ನವದೆಹಲಿ: ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರಿಗೆ ಸಿಂಗಾಪುರದಲ್ಲಿ ಸೋಮವಾರ (ಡಿ.5)ದಂದು ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯಾಗಿದೆ. ಸುದೀರ್ಘ ಕಾಲದಿಂದಲೂ ಮೂತ್ರಪಿಂಡ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಸಿಂಗಾಪುರ ಆಸ್ಪತ್ರೆ ವೈದ್ಯರು, ಮೂತ್ರಪಿಂಡ ಕಸಿ ಮಾಡಿಸಲು ಸೂಚಿಸಿದ್ದರು. ಲಾಲೂ ಪ್ರಸಾದ್ಗೆ ಅವರ ಪುತ್ರಿ ರೋಹಿಣಿ ಆಚಾರ್ಯ ಅವರೇ ಕಿಡ್ನಿ ಕೊಟ್ಟಿದ್ದಾರೆ. ಜನ್ಮ ಕೊಟ್ಟ ತಂದೆಗೆ, ಒಂದು ಕಿಡ್ನಿ ಕೊಟ್ಟು ಈಗ ಅನೇಕರ ಮೆಚ್ಚುಗೆಗೆ-ಹೊಗಳಿಕೆಗೆ ಪಾತ್ರರಾಗಿದ್ದಾರೆ. ನೆಟ್ಟಿಗರಿಂದ ಹಿಡಿದು ರಾಜಕೀಯ ನಾಯಕರವರೆಗೆ ಅನೇಕರು ರೋಹಿಣಿಯನ್ನು ಶ್ಲಾಘಿಸುತ್ತಿದ್ದಾರೆ.
74 ವರ್ಷ ವಯಸ್ಸಿನ ತಂದೆ ಲಾಲೂ ಪ್ರಸಾದ್ ಯಾದವ್ರನ್ನು ಹೇಗಾದರೂ ಉಳಿಸಿಕೊಳ್ಳಬೇಕು ಎಂದು ತನ್ನ ಒಂದು ಕಿಡ್ನಿ ದಾನ ಮಾಡಿರುವ ರೋಹಿಣಿ (40 ವರ್ಷದ ಆಸುಪಾಸು) ಅವರನ್ನು ಬಿಜೆಪಿ ನಾಯಕ, ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆ ಸಚಿವ ಗಿರಿರಾಜ್ ಸಿಂಗ್ ಕೂಡ ರೋಹಿಣಿಯವರನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ. ಗಿರಿರಾಜ್ ಸಿಂಗ್ ಅವರು ಲಾಲೂ ಪ್ರಸಾದ್ ಯಾದವ್ ಮತ್ತು ಇಡೀ ಆರ್ಜೆಡಿ ಪಕ್ಷದ ಅವರ ಕಟು ಟೀಕಾಕಾರಲ್ಲ ಒಬ್ಬರು ಎಂದೇ ಗುರುತಿಸಿಕೊಂಡವರು. ಅವರೀಗ ರೋಹಿಣಿಯವರನ್ನು ಹೊಗಳಿ ಟ್ವೀಟ್ ಮಾಡಿದ್ದಾರೆ. ಹಾಗೇ, ರೋಹಿಣಿ ಬೆಡ್ ಮೇಲೆ ಮಲಗಿರುವ ಫೋಟೋವನ್ನೂ ಶೇರ್ ಮಾಡಿಕೊಂಡಿದ್ದಾರೆ. ‘ಮಗಳು ಎಂದರೆ ನಿನ್ನಂತಿರಬೇಕು. ನಿನ್ನ ಬಗ್ಗೆ ತುಂಬ ಹೆಮ್ಮೆಯೆನಿಸುತ್ತದೆ. ಮುಂದಿನ ಪೀಳಿಗೆಯವರಿಗೆ ನೀನು ಮಾದರಿ’ ಎಂದು ರೋಹಿಣಿಯವರಿಗೆ ಹೇಳಿದ್ದಾರೆ.
ಸಿಂಗಾಪುರದ ಮೌಂಟ್ ಎಲಿಜಿಬೆತ್ ಆಸ್ಪತ್ರೆಯಲ್ಲಿ ಲಾಲೂಗೆ ಕಿಡ್ನಿ ಕಸಿ ಆಪರೇಶನ್ ನಡೆದ ಬೆನ್ನಲ್ಲೇ ಟ್ವೀಟ್ ಮಾಡಿದ ಅವರ ಪುತ್ರ ತೇಜಸ್ವಿ ಯಾದವ್, ‘ಸರ್ಜರಿ ಯಶಸ್ವಿಯಾಗಿದೆ. ಅಪ್ಪ ಮತ್ತು ನನ್ನ ಸಹೋದರಿ ಇಬ್ಬರೂ ಆರಾಮಾಗಿ ಇದ್ದಾರೆ. ತಂದೆಯನ್ನು ಐಸಿಯುಗೆ ಶಿಫ್ಟ್ ಮಾಡಲಾಗಿದೆ. ನಿಮ್ಮೆಲ್ಲರ ಪ್ರಾರ್ಥನೆ, ಶುಭ ಹಾರೈಕೆ ಇರಲಿ’ ಎಂದು ಹೇಳಿದ್ದಾರೆ. ಹಾಗೇ, ರೋಹಿಣಿ ಆಚಾರ್ಯ ಅವರೂ ತಮ್ಮ ಫೋಟೋ ಟ್ವೀಟ್ ಮಾಡಿಕೊಂಡು, ‘ನಾನು ಹುಷಾರಾಗಿದ್ದೇನೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೂತ್ರಪಿಂಡ ಕಸಿ ಸರ್ಜರಿಗಾಗಿ ಸಿಂಗಾಪುರಕ್ಕೆ ತೆರಳಿದ ಲಾಲೂ ಪ್ರಸಾದ್ ಯಾದವ್; ಕಿಡ್ನಿ ದಾನ ಮಾಡಲಿರುವ ಪುತ್ರಿ ರೋಹಿಣಿ