Site icon Vistara News

ಸಾವರ್ಕರ್​​ಗೆ ಪದೇಪದೆ ಅವಮಾನಿಸಿದರೆ ನಮ್ಮ ಮೈತ್ರಿಯೇ ಮುರಿದು ಬಿದ್ದೀತು; ರಾಹುಲ್ ಗಾಂಧಿಗೆ ಎಚ್ಚರಿಕೆ ನೀಡಿದ ಉದ್ಧವ್ ಠಾಕ್ರೆ

Uddhav Thackeray Warns Rahul Gandhi Over Savarkar Remark

#image_title

ನಾಸಿಕ್​: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ‘ನಾನು ಸಾವರ್ಕರ್ ಅಲ್ಲ, ಹಾಗಾಗಿ ಕ್ಷಮೆ ಕೇಳುವುದಿಲ್ಲ’ ಎಂದು ಹೇಳಿಕೆ ನೀಡಿದ್ದಕ್ಕೆ ಶಿವಸೇನೆ ನಾಯಕ ಉದ್ಧವ್ ಠಾಕ್ರೆ (Uddhav Thackeray) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಮತ್ತು ಶಿವಸೇನೆಯ ಉದ್ಧವ್ ಠಾಕ್ರೆ ಬಣ ಮೈತ್ರಿಕೂಟವೇ ಆಗಿದ್ದರೂ ಇದೀಗ ರಾಹುಲ್ ಗಾಂಧಿಯವರ ಸಾವರ್ಕರ್​ ಹೇಳಿಕೆ, ಉದ್ಧವ್ ಠಾಕ್ರೆಯಲ್ಲಿ ಸಿಟ್ಟು ತರಿಸಿದೆ. ಹೀಗೆ ನೀವು ಸಾವರ್ಕರ್​ ಅವರನ್ನು ತೆಗಳುತ್ತಿದ್ದರೆ, ನಮ್ಮ ಮೈತ್ರಿಯಲ್ಲಿ ಬಿರುಕು ಸೃಷ್ಟಿಯಾಗಬಹುದು’ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

2019ರಲ್ಲಿ ಮಹಾರಾಷ್ಟ್ರದಲ್ಲಿ ಶಿವಸೇನೆ ಪಕ್ಷ, ತನ್ನ ಬಹುಕಾಲದ ಮೈತ್ರಿಪಕ್ಷವಾದ ಬಿಜೆಪಿಯನ್ನು ತೊರೆದು, ಕಾಂಗ್ರೆಸ್ ಮತ್ತು ಎನ್​ಸಿಪಿಯೊಟ್ಟಿಗೆ ಸೇರಿ ಮಹಾ ವಿಕಾಸ್​ ಅಘಾಡಿಯನ್ನು ರಚಿಸಿಕೊಂಡಿತು. ಉದ್ಧವ್ ಠಾಕ್ರೆ ತಮ್ಮ ಆಸೆಯಂತೆ ಮುಖ್ಯಮಂತ್ರಿಯೂ ಆದರು. ಆದರೆ ಮೂರು ಪಕ್ಷಗಳು ಸೈದ್ಧಾಂತಿಕವಾಗಿ ಎಂದಿಗೂ ಒಂದಾಗಲೇ ಇಲ್ಲ. ಈಗ ಶಿವಸೇನೆಯಲ್ಲೇ ಎರಡು ಬಣವಾಗಿ, ಏಕನಾಥ ಶಿಂಧೆ ಬಣ ಬಿಜೆಪಿಯೊಟ್ಟಿಗೆ ಸೇರಿದೆ. ಆದರೆ ಶಿವಸೇನೆ ಉದ್ಧವ್ ಠಾಕ್ರೆ ಬಣ, ಎನ್​ಸಿಪಿ/ಕಾಂಗ್ರೆಸ್​​ನೊಂದಿಗೆ ಸ್ನೇಹ ಮುಂದುವರಿಸಿದೆ.

ಆದರೆ ರಾಹುಲ್ ಗಾಂಧಿ ಪದೇಪದೆ ಸಾವರ್ಕರ್​ರನ್ನು ಟೀಕಿಸುತ್ತಿರುವುದನ್ನು ಉದ್ಧವ್ ಠಾಕ್ರೆ ವಿರೋಧಿಸಿದ್ದಾರೆ. ನಾಶಿಕ್​ ಜಿಲ್ಲೆಯ, ಮುಸ್ಲಿಂ ಬಾಹುಳ್ಯ ಇರುವ ಪ್ರದೇಶವಾದ ಮಾಲೇಗಾಂವ್​​ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಠಾಕ್ರೆ ‘ಬಿಜೆಪಿಯವರು ರಾಹುಲ್ ಗಾಂಧಿಯವರನ್ನು ಬೇಕಂತಲೇ ಪ್ರಚೋದಿಸುತ್ತಿದ್ದಾರೆ. ಆದರೆ ರಾಹುಲ್ ಗಾಂಧಿ ತಾಳ್ಮೆ ಕಳೆದುಕೊಂಡು ಮಾತಾಡಬಾರದು’ ಎಂದಿದ್ದಾರೆ.

‘ನಾನು ರಾಹುಲ್ ಗಾಂಧಿಯವರಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ಈ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವ ಸಲುವಾಗಿ ನಾವು ಮೈತ್ರಿ ಮಾಡಿಕೊಂಡೆವು. ಆದರೆ ಈ ಮೈತ್ರಿಯೇ ಮುರಿದು ಬೀಳುವಂಥ ಮಾತುಗಳನ್ನು ನೀಡು ಆಡುವುದನ್ನು ಬಿಡಿ. ಬಿಜೆಪಿಯವರು ನಿಮ್ಮನ್ನು ಪ್ರಚೋದಿಸುತ್ತಿದ್ದಾರೆ. ಈ ಸಮಯದಲ್ಲಿ ನಾವು ಒಟ್ಟಾಗಿರಬೇಕು. ಸರಿಯಾಗಿ ಇರಬೇಕು. ನಾವೀಗ ಎಡವಿದರೆ ದೇಶದಲ್ಲಿ ಪ್ರಜಾಪ್ರಭುತ್ವ ನಾಶವಾಗಿ, ನಿರಂಕುಶ ಅಧಿಕಾರ ಜಾರಿಯಾಗುತ್ತದೆ. 2024ರ ಲೋಕಸಭೆ ಚುನಾವಣೆಯೇ ಕೊನೆಯಾಗುತ್ತದೆ. ಮುಂದೆ ಯಾವತ್ತೂ ಚುನಾವಣೆ ನಡೆಯುವುದಿಲ್ಲ ಎಂದು ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ.
‘ಸಾವರ್ಕರ್ ಅವರು ನಮಗೆ ದೇವರಿದ್ದಂತೆ. ಅವರನ್ನು ಅವಮಾನಿಸುವುದನ್ನು ನಾವೆಂದೂ ಸಹಿಸಿಕೊಳ್ಳುವುದಿಲ್ಲ. ಸಾವರ್ಕರ್ ಅವರು 14ವರ್ಷಗಳ ಕಾಲ ಅಂಡಮಾನ್ ಜೈಲಿನಲ್ಲಿ ಕಳೆದರು. ಅದೂ ಕೂಡ ಒಂದು ತ್ಯಾಗವೇ ಅಲ್ಲವೇ?’ ಎಂದು ಉದ್ಧವ್ ಠಾಕ್ರೆ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Rahul Gandhi: ಕ್ಷಮೆಯಾಚಿಸಲು ನಾನು ಸಾವರ್ಕರ್‌ ಅಲ್ಲ, ಗಾಂಧಿ; ಅನರ್ಹತೆ ಬಳಿಕ ಕೇಂದ್ರಕ್ಕೆ ರಾಹುಲ್‌ ಚಾಟಿ

2019ರಲ್ಲಿ ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ ಭರದಲ್ಲಿ ‘ಎಲ್ಲ ಕಳ್ಳರ ಉಪನಾಮಗಳೂ ಮೋದಿ ಎಂದೇ ಇರುತ್ತವೆ ಎಂದು ಹೇಳಿದ್ದರು. ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಗುಜರಾತ್ ಶಾಸಕ ಪೂರ್ಣೇಶ್​ ಮೋದಿ ಮಾನನಷ್ಟ ಮೊಕದ್ದಮೆ ಹೂಡಿ, ಆ ಕೇಸ್​​ನಲ್ಲಿ ರಾಹುಲ್ ಗಾಂಧಿಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅದರ ಬೆನ್ನಲ್ಲೇ ಲೋಕಸಭೆ ಸದಸ್ಯನ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ತಾವು ಅನರ್ಹಗೊಂಡ ನಂತರ ಸುದ್ದಿಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ‘ನನ್ನ ವಿರುದ್ಧ ಏನೇ ಹುನ್ನಾರ ಮಾಡಿದರೂ ಹೆದರುವುದಿಲ್ಲ. ಯಾವುದಕ್ಕೂ ಕ್ಷಮೆ ಕೇಳುವುದಿಲ್ಲ. ಕ್ಷಮೆ ಕೇಳಲು ನಾನು ಸಾವರ್ಕರ್ ಅಲ್ಲ, ಗಾಂಧಿ’ ಎಂದಿದ್ದರು. ಅದು ಸಾವರ್ಕರ್​ ಅನುಯಾಯಿಗಳ ಕಣ್ಣು ಕೆಂಪಾಗಿಸಿದೆ.

Exit mobile version