ನವ ದೆಹಲಿ: ʼನಾನು ದಲಿತ ಸಮುದಾಯದವನು ಎಂಬ ಕಾರಣಕ್ಕೆ ನನಗೆ ನನ್ನ ಇಲಾಖೆಯಲ್ಲಿ ಯಾರೂ ಬೆಲೆ ಕೊಡುತ್ತಿಲ್ಲ. ಅಧಿಕಾರಿಗಳೂ ನನ್ನ ಮಾತು ಕೇಳಿಬರುತ್ತಿಲ್ಲʼ ಎಂದು ಬೇಸರದಿಂದ ರಾಜೀನಾಮೆ ಸಲ್ಲಿಸಿದ್ದ ಉತ್ತರ ಪ್ರದೇಶ ಜಲಶಕ್ತಿ ಇಲಾಖೆ ಸಹಾಯಕ ಸಚಿವ ದಿನೇಶ್ ಖಾಟಿಕ್ (Dinesh Khatik) ಗುರುವಾರ ಆ ರಾಜೀನಾಮೆಯನ್ನು ವಾಪಸ್ ಪಡೆದಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಅವರು ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಲ್ಲಿಸಿದ್ದರು. ಆದರೆ ಗುರುವಾರ (ಜು.21)ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರನ್ನು ಭೇಟಿ ಮಾಡಿದ ದಿನೇಶ್ ಖಾಟಿಕ್ ರಾಜೀನಾಮೆ ಹಿಂಪಡೆದಿದ್ದಾರೆ. ʼನಾನು ಸಚಿವನಾಗಿ ಇದ್ದುಕೊಂಡು ನನ್ನ ಕೆಲಸ ಮುಂದುವರಿಸುತ್ತೇನೆʼ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.
ದಿನೇಶ್ ಖಾಟಿಕ್ ರಾಜೀನಾಮೆ ಸಲ್ಲಿಸುವಾಗ ತಮ್ಮ ಜಲಶಕ್ತಿ ಇಲಾಖೆ ಮುಖ್ಯ ಸಚಿವ ಸ್ವತಂತ್ರ ದೇವ್ ಸಿಂಗ್ ವಿರುದ್ಧವೂ ಹಲವು ಆರೋಪಗಳನ್ನು ಮಾಡಿದ್ದರು. ನನ್ನನ್ನು ಯಾವುದೇ ಸಭೆಗಳಿಗೆ ಕರೆಯುತ್ತಿಲ್ಲ. ನನ್ನ ಗಮನಕ್ಕೆ ತಾರದೆ ಅಧಿಕಾರಿಗಳ ವರ್ಗಾವಣೆ ಮಾಡಿದ್ದಾರೆ. ನಮ್ಮ ಸಚಿವಾಲಯದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದೆಲ್ಲ ಆರೋಪಿಸಿದ್ದರು. ಇಷ್ಟೆಲ್ಲ ಆದ ಮೇಲೆ ದಿನೇಶ್ ಖಾಟಿಕ್ ಅವರನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರೆಸಿದ್ದಾರೆ. ಜತೆಗೆ ಸ್ವತಂತ್ರ ದೇವ್ ಸಿಂಗ್‌ರನ್ನೂ ಕೂರಿಸಿಕೊಂಡು ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈ ಸಭೆ ಮುಗಿದ ತಕ್ಷಣವೇ ದಿನೇಶ್ ಖಾಟಿಕ್ ರಾಜೀನಾಮೆ ಪತ್ರ ಹಿಂಪಡೆದಿದ್ದಾರೆ.
ಅಂದಹಾಗೇ, ದಿನೇಶ್ ಖಾಟಿಕ್ ಇಂದು ಮಾಧ್ಯಮಗಳೊಂದಿಗೆ ತುಂಬ ಮಾತನಾಡಲಿಲ್ಲ. ʼಈಗೇನೂ ಸಮಸ್ಯೆ ಇಲ್ಲ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಾಯಕತ್ವಡಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಕೆಲವು ವಿಚಾರಗಳಲ್ಲಿ ನಮ್ಮ ಮುಖ್ಯಮಂತ್ರಿ ಶೂನ್ಯ ಸಹಿಷ್ಣುತೆ ನೀತಿ ಅಳವಡಿಸಿಕೊಂಡಿದ್ದಾರೆ. ಅದಕ್ಕೆ ಬದ್ಧರಾಗಿ ನಾವೆಲ್ಲ ಇದ್ದೇವೆʼ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ, ʼನನ್ನೆಲ್ಲ ಸಮಸ್ಯೆಗಳನ್ನೂ ಸಿಎಂ ಎದುರು ಹೇಳಿಕೊಂಡಿದ್ದೇನೆ. ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರೂ ತಿಳಿಸಿದ್ದಾರೆʼ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: ದಲಿತನೆಂಬ ಕಾರಣಕ್ಕೆ ಅಧಿಕಾರಿಗಳು ಬೆಲೆ ಕೊಡುತ್ತಿಲ್ಲ; ರಾಜೀನಾಮೆ ಸಲ್ಲಿಸಿದ ಉತ್ತರ ಪ್ರದೇಶ ಸಚಿವ