ನವ ದೆಹಲಿ: ಉದಯಪುರ ಹಿಂದೂ ವ್ಯಕ್ತಿ ಕನ್ಹಯ್ಯಲಾಲ್ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (NIA)ವಹಿಸಿಕೊಂಡಿದ್ದು, ಐಪಿಸಿಯ ಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ), ಭಯೋತ್ಪಾದನಾ ವಿರೋಧಿ ಕಠಿಣ ಕಾನೂನಿನಡಿಯಲ್ಲಿ ಎಫ್‌ಐಆರ್ ದಾಖಲು ಮಾಡಿದೆ. ಪ್ರವಾದಿ ಮೊಹಮ್ಮದ್ ವಿರುದ್ಧ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾರಿಗೆ ಬೆಂಬಲ ನೀಡಿ ಪೋಸ್ಟ್ ಹಾಕಿದ್ದಾರೆ ಎಂಬ ಕಾರಣಕ್ಕೆ ಉದಯಪುರದಲ್ಲಿ ಟೇಲರ್ ಕೆಲಸ ಮಾಡಿಕೊಂಡಿದ್ದ ಕನ್ಹಯ್ಯ ಲಾಲ್‌ನನ್ನು ಇಬ್ಬರು ಮುಸ್ಲಿಮರು ಹತ್ಯೆಗೈದಿದ್ದಾರೆ. ಕನ್ಹಯ್ಯ ತಲೆ ಕತ್ತರಿಸಿದ್ದಲ್ಲದೆ ಅದನ್ನು ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಅದಾದ ಕೆಲವೇ ಹೊತ್ತಲ್ಲಿ ಇಬ್ಬರೂ ಅರೆಸ್ಟ್ ಆಗಿದ್ದು, ಹಂತಕರಿಗೆ ಕ್ರೂರ ಐಸಿಸ್ ಉಗ್ರ ಸಂಘಟನೆಯ ಸಂಪರ್ಕವಿತ್ತು ಎಂಬ ಸತ್ಯ ಹೊರಬಿದ್ದಿದೆ.
ರಾಜಸ್ಥಾನ ಘಟನೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದನ್ನು ಭಯೋತ್ಪಾದಕ ಕೃತ್ಯ ಎಂದೇ ಭಾವಿಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದ ಗೃಹ ಸಚಿವಾಲಯ ತನಿಖೆಯನ್ನು ಎನ್‌ಐಎಗೆ ವಹಿಸುವುದಾಗಿ ಜೂ.28ರಂದು ಹೇಳಿತ್ತು. ಅದರಂತೆ ಎನ್‌ಐಎ ಅಧಿಕಾರಿಗಳ ತಂಡ ದೆಹಲಿಯಿಂದ ರಾಜಸ್ಥಾನಕ್ಕೆ ಮಂಗಳವಾರ ರಾತ್ರಿಯೇ ಹೊರಟಿತ್ತು. ಇಂದು ಅಧಿಕಾರಿಗಳು ತನಿಖೆಯನ್ನು ಅಧಿಕೃತವಾಗಿ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ.
ಶವಪರೀಕ್ಷೆ ವರದಿ ಬಹಿರಂಗ
ಉದಯಪುರದಲ್ಲಿ ಕನ್ಹಯ್ಯಲಾಲ್ ಬರ್ಬರವಾಗಿ ಹತ್ಯೆಗೀಡಾಗಿದ್ದಾರೆ. ಅವರ ಶವ ಪರೀಕ್ಷೆ ವರದಿ ಈಗ ಹೊರಬಿದ್ದಿದೆ. ಕನ್ಹಯ್ಯರಿಗೆ ಒಟ್ಟು 26ಬಾರಿ ಚಾಕುವಿನಿಂದ ಇರಿಯಲಾಗಿದೆ. ಅದರಲ್ಲಿ 8-10 ಬಾರಿ ಕುತ್ತಿಗೆಗೆ ಇರಿಯಲಾಗಿದೆ. ಹೀಗಾಗಿ ಅವರಿಗೆ ಅತಿಯಾಗಿ ರಕ್ತಸ್ರಾವ ಉಂಟಾಗಿ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಇಂದು ಮಧ್ಯಾಹ್ಯ 3 ಗಂಟೆ ಹೊತ್ತಿಗೆ ರಾಜಸ್ಥಾನ ಡಿಜಿಪಿ ಸುದ್ದಿಗೋಷ್ಠಿಯಲ್ಲಿ ಘಟನೆಯ ಬಗ್ಗೆ ಸಮಗ್ರ ವಿವರ ನೀಡಲಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ ಶಿರಚ್ಛೇದ; ʼಧರ್ಮದ ಹೆಸರಲ್ಲಿ ದೌರ್ಜನ್ಯʼ ಸಹಿಸಲಾಗದು ಎಂದ ರಾಹುಲ್ ಗಾಂಧಿ, ಓವೈಸಿ