ಲಖನೌ: 2005ರಲ್ಲಿ ಬಿಎಸ್‌ಪಿ ಶಾಸಕ ರಾಜು ಪಾಲ್ ಹತ್ಯೆ ಮಾಡಿದ್ದ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್‌ರನ್ನು (Umesh Pal murder) ಇತ್ತೀಚೆಗೆ ಕಿಡಿಗೇಡಿಗಳು ಕೊಲೆ ಮಾಡಿದ್ದಾರೆ. ಪಾಲ್ ಅವರ ಭದ್ರತೆಗೆಂದು ನಿಯೋಜಿಸಲಾಗಿದ್ದ ಒಬ್ಬ ಪೊಲೀಸ್ ಕಾನ್‌ಸ್ಟೇಬಲ್ ಕೂಡ ದುಷ್ಕರ್ಮಿಗಳ ದಾಳೆ ವೇಳೆ ಸಾವನ್ನಪ್ಪಿದ್ದು, ಇನ್ನೊಬ್ಬ ಕಾನ್‌ಸ್ಟೇಬಲ್ ಅಂದು ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಗಾಯಾಳುವಾಗಿದ್ದ ಕಾನ್‌ಸ್ಟೇಬಲ್ ಕೂಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗಾಯಾಳುವಾಗಿದ್ದ ಅವರು ಲಖನೌದ ಸಂಜಯ್ ಗಾಂಧಿ ಪೋಸ್ಟ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ (SGPGI) ಚಿಕಿತ್ಸೆ ಪಡೆಯುತ್ತಿದ್ದರು.
ಇದನ್ನೂ ಓದಿ: ಉಮೇಶ್ ಪಾಲ್ ಕೊಲೆ ಆರೋಪಿ ಆತೀಖ್ ಸಹವರ್ತಿಗಳ ಮನೆ ನೆಲಸಮ ಮಾಡಿದ ಯುಪಿ ಪೊಲೀಸರು
ಈಗ ಸಾಕ್ಷಿ ಉಮೇಶ್ ಪಾಲ್ ಮತ್ತು ಅವರ ಇಬ್ಬರೂ ಭದ್ರತಾ ಸಿಬ್ಬಂದಿ ದಾಳಿಯಲ್ಲಿ ಪ್ರಾಣ ಕಳೆದುಕೊಂಡಂತಾಗಿದೆ. ಈ ಕೊಲೆಗಳ ಹಿಂದೆ ರಾಜು ಪಾಲ್ ಹತ್ಯೆಯ ಆರೋಪಿ ಅತೀಖ್ ಅಹ್ಮದ್ ಪಾತ್ರ ಇದೆ ಎಂದು ಆರೋಪಿಸಲಾಗಿದೆ. ಉಮೇಶ್ ಪಾಲ್ ಹತ್ಯೆಯ ಒಬ್ಬ ಆರೋಪಿಯನ್ನು ಪೊಲೀಸರು ಪ್ರಯಾಗ್‌ರಾಜ್‌ನಲ್ಲಿ ಸೋಮವಾರ ಎನ್‌ಕೌಂಟರ್ ಮಾಡಿದ್ದಾರೆ. ಹಾಗೆಯೇ ನನ್ನನ್ನೂ ಎನ್‌ಕೌಂಟರ್ ಮಾಡಿಬಿಡುತ್ತಾರೆ ಎನ್ನುವ ಭಯದಿಂದ ಅತೀಖ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾನೆ.
ರಾಜು ಪಾಲ್ ಕೊಲೆ ಆರೋಪದಲ್ಲಿ ಗುಜರಾತ್ ಜೈಲಿನಲ್ಲಿರುವ ಅತೀಖ್‌ನನ್ನು ಪೊಲೀಸರು ಪ್ರಯಾಗ್‌ರಾಜ್‌ಗೆ ಕರೆದುಕೊಂಡು ಹೋಗಲಿದ್ದಾರೆ. ಈ ವೇಳೆ ಪೊಲೀಸರು ನನ್ನನ್ನು ನಕಲಿ ಎನ್‌ಕೌಂಟರ್ ಮಾಡಿ ಸಾಯಿಸುವ ಸಾಧ್ಯತೆಯಿದೆ ಎಂದು ಅತೀಖ್ ಹೇಳಿಕೊಂಡಿದ್ದಾನೆ. ಹಾಗಾಗಿ ನನಗೆ ರಕ್ಷಣೆ ಕೊಡಿ ಎಂದು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾನೆ.
ಇದನ್ನೂ ಓದಿ: Prayagraj Encounter: ಉತ್ತರ ಪ್ರದೇಶದಲ್ಲಿ ಉಮೇಶ್ ಪಾಲ್ ಹತ್ಯೆ ಆರೋಪಿ ಅರ್ಬಾಜ್ ಖಾನ್ ಎನ್‌ಕೌಂಟರ್
ಅತೀಖ್ ಅಹ್ಮದ್‌ನ ಸಹಾಯಕನ ಮನೆಯನ್ನು ಪ್ರಯಾಗ್‌ರಾಜ್‌ನ ನಗರಸಭೆ ಅಧಿಕಾರಿಗಳು ಬುಧವಾರದ ಉರುಳಿಸಿದ್ದಾರೆ. ನಾಗರಿಕ ಕಾನೂನು ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಮನೆ ಉರುಳಿಸಿರುವುದಾಗಿ ಅವರು ತಿಳಿಸಿದ್ದಾರೆ. ಈ ಎಲ್ಲ ಬೆಳವಣಿಗೆ ಅತೀಕ್‌ನ ಭಯಕ್ಕೆ ಕಾರಣವಾಗಿದೆ.