Site icon Vistara News

Video: ಟೇಲರ್‌ ಕನ್ಹಯ್ಯಲಾಲ್‌ ಹಂತಕರ ಮೇಲೆ ಕೋರ್ಟ್‌ ಆವರಣದಲ್ಲಿ ವಕೀಲರಿಂದಲೇ ಹಲ್ಲೆ

Rajasthan Murder

ಉದಯಪುರ: ರಾಜಸ್ಥಾನದ ಉದಯಪುರದಲ್ಲಿ ಟೇಲರ್‌ ಕನ್ಹಯ್ಯಲಾಲ್‌ನನ್ನು ಹತ್ಯೆ ಮಾಡಿದ ನರಹಂತಕರ ಮೇಲೆ ಇಂದು ಜೈಪುರ ಕೋರ್ಟ್‌ ಹೊರಭಾಗದಲ್ಲಿ ದೊಡ್ಡ ಗುಂಪೊಂದು ದಾಳಿ ಮಾಡಿದೆ. ಹೀಗೆ ಹಲ್ಲೆ ಮಾಡಿದವರಲ್ಲಿ ವಕೀಲರೂ ಇದ್ದರು ಎಂದು ಹೇಳಲಾಗಿದೆ. ಪೊಲೀಸರು ಇದ್ದರೂ ಹಂತಕರಾದ ಮೊಹಮ್ಮದ್‌ ರಿಯಾಜ್‌ ಅಟ್ಟಾರಿ ಮತ್ತು ಮಹಮ್ಮದ್‌ ಗೌಸ್‌ನ ಬಟ್ಟೆಯನ್ನು ಹಿಡಿದೆಳೆದು ಹರಿಯಲಾಗಿದೆ. ಆಕ್ರೋಶಿತರ ಗುಂಪು ಈ ವೇಳೆ, ʼಪಾಕಿಸ್ತಾನ ಮುರ್ದಾಬಾದ್‌ʼ, ʼಟೇಲರ್‌ ಕನ್ಹಯ್ಯಲಾಲ್‌ ಹಂತಕರನ್ನು ಗಲ್ಲಿಗೇರಿಸಿʼ ಎಂದು ದೊಡ್ಡದಾಗಿ ಕೂಗುತ್ತಿತ್ತು. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಆರೋಪಿಗಳನ್ನು ತ್ವರಿತವಾಗಿ ವಾಹನದಲ್ಲಿ ಕೂರಿಸಿ, ದೊಡ್ಡಮಟ್ಟದಲ್ಲಿ ಗಲಾಟೆ, ಹಲ್ಲೆ ನಡೆಯುವುದನ್ನು ತಪ್ಪಿಸಿದ್ದಾರೆ.

ಪ್ರವಾದಿ ಮೊಹಮ್ಮದ್‌ ವಿರುದ್ಧ ಮಾತನಾಡಿದ್ದ ನೂಪುರ್‌ ಶರ್ಮಾರನ್ನು ಬೆಂಬಲಿಸಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದ್ದಾರೆ ಎಂಬ ಕಾರಣಕ್ಕೆ ಈ ದುಷ್ಟರು ಟೇಲರ್‌ ಕನ್ಹಯ್ಯಲಾಲ್‌ ಶಿರಚ್ಛೇದ ಮಾಡಿದ್ದರು. ತಮ್ಮ ರಾಕ್ಷಸೀಕೃತ್ಯದ ವಿಡಿಯೋ ಮಾಡಿ ವೈರಲ್‌ ಮಾಡಿದ್ದರು. ಅಷ್ಟಾದ ಮೇಲೆ ಪ್ರಧಾನಿ ನರೇಂದ್ರ ಮೋದಿಯವರಿಗೂ ಜೀವ ಬೆದರಿಕೆ ಹಾಕಿದ್ದರು. ಇದರಲ್ಲಿ ಮುಖ್ಯ ಆರೋಪಿಗಳು ಮೊಹಮ್ಮದ್‌ ರಿಯಾಜ್‌ ಅಟ್ಟಾರಿ ಮತ್ತು ಮಹಮ್ಮದ್‌ ಗೌಸ್. ಇವರನ್ನು ಪೊಲೀಸರು ಘಟನೆ ನಡೆದ ದಿನದಂದೇ ಬಂಧಿಸಿದ್ದಾರೆ. ಹಾಗೇ, ಘಟನೆಗೆ ಸಂಬಂಧಪಟ್ಟ ಇನ್ನಿಬ್ಬರನ್ನೂ ಅರೆಸ್ಟ್‌ ಮಾಡಿದ್ದಾರೆ. ಒಟ್ಟೂ 4 ಆರೋಪಿಗಳನ್ನು ಇಂದು ಜೈಪುರದಲ್ಲಿರುವ ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್‌, ಆರೋಪಿಗಳನ್ನು ಜುಲೈ 12ರವರೆಗೆ ಎನ್‌ಐಎ ವಶಕ್ಕೆ ನೀಡಿದೆ.

ಆ ಇಬ್ಬರು ಬಂಧಿತರು ಯಾರು?
ರಾಜಸ್ಥಾನದ ಭೀಕರ ಹತ್ಯೆ ಕೇಸ್‌ನಲ್ಲಿ ಬಂಧಿತರಾದ ಇನ್ನಿಬ್ಬರ ಹೆಸರು ಮೊಹ್ಸಿನ್‌ ಮತ್ತು ಆಸಿಫ್‌ ಎಂದಾಗಿದ್ದು, ಇವರು ನೇರವಾಗಿ ಕನ್ಹಯ್ಯನನ್ನು ಕೊಲ್ಲದೆ ಇದ್ದರೂ, ಹತ್ಯೆಯ ಸಂಚಿನಲ್ಲಿ ಸಂಪೂರ್ಣ ಪಾತ್ರವಹಿಸಿದ್ದಾರೆ ಎಂದು ರಾಷ್ಟ್ರೀಯ ತನಿಖಾ ದಳ ಹೇಳಿದೆ. ಹಂತಕರು ಅಂಗಡಿಗೆ ಹೋಗಲು, ಅಲ್ಲಿ ಹತ್ಯೆ ಮಾಡಲು ಮತ್ತು ನಂತರ ಅಲ್ಲಿಂದ ತಪ್ಪಿಸಿಕೊಳ್ಳಲು ಏನೆಲ್ಲ ಬೇಕೋ ಆ ಸಿದ್ಧತೆಯನ್ನೆಲ್ಲ ಇವರು ಮಾಡಿಕೊಟ್ಟಿದ್ದರು ಎಂದು ಎನ್‌ಐಎ ವರದಿ ನೀಡಿದೆ.

ಇದನ್ನೂ ಓದಿ: ರಾಜಸ್ಥಾನ ಹತ್ಯೆ; ಟೇಲರ್‌ ಕನ್ಹಯ್ಯಲಾಲ್‌ಗೆ ಮುಸ್ಲಿಂ ದುಷ್ಕರ್ಮಿಗಳು ಇರಿದಿದ್ದು 26 ಬಾರಿ

Exit mobile version