ಪಾಟ್ನಾ: ಕೇಂದ್ರ ಸಚಿವ ಅಶ್ವಿನಿ ಚೌಬೆ ಅವರ ಬೆಂಗಾವಲಿಗೆ ಇದ್ದ ಪೊಲೀಸ್ ವಾಹನವೊಂದು ಪಲ್ಟಿಯಾಗಿ ಬಿದ್ದು, ಹಲವು ಪೊಲೀಸರು ಗಾಯಗೊಂಡಿದ್ದಾರೆ. ಅದರಲ್ಲೂ ಇಬ್ಬರು ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಪೊಲೀಸ್ ವಾಹನ ಸಣ್ಣದೊಂದು ಕಂದಕಕ್ಕೆ ಬಿದ್ದಿರುವ ವಿಡಿಯೊ ವೈರಲ್ ಆಗಿದೆ. ಸಚಿವ ಅಶ್ವಿನಿ ಚೌಬೆ ಅವರೂ ಆ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.
ಕೇಂದ್ರ ಸಚಿವರು ಬುಕ್ಸಾರ್ ನಿಂದ ಪಾಟ್ನಾಕ್ಕೆ ಹೋಗುತ್ತಿದ್ದರು. ಈ ವೇಳೆ ಮಥಿಲಾ-ನಾರಾಯಣಪುರ ರಸ್ತೆಯ ಧುಮ್ರಾವೋ ಸೇತುವೆ ಬಳಿ ಈ ವಾಹನ ನಿಯಂತ್ರಣ ತಪ್ಪಿ, ಪಕ್ಕದಲ್ಲೇ ಇರುವ ಸಣ್ಣ ಕಾಲುವೆಗೆ ಉರುಳಿದೆ. ಇದು ಕೊರನ್ಸಾರಾಯ್ ಠಾಣೆಗೆ ಸೇರಿದ ವಾಹನ ಎನ್ನಲಾಗಿದೆ.
ಬೆಂಗಾವಲು ಪೊಲೀಸ್ ವಾಹನ ಪಲ್ಟಿಯಾಗುತ್ತಿದ್ದಂತೆ, ಕೇಂದ್ರ ಸಚಿವರು ತಮ್ಮ ಕಾರು ನಿಲ್ಲಿಸಿ ಕೆಳಗೆ ಇಳಿದು ಬಂದಿದ್ದಾರೆ. ‘ನಿಮ್ಮ ಸಹೋದ್ಯೋಗಿಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ’ ಎಂದು ಅಲ್ಲಿಯೇ ಇದ್ದ ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ಆ ವಿಡಿಯೊವನ್ನು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Accident Case : ಕಾರು-ಬೈಕ್ ನಡುವೆ ಅಪಘಾತ; ಬೈಕ್ ಸವಾರನಿಗೆ ಗಂಭೀರ ಗಾಯ