ನ್ಯೂಯಾರ್ಕ್ನ ಜನಪ್ರಿಯ ಮ್ಯಾಗ್ಜಿನ್ಗಳಲ್ಲಿ ಒಂದಾದ ‘ಟೈಮ್ಸ್’ ಈಗ ವಿಶ್ವದ 50 ಶ್ರೇಷ್ಠ/ಅತ್ಯುತ್ತಮ ಸ್ಥಳಗಳ ಪಟ್ಟಿ (World’s Greatest Places) ಬಿಡುಗಡೆ ಮಾಡಿದೆ. 2023ನೇ ಸಾಲಿನ ವಿಶ್ವದ ಅದ್ಭುತ ತಾಣಗಳಲ್ಲಿ ಭಾರತದ ಲಡಾಖ್ ಮತ್ತು ಒಡಿಶಾದ ಮಯೂರ್ಬಂಜ್ಗಳು ಕೂಡ ಸೇರಿವೆ. ಪಾಕ್ಷಿಕ ಅಂದರೆ 15ದಿನಕ್ಕೊಮ್ಮೆ ಪ್ರಕಟವಾಗುವ ಈ ಟೈಮ್ಸ್ ಮ್ಯಾಗ್ಜಿನ್ ಪ್ರತಿವರ್ಷವೂ ವಿಶ್ವದ ಶ್ರೇಷ್ಠ ಸ್ಥಳಗಳ ಪಟ್ಟಿಯನ್ನು ಬಿಡುಗಡೆ ಮಾಡಿ, ಅದರ ವಿಶೇಷತೆಗಳನ್ನು ಹೇಳುತ್ತದೆ. ಒಮ್ಮೆ ಭೇಟಿ ನೀಡಿದರೆ ಮತ್ತೆಮತ್ತೆ ಅಲ್ಲಿಗೆ ಹೋಗಬೇಕು ಎಂದು ಎನ್ನಿಸುವ ಸ್ಥಳಗಳನ್ನು ಅದು ಆಯ್ಕೆ ಮಾಡುತ್ತದೆ. ಪ್ರಸಕ್ತ ಸಾಲಿನ ಪಟ್ಟಿಯಲ್ಲಿ ಭಾರತದ ಎರಡು ನಗರಗಳು ಸೇರ್ಪಡೆಯಾಗಿವೆ.
ಇನ್ನುಳಿದಂತೆ ಫ್ಲೋರಿಡಾದ ಟ್ಯಾಂಪಾ, ಸೌದಿ ಅರೇಬಿಯಾದ ಕೆಂಪು ಸಮುದ್ರ, ಒರೆಗಾನ್ನಲ್ಲಿರುವ ವಿಲ್ಲಾಮೆಟ್ ವ್ಯಾಲಿ, ಕ್ಯಾಲಿಫೋರ್ನಿಯಾದ ಯೊಸೆಮೈಟ್ ರಾಷ್ಟ್ರೀಯ ಉದ್ಯಾನವನ, ಮೊಂಟಾನಾದ ಬೋಝೆಮನ್, ವಾಷಿಂಗ್ಟನ್ ಡಿಸಿ, ಪೆರು ದೇಶದ ಒಲ್ಲಂತಾಯತಂಬೊ, ಆಸ್ಟ್ರೇಲಿಯಾದ ಬ್ರಿಸ್ಬೇನ್ ಮತ್ತು ಕಾಂಗರೂ ಐಸ್ಲ್ಯಾಂಡ್ಗಳು, ಸ್ವಿಜರ್ಲ್ಯಾಂಡ್ನ ಸೇಂಟ್ ಮೊರಿಟ್ಜ್ ಮತ್ತಿತರ ಪ್ರದೇಶಗಳ ಹೆಸರು ಈ ಪಟ್ಟಿಯಲ್ಲಿವೆ.
ಲಡಾಖ್ ಮತ್ತು ಮಯೂರ್ಬಂಜ್ ಆಯ್ಕೆ ಮಾಡಿದ್ದು ಹೇಗೆ
ಪ್ರತಿವರ್ಷವೂ ಹೀಗೆ ಅದ್ಭುತ ಸ್ಥಳಗಳನ್ನು ಪಟ್ಟಿ ಮಾಡುವ ಟೈಮ್ಸ್ ಮ್ಯಾಗ್ಜಿನ್ ಅವುಗಳ ವಿಶೇಷತೆಯನ್ನೂ ಹೇಳುತ್ತದೆ ಮತ್ತು ಅವುಗಳನ್ನು ಜಗತ್ತಿನ ಅದ್ಭುತ ಸ್ಥಳವಾಗಿ ಆಯ್ಕೆ ಮಾಡಲು ಕಾರಣ ಏನು ಎಂಬುದನ್ನೂ ತಿಳಿಸುತ್ತದೆ. ಲಡಾಖ್ ಮತ್ತು ಮಯೂರ್ಬಂಜ್ನ ವಿಶೇಷತೆಗಳನ್ನು ಮತ್ತು ಈ ಎರಡೂ ನಗರಗಳನ್ನು ತಾವು ಪಟ್ಟಿಯಲ್ಲಿ ಸೇರಿಸಿದ್ದಕ್ಕೆ ಕಾರಣವನ್ನು ಟೈಮ್ಸ್ ಮ್ಯಾಗ್ಜಿನ್ ತಿಳಿಸಿದ್ದು, ಅದು ಈ ಕೆಳಗಿನಂತೆ ಇದೆ.
ಲಡಾಖ್
ಉತ್ತರ ಭಾರತದಿಂದ ಅತ್ಯಂತ ದೂರದಲ್ಲಿರುವ ಲಡಾಖ್, ಅಲ್ಲಿನ ಬೆರಗುಗೊಳಿಸುವ ಭೂರಚನೆ ಮತ್ತು ಟಿಬೇಟಿಯನ್ ಬುದ್ಧ ಸಂಸ್ಕೃತಿಯಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ಅಲ್ಲಿಗೆ ಮತ್ತೆಮತ್ತೆ ಭೇಟಿ ಕೊಡಲು ಹಲವು ಕಾರಣಗಳು ಸಿಗುತ್ತವೆ. ಅದೆಷ್ಟೋ ಅಚ್ಚರಿಗಳನ್ನು ನೀವಲ್ಲಿ ನೋಡಬಹುದು ಎಂದು ಮ್ಯಾಗ್ಜಿನ್ ಹೇಳಿದೆ.
ಅಷ್ಟೇ ಅಲ್ಲ ‘ಲಡಾಖ್ನ ಹಾನ್ಲೆ ಗ್ರಾಮವನ್ನು ಇತ್ತೀಚೆಗಷ್ಟೇ ಭಾರತದ ಮೊದಲ ಡಾರ್ಕ್ ಸ್ಕೈ ರಿಸರ್ವ್ ತಾಣ ಎಂದು ಗುರುತಿಸಲಾಗಿದೆ. ಇದು ಲೇಹ್ನಿಂದ ಆಗ್ನೇಯಕ್ಕೆ 168 ಮೈಲು ದೂರದಲ್ಲಿದೆ. ಈ ಗ್ರಾಮ ವರ್ಷದಲ್ಲಿ 270 ದಿನಗಳಲ್ಲಿ ಅತ್ಯಂತ ಸ್ವಚ್ಛವಾದ ಆಕಾಶವನ್ನು ಹೊಂದಿರುತ್ತದೆ. ಅಂದರೆ ಗಾಢ ಕತ್ತಲು ಮತ್ತು ಮೋಡ ರಹಿತ ಆಕಾಶ ಇರುವುದರಿಂದ ಆಕಾಶಕಾಯಗಳ ಅಧ್ಯಯನಕ್ಕೆ ಸೂಕ್ತಸ್ಥಳ ಎನ್ನಿಸಿದೆ. ನೀವು ಈ ಸ್ಥಳದಲ್ಲಿ ಖಗೋಳ ವೈಭವವನ್ನೇ ನೋಡಬಹುದು ಎಂದು ಟೈಮ್ಸ್ ಮ್ಯಾಗ್ಜಿನ್ ಉಲ್ಲೇಖಿಸಿದೆ. ಇನ್ನು ಲಡಾಖ್ಗೆ ಭೇಟಿ ಕೊಟ್ಟಾಗ ನೀವು ನರ್ಬಾ ಕಣಿವೆಯಲ್ಲಿರುವ ಕ್ಯಾಗಾ ಹೋಟೆಲ್, ಶೇಲ್ ಮತ್ತು ಲೇಹ್ನಲ್ಲಿರುವ ಡೋಲ್ಖರ್ನಲ್ಲಿ ಉಳಿಯಬಹುದು ಎಂದೂ ಶಿಫಾರಸ್ಸು ಮಾಡಿದೆ.
ಇದನ್ನೂ ಓದಿ: Anjanadri hills : ಐತಿಹಾಸಿಕ, ಧಾರ್ಮಿಕ, ಪ್ರವಾಸಿ ತಾಣವಾಗಿ ಅಂಜನಾದ್ರಿ; ಕನಸು ಬಿಚ್ಚಿಟ್ಟ ಸಿಎಂ ಬೊಮ್ಮಾಯಿ
ಮಯೂರ್ಬಂಜ್
ಒಡಿಶಾದ ಮಯೂರ್ಬಂಜ್ ಪ್ರದೇಶದ ವಿಶೇಷತೆಯನ್ನು ಟೈಮ್ಸ್ ತಿಳಿಸಿದೆ. ಇಲ್ಲಿನ ಪುರಾತನ ದೇಗುಲಗಳು, ಸಾಂಸ್ಕೃತಿಕ ಪರಂಪರೆ ಮತ್ತು ಹಚ್ಚಹಸಿರಿನಿಂದ ಕೂಡಿದ ಭೂರಚನೆಯೇ ಆಯ್ಕೆಗೆ ಕಾರಣ ಎಂದು ಹೇಳಿದೆ. ‘ಭೂಮಿ ಮೇಲೆ ಅತ್ಯಂತ ಅಪರೂಪ ಎನ್ನಿಸಿರುವ ಕಪ್ಪು ಹುಲಿಯನ್ನು ಎಲ್ಲಾದರೂ ಕಾಣಬಹುದು ಎಂದರೆ ಅದು ಮಯೂರ್ಬಂಜ್ನಲ್ಲಿ ಮಾತ್ರ. ಇಲ್ಲಿನ ಸಿಮಿಲಿಪಾಲ್ ರಾಷ್ಟ್ರೀಯ ಉದ್ಯಾನವನದ ಜತೆಗೆ, ಹಲವು ಸುಂದರ ಪ್ರದೇಶಗಳನ್ನು ಕಾಣಬಹುದು ಎಂದು ಉಲ್ಲೇಖಿಸಿದೆ.
ಯುನೆಸ್ಕೋದ ಸಾಂಸ್ಕೃತಿಕ ಪರಂಪರೆ ಪಟ್ಟಿಯಲ್ಲಿ ಸೇರಿರುವ ಮಯೂರ್ಬಂಜ್ ಛೌ ನೃತ್ಯವನ್ನು ಕೂಡ ಟೈಮ್ಸ್ ಮ್ಯಾಗ್ಜಿನ್ ಪ್ರಸ್ತಾಪಿಸಿದೆ. ಒಡಿಶಾ ರಾಜ್ಯಾದ್ಯಂತ ಜೀವ ವೈವಿಧ್ಯ ಇದೆ. ಇಲ್ಲಿನದು ಅಮಿತ ಪರಂಪರೆ. ಒಡಿಶಾದ ಸಾಂಸ್ಕೃತಿಕ, ಐತಿಹಾಸಿಕ ಪರಂಪರೆಯನ್ನು ಪ್ರಸ್ತುತ ಪಡಿಸಲೆಂದೇ ಇಲ್ಲಿ ಒಡಿಶಾ ನಡಿಗೆ (Odisha Walk) ಎಂಬ ಉಪಕ್ರಮಕ್ಕೆ ಪ್ರವಾಸೋದ್ಯಮ ಇಲಾಖೆ ಚಾಲನೆ ಕೊಟ್ಟಿದೆ ಎಂದು ಟೈಮ್ಸ್ ತಿಳಿಸಿದೆ.