ಭೋಪಾಲ್: ಮಧ್ಯಪ್ರದೇಶದ ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ ಅವರು ಆಗಾಗ ವಿಶೇಷ ರೀತಿಯಲ್ಲಿ ಪ್ರತಿಭಟನೆಗಳನ್ನು ನಡೆಸಿ ಸುದ್ದಿಯಾಗುತ್ತಿರುತ್ತಾರೆ. ಅದೇ ರೀತಿ ಈ ಬಾರಿ ಅವರು ಮದ್ಯದ ಅಂಗಡಿ ಎದುರೇ ಬೀದಿ ದನಗಳನ್ನು ಕಟ್ಟಿ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: Viral Video: ಪಾಕಿಸ್ತಾನವನ್ನೇ ಪುಡಿಗಟ್ಟುತ್ತಿದ್ದಾರೆ ಭಯೋತ್ಪಾದಕರು; ಕರಾಚಿ ಮಸೀದಿಯ ಮೇಲೆ ಹತ್ತಿ ಮಿನಾರ್ಗಳ ಧ್ವಂಸ
ಒರ್ಛಾ ನಗರದಲ್ಲಿರುವ ಭಾರತೀಯ ನಿರ್ಮಿತ ವಿದೇಶಿ ಮದ್ಯ (ಐಎಂಎಫ್‌ಎಲ್) ಅಂಗಡಿ ಎದುರು ಉಮಾ ಭಾರತಿ ಗುರುವಾರ ಬೀದಿ ದನಗಳನ್ನು ಕಟ್ಟಿ ಹಾಕಿದ್ದಾರೆ. ಅಲ್ಲಿಯೇ ಅವುಗಳಿಗೆ ಮೇವು ಹಾಕಿ, “ಮದ್ಯ ಬಿಡಿ, ಹಾಲು ಕುಡಿ” ಎಂದು ಘೋಷಣೆಗಳನ್ನು ಕೂಗಿದ್ದಾರೆ. ಇದನ್ನು ಕಂಡ ಅಂಗಡಿ ಮಾಲೀಕ ತಕ್ಷಣವೇ ಅಂಗಡಿಯನ್ನು ಮುಚ್ಚಿದ್ದಾನೆ.
ಈ ಹಿಂದೆ 2022ರ ಜೂನ್‌ನಲ್ಲಿಯೂ ಉಮಾ ಭಾರತಿ ಅವರು ಇದೇ ಅಂಗಡಿ ಎದುರು ಪ್ರತಿಭಟನೆ ಮಾಡಿದ್ದು, ಅಂಗಡಿಗೆ ಸಗಣಿ ಎಸೆದಿದ್ದರು. ಅದೇ ಭಯದಿಂದಾಗಿ ಈ ಬಾರಿ ಅಂಗಡಿಯ ಬಾಗಿಲು ಮುಚ್ಚಿದ್ದಾಗಿ ಅಂಗಡಿ ಮಾಲೀಕ ಹೇಳಿಕೊಂಡಿದ್ದಾನೆ. “ಉಮಾ ಅವರು ನಮ್ಮ ಅಂಗಡಿ ಎದುರು ಸೇರಿದ್ದ ಜನರಿಗೆ ಸರ್ಕಾರವು ಮದ್ಯಪಾನ ಮಾಡುವವರಿಗೆ ಪ್ರೋತ್ಸಾಹಿಸಬಾರದು ಎಂದರು. ಹಾಗೆಯೇ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಬಾಬಾ ರಾಮ್‌ದೇವ್ ಅವರ ಸಲಹೆಯನ್ನು ಪಡೆದು ಹೊಸ ಅಬಕಾರಿ ನೀತಿ ರಚಿಸುವುದಾಗಿ ಹೇಳಿದ್ದಾರೆ ಎಂದೂ ಹೇಳಿದರು” ಎಂದು ಅಂಗಡಿಯ ಮಾಲೀಕ ತಿಳಿಸಿದ್ದಾನೆ.