ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಒಳನುಸುಳುವಿಕೆ ಯತ್ನವನ್ನು ಯೋಧರು ವಿಫಲಗೊಳಿಸಿದ್ದಲ್ಲದೆ ಇಬ್ಬರು (Terrorists Killed) ಉಗ್ರರನ್ನು ಹೊಡೆದುರುಳಿಸಿದ್ದಾರೆ. ರಾಜೌರಿ ಜಿಲ್ಲೆ ನೌಶೇರಾ ವಲಯದ ಪುಖರ್ಣಿ ಗಡಿ ಪ್ರದೇಶದಲ್ಲಿ ಕಳೆದ ರಾತ್ರಿ ಉಗ್ರರು ಒಳನುಸುಳಲು ಯತ್ನಿಸಿದ್ದಾರೆ. ಉಗ್ರರ ಚಟುವಟಿಕೆ ಕುರಿತು ಅನುಮಾನ ವ್ಯಕ್ತವಾಗುತ್ತಲೇ ಭದ್ರತಾ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದಾರೆ. ಇದೇ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಇಬ್ಬರನ್ನು ಯೋಧರು ಎನ್‌ಕೌಂಟರ್ ಮಾಡಿದ್ದಾರೆ.
“ರಾತ್ರೋರಾತ್ರಿ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಸಂಶಯಾತ್ಮಕ ಚಟುಟಿಕೆಗಳ ಹಿನ್ನೆಲೆಯಲ್ಲಿ ಯೋಧರನ್ನು ನಿಯೋಜಿಸಲಾಗಿತ್ತು. ಈ ವೇಳೆ ಉಗ್ರರು ಏಕಾಏಕಿ ದಾಳಿ ನಡೆಸಿದ್ದಾರೆ. ಆದರೆ, ಭದ್ರತಾ ಸಿಬ್ಬಂದಿಯು ತಿರುಗೇಟು ನೀಡಿ ಅವರನ್ನು ಹೊಡೆದುರುಳಿಸಿದ್ದಾರೆ” ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಉಗ್ರರ ಶವಗಳ ಪತ್ತೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಎನ್‌ಕೌಂಟರ್ ಸ್ಥಳದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಪಾಕಿಸ್ತಾನ ಗಡಿಯಿಂದ ನುಸುಳುವ ಉಗ್ರರು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ, ಶಸ್ತ್ರಾಸ್ತ್ರ ಸಾಗಣೆ ಸೇರಿ ಹಲವು ಕುತಂತ್ರ ಮಾಡುತ್ತಾರೆ. ಹಾಗಾಗಿ, ಎಲ್‌ಒಸಿಯಲ್ಲಿ ಹೆಚ್ಚಿನ ಬಂದೋಬಸ್ತ್ ಇರುತ್ತದೆ.