ನವ ದೆಹಲಿ: 1947ರಿಂದ ಈಚೆಗೆ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಬೆಳೆಯುತ್ತಿದ್ದರೆ, ಅತ್ತ ಪಾಕಿಸ್ತಾನದಲ್ಲಿ ಅಲ್ಲಿನ ಅಲ್ಪಸಂಖ್ಯಾತರು ನಶಿಸುತ್ತಿದ್ದಾರೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ವಾಷಿಂಗ್ಟನ್ ಡಿಸಿಯಲ್ಲಿರುವ ಪೀಟರ್ಸನ್ ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಎಕನಾಮಿಕ್ಸ್ನಲ್ಲಿ ಮಾತನಾಡುವಾಗ ‘ಭಾರತದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ಮತ್ತು ಭಾರತದ ಬಗ್ಗೆ ಪಾಶ್ಚಾತ್ಯರಿಗೆ ಇರುವ ಋಣಾತ್ಮಕ ಗ್ರಹಿಕೆಗಳು’ ಎಂಬ ವಿಷಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್ ‘ವಿಶ್ವದಲ್ಲೇ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದ ಎರಡನೇ ದೊಡ್ಡ ದೇಶ ಭಾರತ. ಆ ಸಂಖ್ಯೆಯಿನ್ನೂ ಬೆಳೆಯುತ್ತಲೇ ಇದೆ. ಭಾರತದಲ್ಲಿ ಮುಸ್ಲಿಮರ ಜೀವನ ಕಷ್ಟ, ಅವರ ಮೇಲೆ ದೌರ್ಜನ್ಯ ನಡೆಯುತ್ತಿರುವುದೇ ನಿಜವಾಗಿದ್ದರೆ 1947ರ ನಂತರ ಭಾರತದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿತ್ತೇ? ಕಡಿಮೆಯಾಗಬೇಕಿತ್ತಲ್ಲವೇ? ಎಂದು ಪ್ರಶ್ನಿಸಿದರು.
ಅದರಾಚೆ ಪಾಕಿಸ್ತಾನದಲ್ಲಿ ಎಲ್ಲ ಅಲ್ಪಸಂಖ್ಯಾತರ ಸಂಖ್ಯೆಯೂ ಕ್ಷೀಣಿಸುತ್ತಿದೆ. ಬರೀ ಅಲ್ಪಸಂಖ್ಯಾತರಷ್ಟೇ ಅಲ್ಲ, ಮುಸ್ಲಿಂ ಜನಾಂಗದ ಕೆಲ ಪಂಗಡಗಳೇ ಇಲ್ಲವಾಗುತ್ತಿವೆ. ಆದರೆ ಭಾರತದಲ್ಲಿ ಹಾಗಲ್ಲ, ಎಲ್ಲ ವಿಭಾಗದ ಮುಸ್ಲಿಮರೂ ಕೂಡ ಅವರವರ ಉದ್ಯೋಗ ಮಾಡುತ್ತಿದ್ದಾರೆ. ಅವರ ಮಕ್ಕಳು ಶಿಕ್ಷಣವಂತರಾಗುತ್ತಿದ್ದಾರೆ ಅವರಿಗೆ ಬೇಕಾದಂತೆ ಬದುಕುತ್ತಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಈ ಮೂಲಕ ‘ಭಾರತದ ಬಗ್ಗೆ ಪಾಶ್ಚಿಮಾತ್ಯರಿಗೆ ಇರುವ ಋಣಾತ್ಮಕತೆ ಬಗೆಗಿನ ಪ್ರಶ್ನೆಗೆ ಉತ್ತರಿಸಿದರು. ಅಷ್ಟೇ ಅಲ್ಲ, ‘ಪಾಶ್ಚಿಮಾತ್ಯರು ಭಾರತಕ್ಕೆ ಬರಬೇಕು. ಇಲ್ಲೇ ಕುಳಿತು ಭಾರತದಲ್ಲಿ ಹಾಗಾಗುತ್ತಿದೆಯಂತೆ, ಹೀಗಾಗುತ್ತಿದೆಯಂತೆ ಎಂದು ಊಹಿಸುತ್ತ, ಕೇಳಿದ್ದನ್ನು, ಎಲ್ಲೆಲ್ಲೋ ಬರೆದಿದ್ದನ್ನು ನಂಬುವ ಬದಲು, ಅಲ್ಲಿಗೆ ಬಂದು ಏನಾಗುತ್ತಿದೆ ಎಂದು ನೋಡಬೇಕು’ ಎಂದು ತಿಳಿಸಿದರು.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಸಮತೋಲಿತ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್
ಕೊವಿಡ್ 19 ಸಾಂಕ್ರಾಮಿಕದ ನಂತರ ಭಾರತದ ಆರ್ಥಿಕತೆ ಹೇಗಿದೆ ಎಂಬ ಬಗ್ಗೆ ಮಾತನಾಡಿದ ನಿರ್ಮಲಾ ಸೀತಾರಾಮನ್ ‘ಎಂಥ ಸಾಂಕ್ರಾಮಿಕ, ಕಠಿಣ ಪರಿಸ್ಥಿತಿ ಬರಲಿ, ಮನೆಯಲ್ಲೇ ದುರಂತ ನಡೆಯಲಿ ಅದೆಲ್ಲವನ್ನೂ ಮೀರಿ, ಮನೆಯಿಂದ ಹೊರಬಂದು ಸವಾಲನ್ನು ಸ್ವೀಕರಿಸಿ ತಮ್ಮ ತಮ್ಮ ಉದ್ಯಮಗಳನ್ನು ಮಾಡುವ ಸ್ಥಿತಿಸ್ಥಾಪಕತ್ವ ಗುಣ ಭಾರತೀಯರಿಗೆ ರಕ್ತದಲ್ಲೇ ಇದೆ. ಹೀಗಾಗಿ ಆರ್ಥಿಕತೆಯೂ ಬೆಳವಣಿಗೆಯಾಗುತ್ತಿದೆ ಎಂದು ಅವರು ಹೇಳಿದರು.