ದೆಹಲಿಯಲ್ಲಿ ನಡೆದ ಶ್ರದ್ಧಾ ಹತ್ಯೆ ಬಗ್ಗೆ ಸದ್ಯ ದೇಶದ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಅಫ್ತಾಬ್ನನ್ನು ನಿಂದಿಸುವ ಜತೆಗೆ, ಅನೇಕರು ಮೃತ ಶ್ರದ್ಧಾಳ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹಿಂದು ಹೆಣ್ಣುಮಕ್ಕಳು ಮುಸ್ಲಿಂ ಯುವಕರೊಂದಿಗೆ ಹೋಗಬಾರದು, ಇಂಥ ಪ್ರೀತಿ, ಲಿವ್ ಇನ್ ರಿಲೇಶನ್ಶಿಪ್ಗಳ ಪಾಶದಲ್ಲಿ ಸಿಲುಕಬಾರದು ಎಂದೂ ಆಶಯ ವ್ಯಕ್ತಪಡಿಸುತ್ತಿದ್ದಾರೆ. ಇದೆಲ್ಲದರ ಮಧ್ಯೆ ಕೇಂದ್ರ ಸಚಿವರೊಬ್ಬರು ಶ್ರದ್ಧಾ ಸಾವಿನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ, ಟೀಕೆಗೆ ಗುರಿಯಾಗಿದ್ದಾರೆ.
ದೆಹಲಿ ಶ್ರದ್ಧಾ ವಾಳ್ಕರ್ ಹತ್ಯೆ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಕೌಶಲ್ ಕಿಶೋರ್, ‘ಲಿವ್ ಇನ್ ರಿಲೇಶನ್ಶಿಪ್ಗಳು ಅಪರಾಧಗಳಿಗೆ ಕಾರಣವಾಗುತ್ತವೆ. ಅದು ಗೊತ್ತಿದ್ದೂ ಹೋಗಿ ಹುಡುಗಿಯರು ಅದರಲ್ಲಿ ಸಿಲುಕಿಕೊಳ್ಳುತ್ತಾರೆ. ಅದರಲ್ಲೂ ಇಂಥದ್ದರಲ್ಲೆಲ್ಲ ಸಿಲುಕುತ್ತಿರುವುದು ಶಿಕ್ಷಣವಂತ, ಸುಶಿಕ್ಷಿತ ಹುಡುಗಿಯರೇ ಆಗಿದ್ದಾರೆ. ಶಿಕ್ಷಣ ಪಡೆದ ಹುಡುಗಿಯರಿಗೆ ತಾವು ಓಪನ್ ಮೈಂಡೆಂಡ್ ಮತ್ತು ತಮ್ಮ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದಕೊಳ್ಳಲು ಸಮರ್ಥರಿದ್ದೇವೆ ಎಂಬ ಭಾವನೆ ಮನಸಲ್ಲಿ ಬಂದುಬಿಡುತ್ತದೆ. ಯಾಕಾಗಿಯಾದರೂ ಈ ಲಿವ್ ಇನ್ ರಿಲೇಶನ್ಶಿಪ್ ಬೇಕು? ಹಾಗೊಮ್ಮೆ ಲಿವ್ ಇನ್ನಲ್ಲಿ ಇರಲೇಬೇಕು ಎಂದರೆ ಅದಕ್ಕೆ ಸೂಕ್ತವಾದ ನೋಂದಣಿ ಆಗಿರಬೇಕು. ಅವರ ಪಾಲಕರು ಒಪ್ಪದೆ ಇದ್ದರೆ, ಕನಿಷ್ಠಪಕ್ಷ ನ್ಯಾಯಾಲಯದಲ್ಲಿ, ಸಾಕ್ಷಿಗಳ ಎದುರಲ್ಲಿ ವಿವಾಹವಾಗಿಯಾದರೂ, ಒಟ್ಟಿಗೆ ಇರಬೇಕು’ ಎಂದು ಹೇಳಿದರು.
ಇಲ್ಲಿ ಕೇಂದ್ರ ಸಚಿವರು ಶ್ರದ್ಧಾಳ ಸಾವಿನ ಬಗ್ಗೆ ಮಾತನಾಡುವ ಭರದಲ್ಲಿ ಎಲ್ಲ ಶಿಕ್ಷಣವಂತ ಹುಡುಗಿಯರೂ ಇಷ್ಟೇ ಎಂಬ ಅರ್ಥದಲ್ಲಿ ಮಾತನಾಡಿದ್ದೇ ವಿವಾದಕ್ಕೆ ಕಾರಣವಾಗಿದೆ. ಇಲ್ಲಿ ಅಫ್ತಾಬ್ ವಿರುದ್ಧ ಮಾತನಾಡುವುದನ್ನು ಬಿಟ್ಟು, ಶ್ರದ್ಧಾ ಮತ್ತು ಇತರ ಹೆಣ್ಣುಮಕ್ಕಳನ್ನು ದೂಷಿಸಿ, ಇಂಥ ಅಪರಾಧಗಳಿಗೆ ಕಾರಣ ಆಗುತ್ತಿರುವುದೇ ಸುಶಿಕ್ಷಿತ ಹೆಣ್ಣುಮಕ್ಕಳು ಎಂದು ಕೌಶಲ್ ಕಿಶೋರ್ ಹೇಳಿದ್ದಕ್ಕೆ ಅಪಾರ ಟೀಕೆ, ಆಕ್ರೋಶ ವ್ಯಕ್ತವಾಗುತ್ತಿದೆ.
ಕೌಶಲ್ ಕಿಶೋರ್ ಹೇಳಿಕೆ ಕಟುವಾಗಿ ವಿರೋಧಿಸಿದ ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ, ‘ಏನೇ ಕ್ರೈಂ ಆಗಲಿ, ಸಮಸ್ಯೆ ಆಗಲಿ, ಅದಕ್ಕೆ ಸಂಬಂಧಪಟ್ಟು ಹೆಣ್ಣುಮಕ್ಕಳನ್ನೇ ದೂಷಿಸುವ ಮನಸ್ಥಿತಿ ಬೆಳೆಯುತ್ತಲೇ ಇದೆ. ಅದಕ್ಕೆ ಕೇಂದ್ರ ಸಚಿವರ ಹೇಳಿಕೆಯೇ ಸಾಕ್ಷಿ. ಸದಾ ಮಹಿಳಾ ಶಕ್ತಿ ಬಗ್ಗೆ ಮಾತನಾಡುವ ಪ್ರಧಾನಿ ಮೋದಿಯವರು ನಿಜಕ್ಕೂ ಅದಕ್ಕೆ ಬದ್ಧರಾಗಿದ್ದರೆ, ಕೂಡಲೇ ಕೌಶಲ್ ಅವರನ್ನು ವಜಾಗೊಳಿಸಬೇಕು. ಸಮಾಜದಲ್ಲಿರುವ ಇಂಥ ಪಿತೃಪ್ರಭುತ್ವದ ಭಾರವನ್ನು ನಾವು ಮಹಿಳೆಯರು ಹೊತ್ತುಕೊಂಡಿದ್ದೇವೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ:ವಿಸ್ತಾರ Explainer | Narco test| ಏನಿದು ನಾರ್ಕೊ ಟೆಸ್ಟ್? ವಿಕೃತ ಹಂತಕ ಅಫ್ತಾಬ್ ತನಿಖೆಯಲ್ಲಿ ನಿರ್ಣಾಯಕ?