Site icon Vistara News

UGC’s Draft: ಕಾಲೇಜು ವಿದ್ಯಾರ್ಥಿಗಳಿಗೆ ರಾಮಾಯಣ, ಮಹಾಭಾರತದ ಪಾಠ; ಯುಜಿಸಿ ಚಿಂತನೆ

#image_title

ನವದೆಹಲಿ: ಭಾರತವು ಪುರಾತನ ತತ್ವಗಳನ್ನು ನಂಬಿ, ಅನುಸರಿಸುವಂತಹ ರಾಷ್ಟ್ರ. ಈಗಿನ ಎಲ್ಲ ಅಭಿವೃದ್ಧಿಗಳು ಈ ಹಿಂದೆ ರಾಮಾಯಣ, ಮಹಾಭಾರತದ ಕಾಲದಲ್ಲಿಯೇ ಇದ್ದವು ಎನ್ನುವುದು ಅನೇಕರ ವಾದ. ಅದಕ್ಕೆ ಸಾಕ್ಷಿಯೆನ್ನುವಂತೆ ಪ್ರಾಚೀನ ಭಾರತದ ಪಠ್ಯವಾದ ಸುಶ್ರುತ ಸಂಹಿತಾದಲ್ಲಿ ಪ್ಲಾಸ್ಟಿಕ್‌ ಸರ್ಜರಿ ಮತ್ತು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳ ಮೇಲೆ ಪಾಠವಿದೆ. ಹಾಗೆಯೇ ರಾಮಾಯಣ, ಮಹಾಭಾರತದಲ್ಲಿ ಕೃಷಿ ಮತ್ತು ನೀರಾವರಿಯ ಬಗ್ಗೆ ಒತ್ತಿ ಹೇಳಲಾಗಿದೆ. ಇದೀಗ ಈ ಗ್ರಂಥಗಳಲ್ಲಿರುವ ವಿಶೇಷ ವೈಜ್ಞಾನಿಕ ಪಾಠಗಳನ್ನು ಯುಜಿಸಿಯ ಪಠ್ಯಕ್ರಮಕ್ಕೆ ತರುವ ಬಗ್ಗೆ ಚಿಂತನೆ ನಡೆದಿದೆ. ಅದಕ್ಕೆಂದೇ ಭಾರತೀಯ ಜ್ಞಾನ ವ್ಯವಸ್ಥೆಯ ಕೋರ್ಸ್‌ಗಳನ್ನು(ಐಕೆಎಸ್‌) ಪ್ರಾರಂಭಿಸಲು(UGC’s Draft) ಉನ್ನತ ಶಿಕ್ಷಣ ಸಂಸ್ಥೆಗಳಿಗೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಸೂಚಿಸಿದೆ.

ಉನ್ನತ ಶಿಕ್ಷಣ ಪಠ್ಯಕ್ರಮದಲ್ಲಿ ಭಾರತೀಯ ಜ್ಞಾನವನ್ನು ಅಳವಡಿಸಲು ಯುಜಿಸಿ ಗುರುವಾರ ಹೊರಡಿಸಿದ ಕರಡು ಮಾರ್ಗಸೂಚಿಗಳಲ್ಲಿ ಸಲಹೆಗಳನ್ನು ಹೊರಡಿಸಿದೆ. ಅದರಲ್ಲಿ ಎಲ್ಲ ಹಂತದ ಶಿಕ್ಷಣದಲ್ಲಿ ಐಕೆಎಸ್‌ಅನ್ನು ಸೇರಿಸಿಕೊಳ್ಳಲು ಶಿಫಾರಸು ಮಾಡಲಾಗಿದೆ. ಈ ಬಗ್ಗೆ ಸಲಹೆಗಳನ್ನು ಕೊಡಬಹುದು ಎಂದು ಯುಜಿಸಿ ತಿಳಿಸಿದೆ.

ಪದವಿ ಪೂರ್ವ ಅಥವಾ ಸ್ನಾತಕೋತ್ತರ ಪದವಿಗೆ ದಾಖಲಾಗುವ ಪ್ರತಿಯೊಬ್ಬ ವಿದ್ಯಾರ್ಥಿಯು ಒಟ್ಟು ಕ್ರೆಡಿಟ್‌ಗಳಲ್ಲಿ ಕನಿಷ್ಠ ಶೇ.5 ರಷ್ಟನ್ನು ಐಕೆಎಸ್‌ ಕ್ರೆಡಿಟ್‌ ಕೋರ್ಸ್‌ನಿಂದಲೇ ತೆಗೆದುಕೊಳ್ಳಲು ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳು ತಮ್ಮ ಕೋರ್ಸ್‌ಗೆ ಅನುಗುಣವಾಗಿ ಐಕೆಎಸ್‌ ಅನ್ನು ಆರಿಸಿಕೊಳ್ಳುತ್ತಾರೆ. ಉದಾಹರಣೆಗೆ ವೈದ್ಯಕೀಯ ಪದವಿ ಪೂರ್ವ ವಿಭಾಗಕ್ಕೆ ದಾಖಲಾದ ವಿದ್ಯಾರ್ಥಿಗಳು ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿಯ ತಿಳಿವಳಿಕೆ ಸೇರಿದಂತೆ ಇಂಡಿಯನ್ ಸಿಸ್ಟಮ್ಸ್ ಆಫ್ ಮೆಡಿಸಿನ್‌ನಲ್ಲಿ ಕ್ರೆಡಿಟ್ ಕೋರ್ಸ್‌ಗಳನ್ನು ತೆಗೆದುಕೊಳ್ಳಬಹುದು. ಹಾಗೆಯೇ ಗಣಿತಶಾಸ್ತ್ರದಲ್ಲಿ ಪದವಿಪೂರ್ವ ವಿಭಾಗಕ್ಕೆ ಸೇರಿಕೊಳ್ಳುವ ವಿದ್ಯಾರ್ಥಿಗಳು ತಮ್ಮ ವಿಭಾಗಕ್ಕೆ ಸಂಬಂಧಿಸಿದ ಐಕೆಎಸ್‌ ಕೋರ್ಸ್‌ಗಳನ್ನು ತೆಗೆದುಕೊಳ್ಳಬಹುದು.

ಇದನ್ನೂ ಓದಿ: UGC NET 2023 : ಯುಜಿಸಿ-ನೆಟ್‌ ಎಕ್ಸಾಮ್‌ನ ಫಲಿತಾಂಶ ಪ್ರಕಟ
ಕರಡು ಪ್ರತಿಯಲ್ಲಿ ಸೂಚಿಸಲಾದ ಇತರ ವಿಷಯಗಳ ಪೈಕಿ ಲೋಹಗಳು ಮತ್ತು ಲೋಹಗಳು ಕೆಲಸ ಮಾಡುವ ವೈದಿಕ ಉಲ್ಲೇಖಗಳು, ರಾಮಾಯಣ ಮತ್ತು ಮಹಾಭಾರತದಲ್ಲಿ ವಾಸ್ತುಶಿಲ್ಪ ಮತ್ತು ವಸ್ತುಗಳ ಮಹತ್ವ, ವೈದಿಕ ಕಾಲದಿಂದ ವಿವಿಧ ಪ್ರದೇಶಗಳ ಭಕ್ತಿ ಸಂಪ್ರದಾಯಗಳವರೆಗೆ ಭಾರತೀಯ ಧಾರ್ಮಿಕ ಸಂಪ್ರದಾಯಗಳ ಅಡಿಪಾಯದ ಪಠ್ಯಗಳು, ಜೈನ ಸಾಹಿತ್ಯದಲ್ಲಿ ಗಣಿತದ ಸ್ಥಾನ, ಲಲಿತಕಲೆಗಳ ಸ್ವರೂಪ ಮತ್ತು ಉದ್ದೇಶ ಹೀಗೆ ಹಲವು ಸೇರಿಕೊಂಡಿವೆ.

ಅದಲ್ಲದೆಯೇ ಐಕೆಎಸ್‌ ಭಾಗವಾಗಿರುವ ಯಾವುದೇ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್‌ ಮಾಡುವುದಕ್ಕೆ ಅವಕಾಶ ನೀಡಬಹುದು. ಹಾಗೆಯೇ ಸ್ನಾತಕೋತ್ತರ ಪದವಿಯ ಏಳು ಮತ್ತು ಎಂಟನೇ ಸೆಮಿಸ್ಟರ್‌ಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರಾಜೆಕ್ಟ್‌ ಕೆಲಸಕ್ಕೆ ಐಕೆಎಸ್‌ ಸಂಬಂಧಿಸಿದ ವಿಷಯವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಪ್ರೋತ್ಸಾಹಿಸಬಹುದು ಎಂದೂ ಕರಡಿನಲ್ಲಿ ಹೇಳಲಾಗಿದೆ.

Exit mobile version