Site icon Vistara News

ಉದ್ಧವ್‌ ಠಾಕ್ರೆ ರಾಜೀನಾಮೆ ನಮಗೇನೂ ಸಂತೋಷ ಕೊಟ್ಟಿಲ್ಲ ಎಂದ ಬಂಡಾಯ ಶಾಸಕರು

Uddhav Thackeray Resignation

ಮುಂಬೈ: ಮಹಾರಾಷ್ಟ್ರ ಸರ್ಕಾರದಲ್ಲಿ ಬಿಕ್ಕಟ್ಟು ಶುರುವಾಗಿ 10 ದಿನಗಳ ಬಳಿಕ ಮಹಾ ವಿಕಾಸ್‌ ಅಘಾಡಿ ಸರ್ಕಾರ ಪತನಗೊಂಡಿದೆ. ಉದ್ಧವ್‌ ಠಾಕ್ರೆ ಮುಖ್ಯಮಂತ್ರಿ ಹುದ್ದೆಗೆ ಜೂ.29ರಂದು ರಾತ್ರಿ ರಾಜೀನಾಮೆ ಸಲ್ಲಿಸಿದ್ದಾರೆ. ಉದ್ಧವ್‌ ಠಾಕ್ರೆ ರಾಜೀನಾಮೆ ಬೆನ್ನಲ್ಲೇ ಏಕನಾಥ್‌ ಶಿಂಧೆ ಬಣದ ಶಾಸಕರೊಬ್ಬರು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು, “ಉದ್ಧವ್‌ ಠಾಕ್ರೆ ರಾಜೀನಾಮೆ ಕೊಟ್ಟಿದ್ದು ನಮಗೇನೂ ಖುಷಿಕೊಡುವ ವಿಚಾರವಿಲ್ಲ” ಎಂದು ತಿಳಿಸಿದ್ದಾರೆ. “ನಮ್ಮ ಹೋರಾಟ ಏನಿದ್ದರೂ ಕಾಂಗ್ರೆಸ್‌ ಮತ್ತು ಎನ್‌ಸಿಪಿಯೊಟ್ಟಿಗೆ. ಈ ಎರಡೂ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡ ಮೇಲೆ ಉದ್ಧವ್‌ ಠಾಕ್ರೆ ನಮ್ಮನ್ನು ನಿರ್ಲಕ್ಷಿಸಿದರು. ನಾವು ಹೇಳಿದ ಅದೆಷ್ಟೋ ವಿಷಯಗಳನ್ನು ಗಮನಕ್ಕೆ ತೆಗೆದುಕೊಳ್ಳಲಿಲ್ಲ. ಹೀಗಾಗಿ ಮೈತ್ರಿ ಮುರಿದುಕೊಳ್ಳಲು ನಾವು ನಿರ್ಧರಿಸಿದೆವು. ಆದರೆ ಇದಕ್ಕಾಗಿ ನಾವು ನಮ್ಮ ನಾಯಕರಾಗಿದ್ದ ಉದ್ಧವ್‌ ಠಾಕ್ರೆ ವಿರುದ್ಧವೂ ಹೋರಾಡಬೇಕಾಯಿತು” ಎಂದು ಬಂಡಾಯ ಬಣದ ವಕ್ತಾರ ದೀಪಕ್‌ ಕೇಸರ್‌ಕರ್‌ ಹೇಳಿದ್ದಾರೆ.

ಎನ್‌ಸಿಪಿಯ ಕೆಲವು ನಾಯಕರು ಮತ್ತು ಸಂಜಯ್‌ ರಾವತ್‌ ವಿರುದ್ಧ ದೀಪಕ್‌ ಕೇಸರ್‌ಕರ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಸಂಜಯ್‌ ರಾವತ್‌ ಅವರಂತೂ ಪ್ರತಿದಿನ ಕೇಂದ್ರ ಸರ್ಕಾರದ ವಿರುದ್ಧ ಒಂದಲ್ಲ ಒಂದು ವಿಷಯಕ್ಕೆ ವಾಗ್ದಾಳಿ, ಟೀಕೆ ನಡೆಸುತ್ತಿದ್ದರು. ದಿನವೂ ಸಂಜೆ ಮಾಧ್ಯಮಗಳ ಎದುರು ಹೋಗಿ ಕೇಂದ್ರ ಸರ್ಕಾರವನ್ನು ನಿಂದಿಸುತ್ತಿದ್ದರು. ಇದರಿಂದಾಗಿ ಕೇಂದ್ರ ಸರ್ಕಾರ ಮತ್ತು ನಮ್ಮ ರಾಜ್ಯ ಸರ್ಕಾರದ ನಡುವೆ ಬಾಂಧವ್ಯ ಸಂಪೂರ್ಣ ಹಾಳಾಯಿತು. ಅಂತರ ಜಾಸ್ತಿಯಾಯಿತು. ಇಂಥ ವಕ್ತಾರ ಯಾವ ಪಕ್ಷಕ್ಕೂ ಇರಬಾರದು” ಎಂದು ಹೇಳಿದರು.

ಎನ್‌ಸಿಪಿ ಪಕ್ಷದ ನಾಯಕರ ಕಾರ್ಯವೈಖರಿಯನ್ನು ಟೀಕಿಸಿದ ದೀಪಕ್‌ ಕೇಸರ್‌ಕರ್‌, ಎನ್‌ಸಿಪಿಯ ರಾಜ್ಯಾಧ್ಯಕ್ಷ ಸೇರಿ ಹಲವು ನಾಯಕರು ಎಲ್ಲ ಕಡೆಯೂ ಪ್ರಭಾವ ಬೀರಲು ಯತ್ನಿಸುತ್ತಿದ್ದರು. ನಮ್ಮ ಪ್ರದೇಶಗಳಿಗೂ ಬಂದು ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು. ಇವರ ಸಹಾಯ ತೆಗೆದುಕೊಂಡು ಶಿವಸೇನೆ ಸರ್ಕಾರ ರಚನೆ ಮಾಡಿದೆ ಎಂಬ ಒಂದೇ ಕಾರಣಕ್ಕೆ ಉದ್ಧವ್‌ ಠಾಕ್ರೆಯವರೂ ಅವರಿಗೇ ಜಾಸ್ತಿ ಬೆಲೆ ಕೊಡುತ್ತಿದ್ದರು” ಎಂದು ಬೇಸರ ಹೊರಹಾಕಿದರು.

ಇದನ್ನೂ ಓದಿ: Maha politics: ಬಂಡಾಯದ ಬಳಿಕ ಉದ್ಧವ್‌ ಸರಕಾರ ತೆಗೆದುಕೊಂಡ ನಿರ್ಣಯಗಳ ವಿವರ ಕೇಳಿದ ಗವರ್ನರ್‌

ಜೂ.19ರಂದು ವಿಧಾನ ಪರಿಷತ್‌ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಶಿವಸೇನೆಯಲ್ಲಿ ಬಂಡಾಯ ಶುರುವಾಗಿದೆ. ಏಕನಾಥ್‌ ಶಿಂಧೆ ತಮ್ಮ ಬೆಂಬಲಿಗ ಶಾಸಕರೊಂದಿಗೆ ಮೊದಲು ಗುಜರಾತ್‌ನ ರೆಸಾರ್ಟ್‌ಗೆ ಹೋಗಿ, ಅಲ್ಲಿಂದ ಅಸ್ಸಾಂನ ಗುವಾಹಟಿಯಲ್ಲಿರುವ ಹೋಟೆಲ್‌ಗೆ ಹೋಗಿ ತಂಗಿದ್ದಾರೆ. ಕೊನೆಗೂ ಅಂದುಕೊಂಡಂತೆ ಮಹಾರಾಷ್ಟ್ರ ಸರ್ಕಾರವೀಗ ಪತನಗೊಂಡಿದೆ. ಬಿಜೆಪಿ ಸರ್ಕಾರ ರಚನೆಗೆ ಸಕಲ ಸಿದ್ಧತೆ ನಡೆಸಿದೆ. ಜುಲೈ 1ರಂದು ಬಿಜೆಪಿಯ ದೇವೇಂದ್ರ ಫಡ್ನವೀಸ್‌ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ನಾಳೆ ಪ್ರಮಾಣ ವಚನ ನಿರೀಕ್ಷೆ

Exit mobile version