ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ದಲಿತ ಸೋದರಿಯರನ್ನು ಅತ್ಯಾಚಾರ ಮಾಡಿ, ಹತ್ಯೆಗೈದ ಆರೋಪಿಗಳನ್ನು ಬಂಧಿಸಿದ್ದಾರೆ. ಇಲ್ಲಿ ರೇಪ್ ಮಾಡಿ, ಅವರನ್ನು ಹತ್ಯೆಗೈದವರು ಇಬ್ಬರೇ ಆಗಿದ್ದರೂ, ಉಳಿದ ನಾಲ್ವರು ಕ್ರೈಂಗೆ ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ ಎಂಬ ಆರೋಪದಡಿ ಬಂಧಿತರಾಗಿದ್ದಾರೆ. ಆದರೆ ಆರೋಪಿಗಳ ಕುಟುಂಬದವರು ಮಾತ್ರ ತಮ್ಮ ಮಕ್ಕಳು ಮುಗ್ಧರು ಎಂದೇ ವಾದಿಸುತ್ತಿದ್ದಾರೆ. ಜುನೈದ್ ಮತ್ತು ಸೊಹೈಲ್ ಇದರಲ್ಲಿ ನೇರ ಆರೋಪಿಗಳು. ಇವರಿಬ್ಬರೇ ಬಾಲಕಿಯರಿಬ್ಬರನ್ನು ರೇಪ್ ಮಾಡಿ, ಹತ್ಯೆಗೈದವರು. ಉಳಿದ ಹಫೀಜುಲ್, ಕರಿಮುದ್ದೀನ್ ಮತ್ತು ಆರಿಫ್ ಎಂಬುವರು ಬಾಲಕಿಯರನ್ನು ನೇಣಿಗೇರಿಸಲು ಸಹಕಾರ ನೀಡಿದ್ದರೆ, ಜುನೈದ್-ಸೊಹೈಲ್ಗೆ ಹುಡುಗಿಯರನ್ನು ಪರಿಚಯ ಮಾಡಿಸಿದ್ದೇ ಚೋಟು ಎಂದು ಪೊಲೀಸರು ಈಗಾಗಲೇ ತಿಳಿಸಿದ್ದಾರೆ.
ಘಟನೆ ನಡೆದ ಬಳಿಕ ಸೊಹೈಲ್, ಹಫೀಜುಲ್, ಕರಿಮುದ್ದೀನ್ ಮನೆಯವರು ಮಾಧ್ಯಮಗಳ ಎದುರು ಮಾತನಾಡಿದ್ದಾರೆ. ‘ನಮ್ಮ ಮಕ್ಕಳೆಲ್ಲ ಮುಗ್ಧರು. ಅವರು ಅತ್ಯಾಚಾರ-ಕೊಲೆ ಮಾಡಿಲ್ಲ. ಹಾಗೊಮ್ಮೆ ಅಪರಾಧ ಮಾಡಿದ್ದೇ ಆದರೆ ಅವರು ಸ್ಥಳದಿಂದ ಮತ್ತು ಮನೆಯಿಂದ ನಾಪತ್ತೆಯಾಗಿ ತಪ್ಪಿಸಿಕೊಳ್ಳಲು ನೋಡುತ್ತಿದ್ದರು. ಆದರೆ ಎಲ್ಲರೂ ಮನೆಯಲ್ಲೇ ಇದ್ದಾರೆ. ಅಂದರೆ ಅವರು ಯಾವುದೇ ತಪ್ಪು ಮಾಡಿಲ್ಲ ಎಂದೇ ಅರ್ಥ. ಅಷ್ಟಕ್ಕೂ ಅವರೆಲ್ಲ ಒಟ್ಟಾಗಿ ಬುಧವಾರ ಮಧ್ಯಾಹ್ನ ರೇಷನ್ ತರಲೆಂದು ಹೋಗಿದ್ದರು. ಅಲ್ಲಿಂದ ನೇರವಾಗಿ ಮನೆಗೇ ಬಂದಿದ್ದಾರೆ ’ ಎಂದು ವಾದಿಸುತ್ತಿದ್ದಾರೆ.
ನ್ಯಾಯಕೊಡಿಸಿ
ಇನ್ನೊಂದೆಡೆ ಮೃತ ಬಾಲಕಿಯರ ಮನೆಯವರು ಗೋಳಿಡುತ್ತಿದ್ದಾರೆ. ಆರೋಪಿಗಳನ್ನೆಲ್ಲ ನೇಣಿಗೇರಿಸಿ. ನಮ್ಮ ಮಕ್ಕಳ ಸಾವಿಗೆ ನ್ಯಾಯ ಕೊಡಿಸಿ ಎಂದು ಬಾಲಕಿಯರ ತಂದೆ ಆಗ್ರಹಿಸಿದ್ದಾರೆ. ‘ನಮ್ಮ ಹೆಣ್ಣುಮಕ್ಕಳು ಅವರಾಗಿಯೇ ಹೋಗಿದ್ದಲ್ಲ. ನಮ್ಮ ಮನೆಯಿಂದಲೇ ಅವರನ್ನು ಅಪಹರಿಸಲಾಗಿದೆ. ನಂತರ ರೇಪ್ ಮಾಡಿ, ಹತ್ಯೆಗೈಯ್ಯಲಾಗಿದೆ’ ಎಂದು ಪ್ರತಿಪಾದಿಸಿದ್ದಾರೆ. ಆದರೆ ಪೊಲೀಸರು ಹೇಳುವ ಪ್ರಕಾರ ಹುಡುಗಿಯರನ್ನು ಆರೋಪಿಗಳು ಕಿಡ್ನ್ಯಾಪ್ ಮಾಡಿಲ್ಲ. ಜುನೈದ್-ಸೊಹೈಲ್ ಜತೆ ಸ್ನೇಹ ಹೊಂದಿದ್ದ ಹುಡುಗಿಯರೇ ಅವರು ಕರೆದಿದ್ದಕ್ಕೆ ಸಮೀಪದ ಹೊಲಕ್ಕೆ ಹೋಗಿದ್ದರು.
ಬಾಲಕಿಯರ ತಾಯಿಗೆ ಹೊಡೆದರಾ ಪೊಲೀಸ್?
ಬಾಲಕಿಯರ ಶವ ಪತ್ತೆಯಾಗುತ್ತಿದ್ದಂತೆ ಅವರ ತಾಯಿ ದೂರು ಕೊಡಲೆಂದು ಪೊಲೀಸ್ ಠಾಣೆಗೆ ಹೋದಾಗ ಅಲ್ಲಿ ಪೊಲೀಸ್ ಸಿಬ್ಬಂದಿ ಆಕೆಯನ್ನು ಥಳಿಸಿದ್ದಾರೆ. ನಾನೂ ಆಗ ಅಲ್ಲಿಯೇ ಇದ್ದೆ. ದೃಶ್ಯವನ್ನು ಕಣ್ಣಾರೆ ನೋಡಿದ್ದೇನೆ ಎಂದು ಸ್ಥಳೀಯ ಪತ್ರಕರ್ತನೊಬ್ಬ ಹೇಳಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ. ಆದರೆ ಹುಡುಗಿಯರ ತಾಯಿ ಈ ಬಗ್ಗೆ ಇದುವರೆಗೂ ಹೇಳಿಕೆ ನೀಡಿಲ್ಲ.
ಇಷ್ಟೆಲ್ಲದರ ಮಧ್ಯೆ ಬಾಲಕಿಯರ ಮನೆಯವರು ಹುಡುಗಿಯರ ಅಂತಿಮ ಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವವರೆಗೂ ಅಂತ್ಯ ಸಂಸ್ಕಾರ ಮಾಡೋದಿಲ್ಲ ಎಂದಿದ್ದರು. ಸ್ಥಳೀಯರು ಅನೇಕರು ಸೇರಿ ಪ್ರತಿಭಟನೆಯನ್ನೂ ನಡೆಸಿದ್ದರು. ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿಗಳೆಲ್ಲ ಸೂಕ್ತ ಕ್ರಮದ ಭರವಸೆ ಕೊಟ್ಟ ನಂತರವಷ್ಟೇ ಅಂತ್ಯಕ್ರಿಯೆಗೆ ಒಪ್ಪಿದ್ದಾರೆ. ಅಂತ್ಯಕ್ರಿಯೆ ಇಂದೇ ನಡೆಯಲಿದೆ ಎಂದೂ ಹೇಳಲಾಗಿದೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ದಲಿತ ಸೋದರಿಯರ ಬರ್ಬರ ಹತ್ಯೆ: ಶವ ಪರೀಕ್ಷೆ ವರದಿಯಲ್ಲೇನಿದೆ?