ಅಹ್ಮದಾಬಾದ್: ಸರ್ದಾರ್ ಸರೋವರ್ ಅಣೆಕಟ್ಟು ನಿರ್ಮಿಸಲು ತೊಡಕಾಗಿದ್ದವರು ಅರ್ಬನ್ ನಕ್ಸಲರು ಮತ್ತು ಅಭಿವೃದ್ಧಿ ವಿರೋಧಿಗಳು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಹೇಳಿದರು. ಈ ಸರ್ದಾರ್ ಸರೋವರ್ ಅಣೆಕಟ್ಟನ್ನು ನರ್ಮದಾ ನದಿಗೆ, ಕೆವಡಿಯಾ ಪಟ್ಟಣದ ಬಳಿಯಿರುವ ನವಗಮ್ನಲ್ಲಿ ಕಟ್ಟಲಾಗಿದೆ. ಇಂದು ಗುಜರಾತ್ ನರ್ಮದಾ ಜಿಲ್ಲೆಯ ಏಕತಾ ನಗರದಲ್ಲಿ ಆಯೋಜಿಸಲಾಗಿರುವ ‘ಪರಿಸರ ಸಚಿವರುಗಳು ರಾಷ್ಟ್ರೀಯ ಸಮ್ಮೇಳನ’ವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ ಸರ್ದಾರ್ ಸರೋವರ್ ಅಣೆಕಟ್ಟು ಪ್ರಸ್ತಾಪ ಮಾಡಿದರು.
ಸಮಾಜಘಾತುಕರಾದ ನಕ್ಸಲರು, ಮಾವೋವಾದಿಗಳ ಬಗ್ಗೆ ಕನಿಕರ ಹೊಂದಿರುವವರನ್ನು ಉಲ್ಲೇಖಿಸಲು ಈ ಅರ್ಬನ್ ನಕ್ಸಲರು ಎಂಬ ಪದ ಪ್ರಯೋಗ ಮಾಡಲಾಗುತ್ತಿದೆ. ರಾಜಕೀಯವಾಗಿ ಈ ಶಬ್ದ ಸದಾ ಬಳಕೆಯಾಗುತ್ತಲೇ ಇರುತ್ತದೆ. ಇಂದು ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ನಲ್ಲಿ ನಡೆದ ಕಾರ್ಯಕ್ರಮದ ವೇಳೆ ಇದೇ ಶಬ್ದವನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದರು.
‘ನರ್ಮದಾ ನದಿಗೆ ಅಡ್ಡಲಾಗಿ ಸರ್ದಾರ್ ಸರೋವರ್ ಅಣೆಕಟ್ಟು ನಿರ್ಮಾಣ ಮಾಡುವುದು ಪರಿಸರಕ್ಕೆ ಮಾರಕ ಎಂದು ಅರ್ಬನ್ ನಕ್ಸಲರು ಮತ್ತು ಅಭಿವೃದ್ಧಿ ಕೆಲಸವನ್ನು ವಿರೋಧಿಸುವವರು ಜನರನ್ನು ನಂಬಿಸುವ ಮೂಲಕ ಈ ಕಟ್ಟಡ ಕಟ್ಟಲು ತುಂಬ ವಿಳಂಬವಾಗುವಂತೆ ಮಾಡಿದರು. ಈ ಅರ್ಬನ್ ನಕ್ಸಲರಿಗೆ ರಾಜಕೀಯ ನಾಯಕರ ಬೆಂಬಲ, ಪ್ರೋತ್ಸಾಹವೂ ಇತ್ತು. ಹೀಗಾಗಿ ಅಪಾರ ಮೊತ್ತದ ಹಣವೂ ಸುಮ್ಮನೆ ವ್ಯರ್ಥವಾಯಿತು. ಆದರೆ ಡ್ಯಾಂ ನಿರ್ಮಾಣಗೊಂಡ ಮೇಲೆ, ಅವರ ವಾದ ಎಷ್ಟು ಪೊಳ್ಳು ಎಂಬುದು ಎಲ್ಲರಿಗೂ ಗೊತ್ತಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
‘ಇಂಥ ಅರ್ಬನ್ ನಕ್ಸಲರು ಇವತ್ತಿಗೂ ಸಕ್ರಿಯರಾಗಿದ್ದಾರೆ. ಉದ್ಯಮಗಳನ್ನು ಮಾಡಲು, ಜನಜೀವನವನ್ನು ಸುಗಮಗೊಳಿಸಲು ಸರ್ಕಾರ ಜಾರಿಗೆ ತರುವ ಯಾವುದೇ ಯೋಜನೆಗಳಿಗೂ ಅಡ್ಡಗಾಲು ಹಾಕಬೇಡಿ ಎಂದು ನಾನು ಅವರನ್ನು ಒತ್ತಾಯಿಸುತ್ತೇನೆ. ಇಂಥವರ ಪಿತೂರಿಗೆ ತುಂಬ ಸಮತೋಲಿತವಾಗಿಯೇ ನಾವು ಪ್ರತಿರೋಧ ಒಡ್ಡುತ್ತೇವೆ’ ಎಂದೂ ನರೇಂದ್ರ ಮೋದಿ ತಿಳಿಸಿದರು.
ಇದನ್ನೂ ಓದಿ: Basangouda Patil Yatnal: ಪ್ರಧಾನಿ ಮೋದಿ ಶ್ರೇಷ್ಠ ನಾಯಕ