ನವ ದೆಹಲಿ: ಜೈಲಿನಲ್ಲಿರುವ ಕೈದಿಗಳಿಗೆ ಆಧಾರ್ ದೃಢೀಕರಣ ಮಾಡುವ (Aadhaar authentication) ಅಧಿಕಾರವನ್ನು ಕೇಂದ್ರ ಸರ್ಕಾರದ ಗೃಹ ಇಲಾಖೆ, ರಾಜ್ಯ ಸರ್ಕಾರಗಳಿಗೆ ನೀಡಿದೆ. ಕೈದಿಗಳಿಗೆ ಆರೋಗ್ಯ, ಕೌಶಲ, ವೃತ್ತಿಪರ ತರಬೇತಿ, ಕಾನೂನು ನೆರವು, ಸಂಬಂಧಿಕರೊಂದಿಗೆ ಮಾತುಕತೆ ಮತ್ತು ಇತ್ಯಾದಿ ಸೇವೆ-ಅನುಕೂಲತೆಗಳನ್ನು ನೀಡುವ ಸಲುವಾಗಿ ಈ ಆಧಾರ್ ದೃಢೀಕರಣ ಮಾಡಬೇಕು ಎಂದು ಗೃಹ ಇಲಾಖೆ ಹೇಳಿದೆ. ಹಾಗಂತ ಇದು ಕಡ್ಡಾಯವಲ್ಲ. ಕೈದಿಗಳು ಸ್ವಯಂ ಪ್ರೇರಿತರಾಗಿ ಈ ಆಧಾರ್ ದೃಢೀಕರಣಕ್ಕೆ ಒಳಪಡಬಹುದು (Aadhaar authentication of prison inmates) ಎಂದು ಹೇಳಲಾಗಿದೆ.
ಈ ಹಿಂದೆ ಕೈದಿಗಳ ಆಧಾರ್ ದೃಢೀಕರಣ ಅಧಿಕಾರ ಕೇಂದ್ರ ಗೃಹ ಇಲಾಖೆ ಕೈಯಲ್ಲಿ ಇತ್ತು. ಉತ್ತಮ ಆಡಳಿತಕ್ಕಾಗಿ (ಸಾಮಾಜಿಕ ಕಲ್ಯಾಣ, ನಾವೀನ್ಯತೆ, ಜ್ಞಾನ) ಆಧಾರ್ ದೃಢೀಕರಣ ನಿಯಮಗಳು 2020 ಮತ್ತು ಆಧಾರ್ (ಹಣಕಾಸು ಮತ್ತು ಇತರ ಸಬ್ಸಿಡಿ, ಅನುಕೂಲತೆಗಳು ಮತ್ತು ಸೇವೆಗಳ ಉದ್ದೇಶಿತ ಬಟವಾಡೆ) ಕಾಯ್ದೆ 2016ರಡಿಯಲ್ಲಿ ಈ ಅಧಿಕಾರವನ್ನು ಕೇಂದ್ರ ಸರ್ಕಾರ ತನ್ನ ಗೃಹಸಚಿವಾಲಯಕ್ಕೆ ನೀಡಿತ್ತು. ಈಗ ಗೃಹ ಇಲಾಖೆ ಕೈದಿಗಳ ಆಧಾರ್ ದೃಢೀಕರಣ ಅಧಿಕಾರವನ್ನು ಆಯಾಯಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೇ ವಹಿಸಿಕೊಟ್ಟಿದೆ. ‘Yes’ /‘No’ ಉತ್ತರವನ್ನು ನೀಡುವ ಸ್ವರೂಪದ ಪ್ರಶ್ನೆಗಳ ಮೂಲಕ ಕೈದಿಗಳ ಆಧಾರ್ ದೃಢೀಕರಿಸಬೇಕು ಎಂದು ಹೇಳಿದೆ.
ಇದನ್ನೂ ಓದಿ: Aadhaar : ಆಧಾರ್ ದೃಢೀಕರಣಕ್ಕೆ ಮುನ್ನ ವ್ಯಕ್ತಿಯ ಒಪ್ಪಿಗೆ ಪಡೆಯಲು ಸೂಚನೆ
ಈ ಬಗ್ಗೆ ಸೋಮವಾರ ಗೃಹ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆಯಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಜೈಲು ಆಡಳಿತಗಳು ಜವಾಬ್ದಾರಿಯಿಂದ ಈ ಕಾರ್ಯ ನಿರ್ವಹಿಸಬೇಕು. ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾದ ಎಲ್ಲ ನಿಯಮಗಳನ್ನೂ ಪಾಲಿಸಬೇಕು ಎಂದು ತಿಳಿಸಿದೆ. ಕೈದಿಗಳು ತಮ್ಮನ್ನು ತಾವು ಇನ್ನಷ್ಟು ಸುಧಾರಣೆಗೊಳಿಸಿಕೊಂಡು, ಅರಿವು ಮೂಡಿಸಿಕೊಳ್ಳಲು ಅಗತ್ಯವಿರುವ ಸೇವೆ ಪಡೆದುಕೊಳ್ಳಲು ಈ ಆಧಾರ್ ದೃಢೀಕರಣ ಅತ್ಯಂತ ಅಗತ್ಯ ಎಂದು ಹೇಳಿದೆ.