ನವ ದೆಹಲಿ: ಅದಾನಿ ಷೇರು ಕುಸಿತ ಒಂದು ಆರ್ಥಿಕ ಹಗರಣ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಉತ್ತರ ಕೊಡಬೇಕು ಎಂದು ಆಗ್ರಹಿಸುತ್ತ, ಈಗ ನಡೆಯುತ್ತಿರುವ ಬಜೆಟ್ ಎರಡನೇ ಹಂತದ ಅಧಿವೇಶನದಲ್ಲಿ ಅದಾನಿ ವಿಷಯವನ್ನೇ ಮುಖ್ಯವಾಗಿ ಎತ್ತಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಒಂದು ಫೋಟೋ ಮೂಲಕ ತಿರುಗೇಟು ಕೊಟ್ಟಿದ್ದಾರೆ. ರಾಹುಲ್ ಗಾಂಧಿ ಸೇರಿ ಎಲ್ಲ ಕಾಂಗ್ರೆಸ್ ನಾಯಕರೂ ಉದ್ಯಮಿ ಅದಾನಿ ವಿಷಯವನ್ನೇ ಕೆದಕುತ್ತಿದ್ದಾರೆ. ಹೀಗಿರುವಾಗ ಸ್ಮೃತಿ ಇರಾನಿಯವರು 2009ನೇ ಇಸ್ವಿಯ ಒಂದು ಫೋಟೋವನ್ನು ಬಿಡುಗಡೆ ಮಾಡಿದ್ದಾರೆ. ರಾಹುಲ್ ಗಾಂಧಿ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಪತಿ ರಾಬರ್ಟ್ ವಾದ್ರಾ ಅವರು ಗೌತಮ್ ಅದಾನಿ ಪಕ್ಕದಲ್ಲಿ ಕುಳಿತು, ಏನೋ ಮಾತನಾಡುತ್ತಿರುವ ಫೋಟೋ ಇದು.
ಅದಾನಿ ಷೇರು ಕುಸಿತವಾಗುತ್ತಿದ್ದಂತೆ ಕಾಂಗ್ರೆಸ್ಸಿಗರು ಅದನ್ನು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಲಿಂಕ್ ಮಾಡುತ್ತಿದ್ದಾರೆ. ಗೌತಮ್ ಅದಾನಿ ಮತ್ತು ಮೋದಿಯವರು ಜತೆಗಿರುವ ಫೋಟೋಗಳನ್ನೆಲ್ಲ ಶೇರ್ ಮಾಡಿಕೊಂಡವರೂ ಇದ್ದಾರೆ. ಈಗ ಸ್ಮೃತಿ ಇರಾನಿ ಸುದ್ದಿಗೋಷ್ಠಿ ವೇಳೆ ಈ ಫೋಟೋವನ್ನು ಸಾರ್ವಜನಿಕವಾಗಿ ತೋರಿಸಿ ‘ರಾಹುಲ್ ಗಾಂಧಿಯವರಿಗೆ ಅದಾನಿ ಬಗ್ಗೆ ಇಷ್ಟು ಅಸಮಾಧಾನ ಇರುವಾಗ, ಇದು ಹೇಗೆ ವಾದ್ರಾ ಅವರು ಅದಾನಿಯವರೊಂದಿಗೆ ಇದ್ದಾರೆ?’ ಎಂದು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿಯವರಿಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಷ್ಟು ವಿಷಕಾರುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಅದು ಇತ್ತೀಚೆಗೆ ರಾಹುಲ್ ಗಾಂಧಿಯವರ ಯುಕೆ ಪ್ರವಾಸದ ವೇಳೆ ಇನ್ನಷ್ಟು ಸ್ಪಷ್ಟವಾಗಿದೆ. 2019ರಲ್ಲಂತೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವ್ಯಂಗ್ಯ ಮಾಡುವ ಭರದಲ್ಲಿ ಇಡೀ ಇತರೆ ಹಿಂದುಳಿದ ವರ್ಗವನ್ನೇ ಅವಮಾನಿಸಿದರು. ಅದು ತಪ್ಪು ಎಂಬುದು ಅವರಿಗೆ ಅರ್ಥವೇ ಆಗಲಿಲ್ಲ’ ಎಂದು ಸ್ಮೃತಿ ಇರಾನಿ ಹೇಳಿದರು. ರಾಹುಲ್ ಗಾಂಧಿಯಷ್ಟೇ ಅಲ್ಲ, ಇಡೀ ಗಾಂಧಿ ಕುಟುಂಬ ಹೀಗೆ ದಲಿತರು, ಹಿಂದುಳಿದ ವರ್ಗಗಳನ್ನು ಅವಮಾನಿಸುತ್ತಲೇ ಬಂದಿದೆ ಎಂದರು.
ಹಿಂಡನ್ಬರ್ಗ್ ವರದಿ ಬೆನ್ನಲ್ಲೇ ಅದಾನಿ ಷೇರು ಕುಸಿತವಾಗಿದೆ. ದೊಡ್ಡಮಟ್ಟದ ಆರ್ಥಿಕ ಹಗರಣ ನಡೆದಿದೆ ಎಂಬುದು ಕಾಂಗ್ರೆಸ್ನವರ ಆರೋಪ. ಫೆಬ್ರವರಿಯಲ್ಲಿ ಸಂಸತ್ತಿನಲ್ಲಿ ನಡೆದಿದ್ದ ಮೊದಲ ಹಂತದ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ‘. ‘ಉದ್ಯಮಿ ಅದಾನಿ ಹಿಂದಿರುವ ಶಕ್ತಿ ಯಾವುದೆಂದು ಇಡೀ ದೇಶಕ್ಕೆ ಗೊತ್ತಾಗಬೇಕು’ ಎಂದು ಹೇಳಿದ್ದರು.
ಅಷ್ಟೇ ಅಲ್ಲ, ‘ಸಂಸತ್ತಿನಲ್ಲಿ ಅದಾನಿಯವರ ಕುರಿತು ಚರ್ಚೆ ಆಗುವುದನ್ನು ತಪ್ಪಿಸಲು ಪ್ರಧಾನಿ ಮೋದಿಯವರು ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ. ಅದ್ಯಾಕೆ ಎಂದು ಎಲ್ಲರಿಗೂ ಗೊತ್ತಿದೆ. ಆದರೆ ನಾನು ಅದಾನಿ ವಿಷಯದ ಬಗ್ಗೆ ಚರ್ಚೆ ಆಗಬೇಕು ಎಂದು ಬಯಸುತ್ತೇನೆ ಮತ್ತು ಸತ್ಯ ಹೊರಬರಬೇಕು ಎಂದು ಆಶಿಸುತ್ತೇನೆ’ ಎಂದು ಹೇಳಿದ್ದರು. ಗೌತಮ್ ಅದಾನಿ ಮತ್ತು ನರೇಂದ್ರ ಮೋದಿಯವರು ಒಟ್ಟಿಗೆ ಇರುವ ಒಂದು ಹಳೇ ಫೋಟೊವನ್ನು ಸಂಸತ್ತಿನಲ್ಲಿ ತೋರಿಸಿದ ಅವರು, ‘ಗೌತಮ್ ಅದಾನಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮಧ್ಯೆ ಇರುವ ಸ್ನೇಹ-ಸಂಬಂಧ ಎಂಥದ್ದು ಎಂದು ಎಲ್ಲರಿಗೂ ಗೊತ್ತಾಗಬೇಕು. ‘ನರೇಂದ್ರ ಮೋದಿ ಮತ್ತು ಗೌತಮ್ ಅದಾನಿ ನಡುವಿನ ಸ್ನೇಹ ಶುರುವಾಗಿದ್ದು, ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾದಾಗಿನಿಂದ. ಆ ಒಬ್ಬ ವ್ಯಕ್ತಿ (ಆದಾನಿ) ನರೇಂದ್ರ ಮೋದಿಯವರ ಹೆಗಲಿಗೆ ಹೆಗಲು ಕೊಟ್ಟು ನಿಂತರು. ಗುಜರಾತ್ನ ಪುನರುತ್ಥಾನಕ್ಕೆ ಸಹಕಾರ ನೀಡಿದರು. ಮೋದಿಯವರಿಗೆ ಸದಾ ನಿಷ್ಠರಾಗಿ ಇದ್ದರು. 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ನಿಜವಾದ ಮ್ಯಾಜಿಕ್ ಪ್ರಾರಂಭವಾಯಿತು ಎಂದೂ ವ್ಯಂಗ್ಯವಾಡಿದ್ದರು.