ನವ ದೆಹಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರಲ್ಲಿ ಕೊವಿಡ್ 19 ಸೋಂಕು ದೃಢಪಟ್ಟಿದ್ದು, ಸದ್ಯ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ. ರಾಜನಾಥ್ ಸಿಂಗ್ ಅವರಲ್ಲಿ ಕೊರೊನಾದ ಸೌಮ್ಯ ಲಕ್ಷಣಗಳು ಗೋಚರಿಸಿದ್ದು, ವೈದ್ಯರ ಸಲಹೆ ಮೇರೆಗೆ ಔಷಧ ತೆಗೆದುಕೊಳ್ಳುತ್ತಿದ್ದಾರೆ. ಅವರಿಗೆ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದೆ. ಇನ್ನು ರಾಜನಾಥ್ ಸಿಂಗ್ ಅವರು ಇಂದು ದೆಹಲಿಯಲ್ಲಿ ನಡೆಯಲಿರುವ ಇಂಡಿಯನ್ ಏರ್ಫೋರ್ಸ್ ಕಮಾಂಡರ್ಗಳ ಸಮ್ಮೇಳನದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಅವರ ಪಾಲ್ಗೊಳ್ಳುವಿಕೆ ರದ್ದಾಗಿದೆ.
ಭಾರತದಲ್ಲಿ ಕಳೆದ ಒಂದು ತಿಂಗಳಿಂದ ಕೊರೊನಾ ಸೋಂಕಿನ ಹರಡುವಿಕ ಹೆಚ್ಚುತ್ತಿದೆ. ಇಂದು 12,591 ಹೊಸ ಪ್ರಕರಣಗಳು ಪತ್ತೆಯಾಗಿವೆ. ಕಳೆದ ಎಂಟು ತಿಂಗಳಲ್ಲೇ ಇದು ಅತ್ಯಂತ ಹೆಚ್ಚು ಪ್ರಕರಣ. ದೇಶದಲ್ಲಿ ಸದ್ಯ 65,286 ಸಕ್ರಿಯ ಕೊರೊನಾ ಕೇಸ್ಗಳಿವೆ ಎಂದು ಆರೋಗ್ಯ ಇಲಾಖೆ ದತ್ತಾಂಶದಲ್ಲಿ ಉಲ್ಲೇಖವಾಗಿದೆ. ಹಾಗೇ, 24ಗಂಟೆಯಲ್ಲಿ 40 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ದೇಶದಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 531,230ಕ್ಕೆ ತಲುಪಿದೆ. ದೇಶದಲ್ಲೀಗ ದೈನಂದಿನ ಪಾಸಿಟಿವಿಟಿ ರೇಟ್ ಶೇ.5.46 ಇದ್ದು, ವಾರದ ಪಾಸಿಟಿವಿಟಿ ರೇಟ್ ಶೇ.5.32. ಚೇತರಿಕೆ ರೇಟ್ ಶೇ.98.67 ಇದೆ.
ಇದನ್ನೂ ಓದಿ: Covid 19 Updates: ಇಂದು ದೇಶದಲ್ಲಿ 11 ಸಾವಿರ ಕೊರೊನಾ ಕೇಸ್ಗಳು; 29 ಮಂದಿ ಸೋಂಕಿನಿಂದ ಸಾವು
2022ರ ಜನವರಿಯಲ್ಲೂ ಕೂಡ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರಿಗೆ ಕೊರೊನಾ ತಗುಲಿತ್ತು. ಆಗಲೂ ಕ್ವಾರಂಟೈನ್ ಆಗಿದ್ದರು. ಈ ವಿಚಾರ ಟ್ವೀಟ್ ಮಾಡಿ ತಿಳಿಸಿದ್ದ ಅವರು ‘ನನ್ನಲ್ಲಿ ಕೊರೊನಾ ದೃಢಪಟ್ಟಿದೆ. ಸೌಮ್ಯ ಲಕ್ಷಣಗಳು ಕಾಣಿಸಿಕೊಂಡಿವೆ. ಮನೆಯಲ್ಲೇ ಇದ್ದು ಔಷಧ ತೆಗೆದುಕೊಳ್ಳುತ್ತಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರೆಲ್ಲ ಒಮ್ಮೆ ಟೆಸ್ಟ್ ಮಾಡಿಸಿಕೊಳ್ಳಿ’ ಎಂದು ಹೇಳಿದ್ದರು. ಆಗ ಅವರು ಶೀಘ್ರವೇ ಗುಣಮುಖರಾಗಿದ್ದರು. 2022ರ ಪ್ರಾರಂಭದಲ್ಲೂ ಸಹ ದೇಶದಲ್ಲಿ ಒಂದು ಬಾರಿ ಕೊರೊನಾ ಹರಡುವಿಕೆ ಸಿಕ್ಕಾಪಟೆ ಆಗಿತ್ತು. ದಿನವೊಂದಕ್ಕೇ ಲಕ್ಷಾಂತರ ಕೇಸ್ಗಳು ಪತ್ತೆಯಾಗುತ್ತಿದ್ದವು. ಅಂದಹಾಗೇ, ಇತ್ತೀಚೆಗೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಕೂಡ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ನಿರಂತರವಾಗಿ ಕೊರೊನಾ ಏರಿಕೆಯಾಗುತ್ತಿರುವ ಕಾರಣ, ಎಚ್ಚರಿಕೆಯಿಂದ ಇರುವಂತೆ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.