ಸುಕ್ಮಾ: ಛತ್ತೀಸ್ಗಢ್ನ ಸುಕ್ಮಾ ಜಿಲ್ಲೆಯಲ್ಲಿ ಜಿಲ್ಲಾ ಮೀಸಲು ಪಡೆ (DRG) ಯೋಧರು ಇಬ್ಬರು ನಕ್ಸಲರನ್ನು ಹತ್ಯೆ (Naxals Killed) ಮಾಡಿದ್ದಾರೆ. ಭೆಜ್ ಪೊಲೀಸ್ ಠಾಣಾ ವ್ಯಾಪ್ತಿಯ ದಂತೇಶ್ಪುರಂ ಅರಣ್ಯದಲ್ಲಿ ನಕ್ಸಲರ ವಿರುದ್ಧ ಡಿಆರ್ಜಿ ಸೈನಿಕರು ಕಾರ್ಯಾಚರಣೆ ನಡೆಸಿದ್ದರು. ಸೈನಿಕರು ಅಲ್ಲಿಯೇ ಬೀಡುಬಿಟ್ಟಿದ್ದು, ಉಳಿದ ಮಾವೋವಾದಿಗಳಿಗಾಗಿ ಹುಡುಕಾಟ ಮುಂದುವರಿದಿದೆ. ಈ ಬಗ್ಗೆ ಸುಕ್ಮಾ ಪೊಲೀಸರು ಹೇಳಿಕೆ ಬಿಡುಗಡೆ ಮಾಡಿದ್ದು, ‘ಭೆಜ್ ಏರಿಯಾದಲ್ಲಿ ಎನ್ಕೌಂಟರ್ ನಡೆಯುತ್ತಿದೆ. ಇಬ್ಬರು ಮಾವೋವಾದಿಗಳನ್ನು ಈಗಾಗಲೇ ಕೊಲ್ಲಲಾಗಿದೆ’ ಎಂದು ಹೇಳಿದ್ದಾರೆ. ಹತ್ಯೆಯಾದವರಲ್ಲಿ ಒಬ್ಬಾತ ಮಡ್ಕಂ ಎರ್ರಾ. ಇವನು ಎಸ್ಒಎಸ್ ಕಮಾಂಡರ್ ಆಗಿದ್ದ. ಈತನ ತಲೆಗೆ 8 ಲಕ್ಷ ರೂಪಾಯಿ ಬಹುಮಾನ ಇತ್ತು. ಮೃತಪಟ್ಟವಳು ಇನ್ನೊಬ್ಬಳು ಮಹಿಳಾ ನಕ್ಸಲ್. ಹೆಸರು ಪೋಡಿಯಮ್ ಭಿಮೆ. ಇವಳು ಮಡ್ಕಂ ಎರ್ರಾನ ಪತ್ನಿ. ಇವಳ ತಲೆಗೆ 3 ಲಕ್ಷ ರೂಪಾಯಿ ಬಹುಮಾನವಿತ್ತು ಎಂದು ವರದಿಯಾಗಿದೆ.
ಮೃತ ನಕ್ಸಲರಿಂದ ಭದ್ರತಾ ಪಡೆ ಸಿಬ್ಬಂದಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಐಇಡಿ (ಸುಧಾರಿತ ಸ್ಫೋಟಕ ಸಾಧನ), ಅಟೋಮ್ಯಾಟಿಕ್ ಶಸ್ತ್ರಾಸ್ತ್ರಗಳನ್ನು ಕೂಡ ಜಪ್ತಿ ಮಾಡಿದ್ದಾರೆ. ಇತ್ತೀಚೆಗೆ ದಂತೇವಾಡದ ಅರಾನ್ಪುರದಲ್ಲಿ ನಡೆಸಿದ್ದಂಥ ದಾಳಿಯ ಮಾದರಿಯಲ್ಲಿಯೇ, ಭದ್ರತಾ ಪಡೆಗಳ ಮೇಲೆ ಇನ್ನೊಂದು ದೊಡ್ಡಮಟ್ಟದ ದಾಳಿ ನಡೆಸಲು ಮಡ್ಕಂ ಎರ್ರಾ ನೇತೃತ್ವದಲ್ಲಿ ನಕ್ಸಲರು ಯೋಜನೆ ರೂಪಿಸುತ್ತಿದ್ದರು ಎಂದು ವರದಿಯಾಗಿದೆ.
ಇದನ್ನೂ ಓದಿ:Maoists killed: ಪೊಲೀಸರ ಮೇಲೆ ದಾಳಿಗೆ ಹೊಂಚು ಹಾಕಿದ್ದ ಇಬ್ಬರು ನಕ್ಸಲರ ಹತ್ಯೆ
ಮೇ 7ರಂದು ತೆಲಂಗಾಣ-ಛತ್ತೀಸ್ಗಢ್ನ ಗಡಿಯಲ್ಲಿರುವ ಭದ್ರಾದ್ರಿ-ಕೊತ್ತಗುಡೆಂ ಜಿಲ್ಲೆಯಲ್ಲಿರುವ ಅರಣ್ಯ ಪ್ರದೇಶದಲ್ಲಿ ಇಬ್ಬರು ಮಾವೋವಾದಿಗಳನ್ನು ತೆಲಂಗಾಣ ಪೊಲೀಸರು ಹತ್ಯೆಗೈದಿದ್ದರು. ಹತ್ಯೆಯಾದ ಇಬ್ಬರಲ್ಲಿ ಒಬ್ಬಾತನ ಹೆಸರು ರಾಜೇಶ್. ಇವನು ನಕ್ಸಲ್ ಸ್ಥಳೀಯ ಸಂಘಟನೆಯಾದ ಚೆರ್ಲಾ ಲೋಕಲ್ ಆರ್ಗನೈಸೇಶನ್ ಸ್ಕ್ವಾಡ್ನ ಕಮಾಂಡರ್ ಆಗಿದ್ದ ಎನ್ನಲಾಗಿದೆ. ಇತ್ತೀಚೆಗೆ ಛತ್ತೀಸ್ಗಢ್ನ ದಂತೇವಾಡಾದ ಅರನ್ಪುರದಲ್ಲಿ ನಕ್ಸಲರು ಜಿಲ್ಲಾ ಮೀಸಲು ಪಡೆ ಸಿಬ್ಬಂದಿ ಮೇಲೆ ದೊಡ್ಡಮಟ್ಟದ ದಾಳಿ ನಡೆಸಿದ್ದರು. ಇದರಲ್ಲಿ 11 ಸೈನಿಕರು ಮೃತಪಟ್ಟಿದ್ದರು. ಈ ದಾಳಿಯ ಬೆನ್ನಲ್ಲೇ ಭದ್ರತಾ ಪಡೆಗಳು ನಕ್ಸಲರ ವಿರುದ್ಧದ ಕಾರ್ಯಾಚರಣೆಯನ್ನು ಚುರುಕುಗೊಳಿಸಿವೆ.