ನವದೆಹಲಿ: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆ ರಾಜ್ಯ ಸಚಿವ ಕೌಶಲ್ ಕಿಶೋರ್ (Kaushal Kishore) ಅವರು, ತಾವು 22 ಕೆಜಿ ತೂಕ ಇಳಿಸಿಕೊಂಡಿದ್ದಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಆರೋಗ್ಯಕರ ಡಯೆಟ್ ಮೂಲಕ ತೂಕ ಇಳಿಸಿಕೊಂಡಿದ್ದೇನೆ, ಈಗ ಮೊದಲಿಗಿಂತಲೂ ಫಿಟ್ ಆಗಿ, ಆರೋಗ್ಯವಾಗಿ ಇದ್ದೇನೆ ಎಂದು ಅವರು ಹೇಳಿದ್ದಾರೆ. ಹಾಗೇ, ಮೊದಲು 96 ಕೆಜಿ ಇದ್ದಾಗಿನ ಮತ್ತು ಈಗ 74 ಕೆಜಿ ಆದಾಗಿನ ಫೋಟೋಗಳನ್ನು ಕೊಲ್ಯಾಜ್ ಮಾಡಿ ಹಂಚಿಕೊಂಡು, ‘2021ರಲ್ಲಿ ನಾನು 96 ಕೆಜಿ ತೂಕ ಇದ್ದೆ. ತೂಕ ಇಳಿಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದರು. ಹಾಗೇ, ಅವರ ಶಿಫಾರಸ್ಸಿನ ಮೇಲೆ ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಆಸ್ಪತ್ರಗೆ ದಾಖಲಾದೆ. ಅಲ್ಲಿನ ವೈದ್ಯರು ನನಗೆ ಕೆಲ ಚಿಕಿತ್ಸೆಗಳನ್ನು ನೀಡಿ, ನಿಯಮಿತ ಆಹಾರಕ್ರಮ ಸೂಚಿಸಿದರು. ಅದನ್ನು ಪಾಲಿಸುತ್ತ ಬಂದೆ, 22 ಕೆಜಿ ತೂಕ ನಷ್ಟವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಕಳೆದ ವರ್ಷ ಬಿಜೆಪಿ ಸಂಸದ ಅನಿಲ್ ಫಿರೋಜಿಯಾ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಸವಾಲು ಸ್ವೀಕರಿಸಿ 32 ಕೆಜಿ ತೂಕ ಕಳೆದುಕೊಂಡಿದ್ದರು. ಅನಿಲ್ ಫಿರೋಜಿಯಾ ಒಟ್ಟಾರೆ 127 ಕೆಜಿ ಇದ್ದರು. 2022ರ ಫೆಬ್ರವರಿಯಲ್ಲಿ ಒಮ್ಮೆ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿದ್ದಾಗ, ಅನಿಲ್ ತೂಕದ ಬಗ್ಗೆ ಗಡ್ಕರಿ ಮಾತನಾಡಿದ್ದರು. ‘ನಿಮ್ಮ ತೂಕ ತುಂಬ ಹೆಚ್ಚಾಯಿತು. ನೀವು ತೂಕ ಇಳಿಸಿಕೊಳ್ಳಿ. ನೀವು ಇಳಿಸುವ ಪ್ರತಿ ಕೆಜಿಗೆ ನಮ್ಮ ಸಚಿವಾಲಯದಿಂದ 1000 ಕೋಟಿ ರೂಪಾಯಿ ಕೊಡುತ್ತೇನೆ. ಒಟ್ಟಾರೆ ಎಷ್ಟು ಕೆಜಿ ಇಳಿಸುತ್ತೀರೋ, ಅಷ್ಟು ಸಾವಿರ ಕೋಟಿ ರೂಪಾಯಿಯನ್ನು ನಿಮ್ಮ ಲೋಕಸಭಾ ಕ್ಷೇತ್ರಕ್ಕೆ ನಮ್ಮ ಸಚಿವಾಲಯದಿಂದ ಬಿಡುಗಡೆ ಮಾಡುತ್ತೇವೆ. ಇದರಿಂದ ನಿಮ್ಮ ಕ್ಷೇತ್ರದಲ್ಲೂ ರಸ್ತೆ-ಹೆದ್ದಾರಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಕೊಳ್ಳಬಹುದು’ ಎಂದು ಹೇಳಿದ್ದರು. ಅವರೂ ಕೂಡ ಆಯುರ್ವೇದ ಪದ್ಧತಿ, ವ್ಯಾಯಾಮದ ಮೂಲಕ ತೂಕ ಇಳಿಸಿಕೊಂಡಿದ್ದಾರೆ. ಹಾಗೇ, ನಿತಿನ್ ಗಡ್ಕರಿ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಆಶಯ ವ್ಯಕ್ತಪಡಿಸಿದ್ದಾರೆ.