Site icon Vistara News

ರಾಜೌರಿಯಲ್ಲಿ ಗುಹೆಯಲ್ಲಿ ಕುಳಿತು ಸ್ಫೋಟಕ ಎಸೆದ ಉಗ್ರರು; ಇಬ್ಬರು ಯೋಧರ ಸಾವು, ನಾಲ್ವರಿಗೆ ಗಾಯ

2 Army jawans killed In Rajouri

#image_title

ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ಇಬ್ಬರು ಯೋಧರು ಉಗ್ರರಿಂದ ಹತ್ಯೆಗೀಡಾಗಿದ್ದಾರೆ (Jawans Killed in Rajouri). ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದಲೂ ಜಮ್ಮು-ಕಾಶ್ಮೀರದ ವಿವಿಧ ಕಡೆಗಳಲ್ಲಿ ಭದ್ರತಾ ಪಡೆ ಸಿಬ್ಬಂದಿ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆಯುತ್ತಲೇ ಇದೆ. ಬುಧವಾರ ಕುಪ್ವಾರಾದಲ್ಲಿ ಇಬ್ಬರು ಉಗ್ರರನ್ನು, ಗುರುವಾರ ಬಾರಾಮುಲ್ಲಾದಲ್ಲಿ ಇಬ್ಬರು ಭಯೋತ್ಪಾದಕರನ್ನು ಭದ್ರತಾ ಪಡೆ ಸಿಬ್ಬಂದಿ ಹೊಡೆದುರುಳಿಸಿದ್ದರು. ಇಂದು ಬೆಳಗ್ಗೆಯಿಂದಲೇ ರಾಜೌರಿಯಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ಪ್ರಾರಂಭವಾಗಿತ್ತು.

ರಾಜೌರಿ ಜಿಲ್ಲೆಯ ಕಂಡಿ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಮತ್ತು ಸಿಆರ್​ಪಿಎಫ್​ ಸಿಬ್ಬಂದಿ ಜಂಟಿಯಾಗಿ, ಮುಂಜಾನೆ 7.30ರಿಂದ ಕಾರ್ಯಾಚರಣೆ ಶುರುವಿಟ್ಟುಕೊಂಡಿದ್ದರು. ಆ ಅರಣ್ಯದಲ್ಲಿರುವ ಭದ್ರವಾದ ಗುಹೆಯೊಂದರಲ್ಲಿ ಭಯೋತ್ಪಾದಕರು ಅಡಗಿದ್ದರು. ಈ ಪ್ರದೇಶ ಸಂಪೂರ್ಣವಾಗಿ ಕಲ್ಲುಗಳಿಂದ, ಕಡಿದಾದ ಬಂಡೆಗಳಿಂದ ಕೂಡಿದೆ ಎಂದು ಭಾರತೀಯ ಸೇನಾಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: Encounter in Rajouri: ರಾಜೌರಿಯಲ್ಲಿ ಎನ್​ಕೌಂಟರ್​; ಮೂರು ಉಗ್ರರು ಟ್ರ್ಯಾಪ್​, ಒಬ್ಬ ಯೋಧನಿಗೆ ಗಾಯ

ಭದ್ರತಾ ಪಡೆಗಳು ತಮ್ಮ ಬೆನ್ನು ಹತ್ತಿದ್ದು ಗೊತ್ತಾದಾಗ ಭಯೋತ್ಪಾದಕರು ತಿರುಗಿ ದಾಳಿ ನಡೆಸಿದ್ದಾರೆ. ಸೇನಾ ಸಿಬ್ಬಂದಿಯೆಡೆಗೆ ಸ್ಫೋಟಕಗಳನ್ನು ಎಸೆದಿದ್ದಾರೆ. ಇದರಿಂದಾಗಿ ಇಬ್ಬರು ಯೋಧರು ಮೃತಪಟ್ಟಿದ್ದು, ಒಬ್ಬ ಅಧಿಕಾರಿ ಸೇರಿ ನಾಲ್ವರು ಗಾಯಗೊಂಡಿದ್ದಾರೆ. ಅವರೆಲ್ಲರನ್ನೂ ಉಧಾಂಪುರದಲ್ಲಿರುವ ಕಮಾಂಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಭಾರತೀಯ ಸೇನೆ ಹೇಳಿಕೆ ಬಿಡುಗಡೆ ಮಾಡಿದೆ. ಮೂರ್ನಾಲ್ಕು ಉಗ್ರರು ಆ ಏರಿಯಾದಲ್ಲಿ ಟ್ರ್ಯಾಪ್​ ಆಗಿದ್ದಾರೆ ಎಂದು ಹೇಳಲಾಗಿದೆ. ಎನ್​ಕೌಂಟರ್ ಮುಂದುವರಿದಿದೆ.

Exit mobile version