ನವ ದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀರಾಮಮಂದಿರದಲ್ಲಿ ಪ್ರತಿಷ್ಠಾಪಿಸಲು ನೂತನ ‘ರಾಮಲಲ್ಲಾ’ ಪ್ರತಿಮೆ ಕೆತ್ತನೆ ಮಾಡಲು ನಿರ್ಧರಿಸಲಾಗಿದ್ದು, ಅದಕ್ಕಾಗಿ ನೇಪಾಳದಿಂದ ಎರಡು ಸಾಲಿಗ್ರಾಮ ಕಲ್ಲುಗಳನ್ನು ಈಗಾಗಲೇ ಅಯೋಧ್ಯೆಗೆ ತರಲಾಗಿದೆ. ಅದರ ಬೆನ್ನಲ್ಲೇ ರಾಮಮಂದಿರ ನಿರ್ಮಾಣಕ್ಕಾಗಿ ಈಗ ಕರ್ನಾಟಕದ ಮೈಸೂರಿನಿಂದಲೂ ಎರಡು ಕಲ್ಲುಗಳನ್ನು ಅಯೋಧ್ಯೆಗೆ ಕೊಂಡೊಯ್ಯಲಾಗಿದೆ. ಪ್ರತಿಮೆಯನ್ನು ಕೆತ್ತನೆ ಮಾಡಲಾಗುತ್ತಿರುವ ಕರಸೇವಕಪ್ಪುರಂ ಕಾರ್ಯಾಗಾರದಲ್ಲಿ ಕಲ್ಲುಗಳನ್ನು ಪರಿಶೀಲನೆ ಮಾಡಲಾಗುತ್ತಿದ್ದು, ಶೀಘ್ರವೇ ಕೆತ್ತನೆ ಕಾರ್ಯ ಶುರುವಾಗಲಿದೆ.
ಶ್ರೀರಾಮಮಂದಿರ ಸಂಕೀರ್ಣ ನಿರ್ಮಾಣಕ್ಕಾಗಿ ದೇಶದ ವಿವಿಧ ಭಾಗಗಳಿಂದ ಕಲ್ಲುಗಳನ್ನು ಅಯೋಧ್ಯೆಗೆ ತರಿಸಿ, ಕರಸೇವಕಪುರಂ ಕಾರ್ಯಾಗಾರದಲ್ಲಿ ಸಂಗ್ರಹಿಸಿ ಇಡಲಾಗಿದೆ. ಅದಾದ ಮೇಲೆ ಕೂಡ ನೇಪಾಳ, ಮೈಸೂರಿನಿಂದ ತಲಾ ಎರಡು ಶಿಲೆಗಳನ್ನು ತರಿಸಲಾಗಿದೆ. ಇನ್ನೂ 10 ಕಲ್ಲುಗಳನ್ನು ಇಲ್ಲಿಗೆ ತರುವುದು ಬಾಕಿಯಿದ್ದು, ತಂದಾದ ಮೇಲೆ ವೈಜ್ಞಾನಿಕವಾಗಿ ಪರಿಶೀಲನೆ ನಡೆಸಲಾಗುವುದು ಎಂದು ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ.
ಇದನ್ನೂ ಓದಿ: ಅಯೋಧ್ಯಾ ರಾಮಮಂದಿರಕ್ಕೆ 2024ರ ಜನವರಿಯಿಂದ ಭಕ್ತರಿಗೆ ಪ್ರವೇಶ; ಸಂಕ್ರಾಂತಿಯಂದೇ ರಾಮಲಲ್ಲಾ ಪ್ರತಿಷ್ಠಾಪನೆ
‘ಹಲವು ಕಲ್ಲುಗಳಲ್ಲಿ ಶ್ರೀರಾಮಲಲ್ಲಾನ ಪ್ರತಿಮೆಯನ್ನು ಕೆತ್ತಲ್ಪಡುವ ಕಲ್ಲುಗಳನ್ನು ಮೂರ್ತಿಶಾಸ್ತ್ರದ ಪ್ರಕಾರವೇ
ಪರಿಶೀಲನೆ ನಡೆಸಲಾಗುತ್ತದೆ. ಮೂರ್ತಿಯಾಗಿ ಕೆತ್ತಲ್ಪಡಲು ಆಯ್ಕೆಯಾದ ಕಲ್ಲುಗಳು ಯಾವುದೇ ಲೋಹದ ಸಾಮರ್ಥ್ಯ ಹೊಂದಿಲ್ಲದ್ದಾಗಿರಬೇಕು‘ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.