ನವ ದೆಹಲಿ: ಮಕ್ಕಳ ಮಧ್ಯಾಹ್ನದ ಬಿಸಿಯೂಟ (Midday Meals)ಕ್ಕಾಗಿ ನೀಡಲಾಗಿದ್ದ ೧೧ ಕೋಟಿಗೂ ಅಧಿಕ ಹಣವನ್ನು ತಿಂದು ತೇಗಿದ ಆರೋಪದ ಮೇಲೆ ಉತ್ತರ ಪ್ರದೇಶದ ಪ್ರಾಥಮಿಕ ಶಾಲೆಯ ಉಪಾಧ್ಯಾಯರು ಮತ್ತು ಸಹವರ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಫರೋಜಾಬಾದ್ ಜಿಲ್ಲೆಯ ನಿವಾಸಿ ಚಂದ್ರಕಾಂತ ಶರ್ಮಾ ಜಾಜ್ಪುರ್ ಪ್ರಾಥಮಿಕ ಶಾಲೆಯಲ್ಲಿ ಈಗ ಮುಖ್ಯೋಪಾಧ್ಯಾಯರು. ಅವರ ಮೇಲಿನ ಭ್ರಷ್ಟಾಚಾರದ ದೂರಗಳ ಆಧಾರದ ಮೇಲೆ ೨೦೧೭ರಲ್ಲಿಯೇ ರಾಜ್ಯ ಸರಕಾರ ತನಿಖೆಗೆ ಆದೇಶಿಸಿತ್ತು. ದಾಖಲಾದ ಪ್ರಕರಣದ ಅನ್ವಯ, ʻ೨೦೦೭ರಲ್ಲಿ ʻಸರಸ್ವತಿ ಆವಾಸೀಯ ಶಿಕ್ಷಾ ಸೇವಾ ಸಮಿತಿʼ ಎಂಬ ಹೆಸರಿನ ಶಿಕ್ಷಣ ಸಂಸ್ಥೆಯನ್ನು ಚಂದ್ರಕಾಂತ ಶರ್ಮಾ ನೋಂದಣಿ ಮಾಡಿಸಿದ್ದರು. ಇದಕ್ಕಾಗಿ ಆಗ್ರಾ ವಿಭಾಗಕ್ಕೆ ಹಲವು ರೀತಿಯ ನಕಲಿ ದಾಖಲೆಗಳನ್ನು ಅವರು ಸಲ್ಲಿಸಿದ್ದರು. ನೋಂದಣಿಯಾದ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳಾಗಿ ತಮ್ಮ ತಂದೆ-ತಾಯಿ, ಪತ್ನಿ ಹಾಗೂ ಬಂಧುಗಳನ್ನೇ ನೇಮಿಸಿಕೊಂಡಿದ್ದರು. ಸುನಿಲ್ ಶರ್ಮಾ ಎಂಬ ನಕಲಿ ಗುರುತಿನೊಂದಿಗೆ ತಾವೇ ಖಜಾಂಚಿಯಾಗಿದ್ದರುʼ ಎಂದು ಹೇಳಲಾಗಿದೆ.
ತಮ್ಮ ಶಿಕ್ಷಣ ಸಂಸ್ಥೆಯ ಮೂಲಕ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುವ ಕೆಲಸವನ್ನು ಶರ್ಮಾ ವಹಿಸಿಕೊಂಡಿದ್ದರು. ನಕಲಿ ಬಿಲ್‌ಗಳ ಮೂಲಕ ಸುಮಾರು ೧೧.೪೬ ಕೋಟಿ ರೂಪಾಯಿ ಇವರ ಶಿಕ್ಷಣ ಸಂಸ್ಥೆಗೆ ಹರಿದು ಬಂದಿದ್ದು, ಅಲ್ಲಿಂದ ಹಲವಾರು ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಮತ್ತಷ್ಟು ವಿವರಗಳನ್ನು ನೀಡಿರುವ ಎಸ್‌ಪಿ (ನಿಗಾ) ಅಲೋಕ್ ಶರ್ಮಾ, ʻಆಗ್ರಾ ಸುತ್ತಮುತ್ತಲ ಪ್ರದೇಶಗಳಲ್ಲಿ ಬಹಳಷ್ಟು ಆಸ್ತಿ ಪೇರಿಸಿರುವ ಈ ಶಿಕ್ಷಕರು, ಇದಕ್ಕಾಗಿ ಬ್ಯಾಂಕ್‌ಗಳಿಂದ ಬೃಹತ್ ಮೊತ್ತದ ಸಾಲವನ್ನೂ ಪಡೆದಿದ್ದಾರೆ. ಈ ಮೂಲಕ ಕಪ್ಪು ಹಣವನ್ನು ಬಿಳಿ ಮಾಡಲೂ ಪ್ರಯತ್ನಿಸಿದ್ದಾರೆ. ಇದಕ್ಕಾಗಿ ನಕಲಿ ಹೆಸರು ಮತ್ತು ದಾಖಲೆಗಳನ್ನೂ ಅವರು ಬಳಸಿದ್ದಾರೆʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭ್ರಷ್ಟಾಚಾರ: ಬೆಕ್ಕಿಗೆ ನಾನೇ ಗಂಟೆ ಕಟ್ಟುತ್ತೇನೆ ಎಂದ ಹೈಕೋರ್ಟ್ ನ್ಯಾಯಮೂರ್ತಿ ಹೇಳಿಕೆ ವೈರಲ್