ನವ ದೆಹಲಿ: ನೂಪುರ್ ಶರ್ಮಾ (Nupur Sharma) ಪ್ರವಾದಿ ಮೊಹಮ್ಮದ್ ವಿರುದ್ಧ ನೀಡಿದ ಹೇಳಿಕೆ ಜಾಗತಿಕ ಟ್ರೆಂಡ್ ಆಗಿರುವ ಬೆನ್ನಲ್ಲೇ ವಿಶ್ವ ಸಂಸ್ಥೆ ಕೂಡ ಈಗ ಈ ಬಗ್ಗೆ ಮಾತನಾಡಿದೆ. ಸುದ್ದಿಗೋಷ್ಠಿಯೊಂದರಲ್ಲಿ ಪಾಕಿಸ್ತಾನದ ಪತ್ರಕರ್ತನೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಶ್ವ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರ ಪರ ವಕ್ತಾರ ಸ್ಟೀಫನ್ ಡುಜಾರಿಕ್, ʼವಿಶ್ವಸಂಸ್ಥೆಯು ಎಲ್ಲ ಧರ್ಮಗಳಿಗೆ ಗೌರವ ನೀಡುವುದನ್ನು ಮತ್ತು ಸಹಿಷ್ಣುತೆಯನ್ನು ಬೆಂಬಲಿಸುತ್ತದೆ. ಏನಾಯಿತು ಎಂದು ನಮಗೆ ಗೊತ್ತಾಗಿದೆ. ಆದರೆ ಹೇಳಿಕೆಗಳಿಗೆ ವ್ಯಕ್ತವಾಗುತ್ತಿರುವ ಟೀಕೆ, ವಿರೋಧಗಳ ಬಗ್ಗೆ ಇನ್ನೂ ಸ್ಪಷ್ಟವಾಗಿ ಗೊತ್ತಾಗಿಲ್ಲ. ಅದೇನೇ ಇದ್ದರೂ, ನಾವು ಸಕಲ ಧರ್ಮಗಳ ಸಹಿಷ್ಣುತೆಯನ್ನು ಮಾತ್ರ ಪ್ರೋತ್ಸಾಹಿಸುತ್ತೇವೆʼ ಎಂದಿದ್ದಾರೆ. ಬಿಜೆಪಿ ಮಾಜಿ ನಾಯಕಿ ನೂಪುರ್ ಶರ್ಮಾ ಹೇಳಿಕೆ ಮತ್ತು ಅದಕ್ಕೆ ಪಾಕಿಸ್ತಾನ, ಅಫ್ಘಾನಿಸ್ತಾನ, ಅರಬ್ ರಾಷ್ಟ್ರಗಳು, ಯುಎಇ ಸೇರಿ ಮುಸ್ಲಿಂ ರಾಷ್ಟ್ರಗಳಿಂದ ವ್ಯಕ್ತವಾಗುತ್ತಿರುವ ತೀವ್ರ ಖಂಡನೆ ಬಗ್ಗೆ ಪಾಕಿಸ್ತಾನಿ ಪತ್ರಕರ್ತನೊಬ್ಬ ಸ್ಟೀಫನ್ ಡುಜಾರಿಕ್ ಬಳಿ ಪ್ರಶ್ನಿಸಿದ್ದ. ಅದಕ್ಕೆ ಸ್ಟೀಫನ್ ತುಂಬ ವಿವರಣೆ ಕೊಡಲಿಲ್ಲ ಎಂದು ಹೇಳಲಾಗಿದೆ.
ಮಹಾರಾಷ್ಟ್ರ ಪೊಲೀಸರಿಂದ ಸಮನ್ಸ್
ಪ್ರವಾದಿ ಮೊಹಮ್ಮದರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ ನೂಪುರ್ ಶರ್ಮಾ ವಿರುದ್ಧ ಈಗಾಗಲೇ ಹಲವು ಠಾಣೆಗಳಲ್ಲಿ ಎಫ್‌ಐಆರ್ ದಾಖಲಾಗಿದೆ. ಇದೆಲ್ಲದರ ಮಧ್ಯೆ ಮಹಾರಾಷ್ಟ್ರದ ಮುಂಬ್ರಾ ಠಾಣೆ ಪೊಲೀಸರು ಆಕೆಗೆ ಸಮನ್ಸ್ ನೀಡಿದ್ದು, ಜೂ.22ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಜೂ.22ರಂದು ನೂಪುರ್ ಶರ್ಮಾ ಪೊಲೀಸರ ಎದುರು ಹಾಜರಾಗಿ ಹೇಳಿಕೆ ನೀಡಬೇಕಾಗಿದೆ.
ಹೀಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರುದ್ಧ ಟೀಕೆ ವ್ಯಕ್ತವಾಗುತ್ತಿರುವ ಬೆನ್ನಲ್ಲ ನೂಪುರ್ ಶರ್ಮಾ ಮತ್ತು ಮುಸ್ಲಿಂ ಧರ್ಮದ ಬಗ್ಗೆ ಅವಹೇಳನಕಾರಿ ಟ್ವೀಟ್ ಮಾಡಿ ಉಚ್ಚಾಟನೆಗೊಂಡ ದೆಹಲಿ ಬಿಜೆಪಿ ಮಾಜಿ ಮಾಧ್ಯಮ ಉಸ್ತುವಾರಿ ನವೀನ್ ಕುಮಾರ್ ಜಿಂದಾಲ್ ಇಬ್ಬರೂ ಸಹ ಈಗಾಗಲೇ ಕ್ಷಮಾಪಣೆ ಕೇಳಿದ್ದಾರೆ. ಆದರೆ ಇದೊಂದು ಸಡಿಪಡಿಸಲಾಗದ ತಪ್ಪೆಂಬಂತಾಗಿದ್ದು, ಇವರಿಬ್ಬರಿಂದಾಗಿ ಇಡೀ ಭಾರತವನ್ನೇ ದೂಷಿಸಲಾಗುತ್ತಿದೆ. ಈ ಮಧ್ಯೆ ನೂಪುರ್ ಅವರಿಗೆ ಬರುತ್ತಿರುವ ಜೀವ ಬೆದರಿಕೆ ಹೆಚ್ಚಾಗಿದ್ದು ದೆಹಲಿ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.
ಇದನ್ನೂ ಓದಿ: ನೂಪುರ್ ಶರ್ಮಾಗೆ ಸಂಕಷ್ಟ; ರಕ್ಷಿಸಿ ಎಂದು ದೆಹಲಿ ಪೊಲೀಸ್ ಮೊರೆ ಹೋದ ಬಿಜೆಪಿ ಮಾಜಿ ವಕ್ತಾರೆ