೋಕಾಸ್ ನೋಟಿಸ್ ಕೂಡ ನೀಡುತ್ತಿದೆ.
ಇದನ್ನೂ ಓದಿ: ಸ್ಪೈಸ್‌ಜೆಟ್ ಫ್ಲೈಟ್‌ನಲ್ಲಿ ಮತ್ತೆ ದೋಷ; ದುಬೈನಿಂದ ಆಗಮಿಸಬೇಕಿದ್ದ ವಿಮಾನ ವಿಳಂಬ