ಪಟನಾ: ದಾರಿಯಲ್ಲಿ ಅನಾಥವಾಗಿ ಬಿದ್ದ ೧೦ ರೂ. ಹೆಕ್ಕಲೂ ಹತ್ತು ಸಾರಿ ಹಿಂದೆ ಮುಂದೆ ನೋಡುವ ಜನರ ದೊಡ್ಡ ವರ್ಗವೇ ಇದೆ. ಆದರೆ, ಕೆಲವರು ಮಾತ್ರ ಕಂಡಲ್ಲೆಲ್ಲ ಹಣ ಬಾಚಿಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತಾರೆ. ಬಿಹಾರದ ಪಟನಾದಲ್ಲಿ ಡ್ರಗ್ ಕಂಟ್ರೋಲರ್ ಆಗಿರುವ ಜಿತೇಂದ್ರ ಕುಮಾರ್ ಅವರದ್ದು ಒಂಥರಾ Uncontrolled ಭ್ರಷ್ಟಾಚಾರ.
ಬಿಹಾರದ ಜಾಗೃತ ತನಿಖಾ ದಳ (ವಿಐಬಿ)ಕ್ಕೆ ಜಿತೇಂದ್ರ ಕುಮಾರ್ ಅವರ ಲಂಚಾವತಾರದ ಬಣ್ಣ ಬಣ್ಣದ ಕಥೆಗಳನ್ನು ಕೇಳಿಕೊಂಡು ದಾಳಿ ನಡೆಸಿತ್ತು. ಆಗ ಕಂಡ ಹಣವನ್ನು ಕಂಡ ಅವರೇ ಬೆಚ್ಚಿ ಬಿದ್ದಿದ್ದಾರಂತೆ.
ಜಿತೇಂದ್ರ ಕುಮಾರ್‌ಗೆ ಸೇರಿದ ನಾಲ್ಕು ಕಡೆಗಳಿಗೆ ದಾಳಿ ನಡೆಸಿದಾಗ ಅಂತಿಮವಾಗಿ ಸಿಕ್ಕಿದ ಹಣ, ಒಡವೆಯ ಪ್ರಮಾಣ ಕೇಳಿದರೆ ತಲೆ ತಿರುಗುತ್ತದೆ. ಒಟ್ಟು ಮೂರು ಕೋಟಿ ರೂ. ನೇರ ನಗದಿನ ರೂಪದಲ್ಲೇ ಸಿಕ್ಕಿದೆಯಂತೆ. ಒಂದು ಕೆಜಿ ಚಿನ್ನ ಮತ್ತು ಬೆಳ್ಳಿಯ ಆಭರಣಗಳಿದ್ದವು. ಐದು ಐಷಾರಾಮಿ ಕಾರುಗಳು, ಹಲವಾರು ಆಸ್ತಿಗಳ ದಾಖಲೆಪತ್ರಗಳು, ನೂರಾರು ಹೂಡಿಕೆ ಪತ್ರಗಳು, ಬ್ಯಾಂಕ್ ಪಾಸ್ ಬುಕ್‌ಗಳು, ಇನ್ನೂ ಏನೇನೋ ದಾಖಲೆಗಳು ವಶವಾಗಿವೆ.
ಗೊತ್ತಾದ ಆದಾಯ ಮೂಲಕ್ಕಿಂತ ಹೆಚ್ಚಿನ ಆಸ್ತಿಪಾಸ್ತಿ ಸಂಗ್ರಹದ ಕೇಸು ದಾಖಲಿಸಿಕೊಂಡ ಜಾಗೃತ ದಳದ ಅಧಿಕಾರಿಗಳು ಜೆಹನಾಬಾದ್‌ನ ಘೋನ್ಸಿಯ ಮೂಲ ಮನೆ, ಗಯಾ ಜಿಲ್ಲೆಯ ಸಿವಿಲ್ ಲೈನ್ಸ್, ಫಾರ್ಮಸಿ ಕಾಲೇಜು, ಗೋಲಾ ರೋಡ್‌ನಲ್ಲಿರುವ ಫ್ಲ್ಯಾಟ್‌ಗಳು, ಖಾನಾ ಮಿರ್ಜಾ ಪ್ರದೇಶದಲ್ಲಿ ಹೊಸದಾಗಿ ಕಟ್ಟಿಸಿದ ಮನೆಗಳಿಗೆ ರೇಡ್ ಮಾಡಲಾಗಿದೆ.
ಕೇವಲ ೧೧ ವರ್ಷದ ಕಮಾಯಿ!
ಅಂದ ಹಾಗೆ ಜಿತೇಂದ್ರ ಅವರು ಉದ್ಯೋಗಕ್ಕೆ ಸೇರಿ ತುಂಬಾ ವರ್ಷವೇನೂ ಆಗಿಲ್ಲ. ೨೦೧೧ರಲ್ಲಿ ಮೊದಲ ನೇಮಕ. ಅಂದರೆ ಕೇವಲ ೧೧ ವರ್ಷದಲ್ಲಿ ಇಷ್ಟೆಲ್ಲ ಆಸ್ತಿ, ಹಣ ಸಂಗ್ರಹ ಆಗಿದೆ. ಪ್ರಸಕ್ತ ಪಟನಾದಲ್ಲಿ ಉದ್ಯೋಗಿಯಾಗಿರುವ ಅವರು ಒಂದು ಫಾರ್ಮಸಿ ಕಾಲೇಜನ್ನೂ ನಡೆಸುತ್ತಿದ್ದಾರೆ. ಮನೆಯಲ್ಲಿ ಇನ್ನೂ ಅನೇಕ ದಾಖಲೆ ಪತ್ರಗಳು ಸಿಕ್ಕಿದ್ದು, ಅವುಗಳ ಪರಿಶೀಲನೆ ವೇಳೆ ಇನ್ನಷ್ಟು ಅಕ್ರಮ ಸಂಪತ್ತು ಬಯಲಾಗುವ ನಿರೀಕ್ಷೆ ಇದೆ.
ದೂರು ಬಂದಿದ್ದು ಎಲ್ಲಿಂದ?
ಜಿತೇಂದ್ರ ವಿರುದ್ಧ ಮೂಲ ದೂರು ಬಂದಿದ್ದು ಫಾರ್ಮಾ ಕಂಪನಿಗಳಿಂದ. ಆತ ಫೈಲ್ ಕ್ಲಿಯರ್ ಮಾಡಲು ವಿದೇಶ ಪ್ರವಾಸದ ಏರ್ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದಾನೆ ಎಂದು ಕೆಲವು ಫಾರ್ಮಾ ಕಂಪನಿಗಳು ದೂರಿದ್ದವು. ಅವನು ಮೆಡಿಕಲ್ ಶಾಪ್‌ಗಳನ್ನೂ ಬಿಡದೆ ಹಣಕ್ಕೆ ಬೇಡಿಕೆ ಇಡುತ್ತಿದ್ದನಂತೆ.
ಇದೆಲ್ಲದರ ಆಧಾರ ಇಟ್ಟುಕೊಂಡು ದಾಳಿ ನಡೆಸಲಾಗಿದೆ. ಪಟನಾದ ಮನೆಗೆ ದಾಳಿ ನಡೆಸಿ ಒಂದು ಕಪಾಟು ತೆರೆದು ನೋಡಿದರೆ ಅದರಲ್ಲಿ ಐದು ಮೂಟೆ ಹಣ ಸಿಕ್ಕಿತಂತೆ. ಅಧಿಕಾರಿಗಳು ಅವುಗಳನ್ನೆಲ್ಲ ಹಾಸಿಗೆ ಮೇಲೆ ಹಾಸಿ ಲೆಕ್ಕ ಹಾಕಬೇಕಾಯಿತಂತೆ. ನಿಜವೆಂದರೆ ಅಧಿಕಾರಿಗಳು ಹಣ ಲೆಕ್ಕ ಮಾಡುವ ಮೆಷಿನ್ ತೆಗೆದುಕೊಂಡು ಹೋಗಿದ್ದರು. ಆದರೆ, ಅದು ಸಾಲದೆ ಇನ್ನೂ ಎರಡು ಮೆಷಿನ್ ತರಿಸಿಕೊಂಡರಂತೆ.
ಇದೀಗ ಅಧಿಕಾರಿಗಳು ಹಾಸಿಗೆ ಮೇಲೆ ಹಾಸಿರುವ ಹಣದ ಕಂತೆಗಳ ಚಿತ್ರವನ್ನು ಬಿಡುಗಡೆ ಮಾಡಿದ್ದು ನೋಡಿದವರೆಲ್ಲ ಅಬ್ಬಬ್ಬಾ ಅಂತ ಕಣ್‌ಕಣ್ ಬಿಡುತ್ತಿದ್ದಾರೆ.
ಇದನ್ನೂ ಓದಿ ACB raid roundup | ಗಾರ್ಡನರ್ 100 ಕೋಟಿ ಕುಳ, ಹಲವರ ಮನೆಯಲ್ಲಿ ಸಿಕ್ತು ಕೆ.ಜಿ ಕೆ.ಜಿ ಚಿನ್ನ!