ನವ ದೆಹಲಿ: ಪಶ್ಚಿಮ ಬಂಗಾಳ ರಾಜ್ಯದ ಪ್ರವಾಸದಲ್ಲಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಇಂದು ವೇದಿಕೆ ಕಾರ್ಯಕ್ರಮ ಮಧ್ಯೆಯೇ ತೀವ್ರವಾಗಿ ಅಸ್ವಸ್ಥರಾದರು. ಉತ್ತರ ಬಂಗಾಳದ ಸಿಲಿಗುರಿಯಲ್ಲಿರುವ ಶಿವ ಮಂದಿರದಿಂದ ಸೇವಕ್ ಕಂಟೋನ್ಮೆಂಟ್ವರೆಗಿನ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ನಿತಿನ್ ಗಡ್ಕರಿ ತೆರಳಿದ್ದರು. ಡಾರ್ಜಲಿಂಗ್ ಜಂಕ್ಷನ್ನ ದಗಾಪುರ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಕೇಂದ್ರ ಸಚಿವರು ವೇದಿಕೆ ಮೇಲೆಯೇ ಅನಾರೋಗ್ಯಕ್ಕೀಡಾದರು. ಹಾಗಾಗಿ ಕಾರ್ಯಕ್ರಮ ನಿಲ್ಲಿಸಲಾಯಿತು. ಸಚಿವರನ್ನು ಅಲ್ಲಿಂದ ಗ್ರೀನ್ ರೂಮಿಗೆ ಕರೆದುಕೊಂಡು ಹೋಗಿ, ಪ್ರಾಥಮಿಕ ಚಿಕಿತ್ಸೆ ನೀಡಲು ಪ್ರಯತ್ನಿಸಲಾಯಿತು. ಆದರೆ ಅಷ್ಟರಲ್ಲಿ ಗಡ್ಕರಿ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದರಿಂದ, ತಕ್ಷಣವೇ ಅಲ್ಲಿಗೆ ವೈದ್ಯರನ್ನು ಕರೆಸಲಾಯಿತು.
ನಿತಿನ್ ಗಡ್ಕರಿ ರಕ್ತದಲ್ಲಿ ಸಕ್ಕರೆ ಅಂಶ ತೀವ್ರವಾಗಿ ಕಡಿಮೆಯಾಗಿದ್ದೇ ಅವರ ಅನಾರೋಗ್ಯಕ್ಕೆ ಕಾರಣ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಅಲ್ಲಿಗೆ ಬಂದ ವೈದ್ಯರು ಸಚಿವರಿಗೆ ಸಲೈನ್ ನೀಡುವಂತೆ ಸೂಚಿಸಿದರು. ನಿತಿನ್ ಗಡ್ಕರಿ ಅವರಿಗೆ ಒಂದು ಹಂತದ ಚಿಕಿತ್ಸೆಯನ್ನು ಅಲ್ಲೇ ಗ್ರೀನ್ ರೂಮ್ನಲ್ಲಿ ಕೊಟ್ಟ ಬಳಿಕ, ಡಾರ್ಜಲಿಂಗ್ನ ಬಿಜೆಪಿ ಸಂಸದ ರಾಜು ಬಿಸ್ಟಾ ಅವರ ಮನೆಗೆ ನಿತಿನ್ ಗಡ್ಕರಿ ಅವರನ್ನು ಕರೆದುಕೊಂಡು ಹೋಗಲಾಗಿದೆ. ಅಲ್ಲಿಯೇ ಗಡ್ಕರಿಗೆ ಚಿಕಿತ್ಸೆ ನೀಡಲು ಎಲ್ಲ ರೀತಿಯ ಸಿದ್ಧತೆ ಮಾಡಲಾಗಿದೆ. ವೈದ್ಯರೂ ಕೂಡ ಅವರೊಟ್ಟಿಗೇ ಇದ್ದಾರೆ ಎನ್ನಲಾಗಿದೆ.
ಸಿಲಿಗುರಿಯಲ್ಲಿ ಮೂರು ಹೆದ್ದಾರಿ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಇಲಾಖೆ ಸಚಿವ ನಿತಿನ್ ಗಡ್ಕರಿ ಅವರು ಅಲ್ಲಿಂದ ದಲ್ಖೋಲಾಕ್ಕೆ ತೆರಳಬೇಕಿತ್ತು. ಆದರೆ ಅಲ್ಲಿನ ಕಾರ್ಯಕ್ರಮ ರದ್ದಾಗಿದ್ದು, ನಿತಿನ್ ಗಡ್ಕರಿ ವಾಪಸ್ ದೆಹಲಿಗೆ ತೆರಳಲಿದ್ದಾರೆ ಎಂದೂ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: 2024ಕ್ಕೆ ಮೊದಲೇ ಭಾರತದ ರಸ್ತೆಗಳು ಅಮೆರಿಕದಂತೆ ಆಗಲಿವೆ: ನಿತಿನ್ ಗಡ್ಕರಿ