Site icon Vistara News

ಯುವತಿಯನ್ನು ಪ್ರೀತಿಸಿ ಓಡಿಹೋದ ಮಗಳನ್ನು ವಾಪಸ್​ ಕರೆಸಲು ಹೈಕೋರ್ಟ್​ ಮೆಟ್ಟಿಲೇರಿದ ಅಪ್ಪನಿಗೆ ನಿರಾಸೆ

Court Verdict

ಭೋಪಾಲ್​: ಸಲಿಂಗಕಾಮ ಅಪರಾಧವಲ್ಲ ಎಂದು 2018ರಲ್ಲಿ ಸುಪ್ರೀಂಕೋರ್ಟ್​ ತೀರ್ಪು ನೀಡಿದೆ. ಅದಕ್ಕೂ ಮೊದಲು ಭಾರತದಲ್ಲಿ ಸಲಿಂಗಕಾಮ ಶಿಕ್ಷಾರ್ಹ ಅಪರಾಧವಾಗಿತ್ತು. ಅನೈಸರ್ಗಿಕ ಲೈಂಗಿಕ ಕ್ರಿಯೆಯ ಸಾಲಿನಲ್ಲಿ ಸಲಿಂಗಕಾಮವನ್ನೂ ಸೇರಿಸಲಾಗಿತ್ತು. ಐಪಿಸಿ ಸೆಕ್ಷನ್​ 377ರಡಿಯಲ್ಲಿ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು ಎಂದು ಹೇಳಲಾಗಿತ್ತು. ಸಲಿಂಗಕಾಮವನ್ನು ಕಾನೂನುಬದ್ಧಗೊಳಿಸಲು ಆಗ್ರಹ, ಕಾನೂನು ಹೋರಾಟ ನಿರಂತರವಾಗಿತ್ತು. 2018ರಲ್ಲಿ ಆ ಸಮುದಾಯದವರಿಗೆ ಖುಷಿಯಾಗುವಂತಹ ತೀರ್ಪನ್ನು ಸುಪ್ರೀಂಕೋರ್ಟ್​ ನೀಡಿತ್ತು. ಸೆಕ್ಷನ್​ 377ರ ವ್ಯಾಪ್ತಿಯಿಂದ ಸಲಿಂಗಕಾಮವನ್ನು ಹೊರತರುವ ಮೂಲಕ, ಇದು ಶಿಕ್ಷಾರ್ಹ ಅಪರಾಧವಲ್ಲ ಎಂದು ಹೇಳಿತ್ತು.

ಭಾರತದಲ್ಲಿ ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದರೂ ಜನಸಾಮಾನ್ಯರು ಅದನ್ನು ಸಂಪೂರ್ಣವಾಗಿ ಇದುವರೆಗೆ ಒಪ್ಪಿಕೊಳ್ಳುತ್ತಿಲ್ಲ. ಈಗೀಗ ಅಲ್ಲಲ್ಲಿ ಸಲಿಂಗಿಗಳು ವಿವಾಹವಾಗುತ್ತಿದ್ದಾರೆ. ತಾವು ಸಲಿಂಗಿಗಳು ಎಂದು ಬಹಿರಂಗವಾಗಿ ಒಪ್ಪಿಕೊಳ್ಳುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇಷ್ಟೆಲ್ಲ ಆಗಿಯೂ ತಮ್ಮ ಮಕ್ಕಳು ಆ ವರ್ಗಕ್ಕೆ ಸೇರಿದವರು ಎಂದು ಗೊತ್ತಾದಾಗ ಪಾಲಕರು, ಸಂಬಂಧಿಕರು ದುಗುಡಪಡುತ್ತಿದ್ದಾರೆ, ಮುಜುಗರಪಡುತ್ತಿದ್ದಾರೆ. ಹಾಗೇ, 18 ವರ್ಷದ ಹುಡುಗಿಯ ತಂದೆಯೊಬ್ಬರೂ ತಮ್ಮ ಮಗಳು ಸಲಿಂಗಿ ಎಂದು ಗೊತ್ತಾದಾಗ ತೀವ್ರ ಸಂಕಟಪಟ್ಟು ಆಕೆ, 22 ವರ್ಷದ ಯುವತಿಯೊಂದಿಗೆ ಮನೆಬಿಟ್ಟು ಹೋದಾಗ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಆದರೆ ಅವರಿಗೆ ಸೋಲಾಗಿದೆ.

ಈ ಘಟನೆ ನಡೆದಿದ್ದು ಮಧ್ಯಪ್ರದೇಶದ ಜಬಲ್ಪುರದಲ್ಲಿ. ಇಲ್ಲಿ 18 ವರ್ಷದ ಯುವತಿಯೊಬ್ಬಳು ತನಗಿಂತ ನಾಲ್ಕು ವರ್ಷದ ದೊಡ್ಡವಳಾದ ಯುವತಿಯೊಂದಿಗೆ ಓಡಿಹೋಗಿದ್ದಳು. ಮಗಳ ವರ್ತನೆಯಿಂದ ಬೇಸರಗೊಂಡು, ಸಂಕಟಪಟ್ಟ ತಂದೆ ಆಕೆಯನ್ನು ವಾಪಸ್​ ಬರುವಂತೆ ಪರಿಪರಿಯಾಗಿ ಕೇಳಿಕೊಂಡರು. ಆದರೆ ಹುಡುಗಿ ಒಪ್ಪದೆ ಇದ್ದಾಗ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ವಿಚಾರಣೆ ನಡೆಸಿದ ಮಧ್ಯಪ್ರದೇಶ ಹೈಕೋರ್ಟ್ ‘ಇಬ್ಬರು ಮಹಿಳೆಯರು ಪರಸ್ಪರ ಒಪ್ಪಿಗೆಯಿಂದ ಒಟ್ಟಿಗೇ ಇರಲು ನಿರ್ಧಾರ ಮಾಡಿದರೆ, ಅದನ್ನು ತಡೆಯಲು ಕೋರ್ಟ್​​ಗೆ ಸಾಧ್ಯವಿಲ್ಲ’ ಎಂದು ತೀರ್ಪು ನೀಡಿದೆ.

‘ಈ ಇಬ್ಬರು ಯುವತಿಯರು ಬಾಲ್ಯದಿಂದಲೂ ಸ್ನೇಹಿತೆಯರು. ಒಟ್ಟಿಗೇ ಓದಿದ್ದಾರೆ. ಬರುಬರುತ್ತ ಪ್ರೀತಿಸಲು ಶುರು ಮಾಡಿದ್ದಲ್ಲದೆ, ಒಬ್ಬರನ್ನೊಬ್ಬರು ಬಿಟ್ಟು ಬದುಕಲು ಸಾಧ್ಯವೇ ಇಲ್ಲ ಎಂಬ ಸ್ಥಿತಿಗೆ ತಲುಪಿದ್ದಾರೆ. ಮನೆಯಲ್ಲಿ ಒಪ್ಪುವುದಿಲ್ಲ ಎಂಬ ಕಾರಣಕ್ಕೆ ಇಬ್ಬರೂ ಓಡಿಹೋಗಿ ಪ್ರತ್ಯೇಕವಾಗಿದ್ದಾರೆ’ ಎಂದು ತಂದೆ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ಮಧ್ಯಪ್ರದೇಶ ಹೈಕೋರ್ಟ್​, 18 ವರ್ಷದ ಹುಡುಗಿಗೆ ನೋಟಿಸ್​ ಕಳಿಸಿ, ಕೋರ್ಟ್ ಎದುರು ಬರುವಂತೆ ಸೂಚಿಸಿತ್ತು. ಹುಡುಗಿ ಬಂದಳು.. ಆಕೆಗೆ ಸರಿಯಾಗಿ ಆಲೋಚನೆ ಮಾಡುವಂತೆ ಒಂದು ತಾಸು ಸಮಯವನ್ನೂ ಕೊಡಲಾಯಿತು. ಅಂತಿಮವಾಗಿ ಆಕೆ ತನ್ನ ಗೆಳತಿಯನ್ನೇ ಆಯ್ಕೆ ಮಾಡಿಕೊಂಡಳು. ತಮ್ಮಿಂದೇನೂ ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್​ ಹೇಳಿದೆ.

ಇದನ್ನೂ ಓದಿ: ಪೆಟ್ರೋಲ್‌ ಸುರಿದು ಯುವಕನ ಕೊಲೆ: ಠಾಣೆಗೆ ಬಂದು ಹೇಳಿದ್ದ ಹಂತಕ! ಹತ್ಯೆಯ ಹಿಂದೆ ಸಲಿಂಗ ಕಾಮದ ನೆರಳು

Exit mobile version