Site icon Vistara News

ಹಳ್ಳಿ ಹುಡುಗ, ಈಗ ಅಂತಾರಾಷ್ಟ್ರೀಯ ನಿಧಿ: ಅಜಿತ್ ದೋವಲ್​​ರನ್ನು ಹೊಗಳಿದ ಯುಎಸ್​ ರಾಯಭಾರಿ

Eric Garcetti And National Security Advisor Ajit Doval

#image_title

ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿರುವ ಎರಿಕ್​ ಗಾರ್ಸೆಟ್ಟಿ ಅವರು ನಮ್ಮ ದೇಶದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರುವ (NSA)ಅಜಿತ್​ ದೋವಲ್ (NSA Ajit Doval)​ ಅವರನ್ನು ಹೊಗಳಿದ್ದಾರೆ. ‘ಅಜಿತ್ ದೋವಲ್​ ಒಬ್ಬರು ಅಂತಾರಾಷ್ಟ್ರೀಯ ನಿಧಿ’ ಎಂದು ಬಣ್ಣಿಸಿದ್ದಾರೆ. ಎರಿಕ್ ಗಾರ್ಸೆಟ್ಟಿ ಅವರು ಇದೇ ಮಾರ್ಚ್​ ತಿಂಗಳಲ್ಲಿ ಭಾರತಕ್ಕೆ ಅಮೆರಿಕದ ನೂತನ ರಾಯಭಾರಿಯಾಗಿ ನಿಯೋಜಿತಗೊಂಡಿದ್ದಾರೆ. ಅವರು ಮಂಗಳವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ‘ಅಜಿತ್ ದೋವಲ್ ಅವರು ಉತ್ತರಾಖಂಡ್​​ನ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದವರು. ಅಂಥ ಹಳ್ಳಿ ಹುಡುಗನೊಬ್ಬ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪ್ಪಟ ನಿಧಿಯಾಗಿದ್ದಾರೆ. ಅವರು ಬರೀ ಭಾರತ ದೇಶದ ಸಂಪತ್ತಷ್ಟೇ ಅಲ್ಲ’ ಎಂದು ಹೇಳಿದ್ದಾರೆ.

ಯುನೈಟೆಡ್​ ಸ್ಟೇಟ್ಸ್​ ಮತ್ತು ಭಾರತದ ನಡುವಿನ ಸೌಹಾರ್ಧದ ಬುನಾದಿ ಬಲಿಷ್ಠವಾಗಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಎರಿಕ್​ ಗಾರ್ಸೆಟ್ಟಿ ಅವರು ‘ಭಾರತ-ಅಮೆರಿಕ ಸೌಹಾರ್ಧ ಸಂಬಂಧಕ್ಕೆ ಬಲವಾದ ಅಡಿಪಾಯವಿದೆ. ಅಮೆರಿಕದ ಪ್ರಜೆಗಳನ್ನು ಭಾರತ ಪ್ರೀತಿಸುತ್ತದೆ, ಭಾರತವನ್ನು ಅಮೆರಿಕ ಪ್ರೀತಿಸುತ್ತದೆ ಎಂದು ಹೇಳಿದರು. ಹಾಗೇ, ಡಿಜಿಟಲ್ ಪಾವತಿ ವ್ಯವಸ್ಥೆ ಮತ್ತು ಹಣಕಾಸು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಪ್ರಗತಿಯ ಬಗ್ಗೆಯೂ ಗಾರ್ಸೆಟ್ಟಿ ಸಂತಸ ವ್ಯಕ್ತಪಡಿಸಿದರು. ‘ಭಾರತ ಡಿಜಿಟಲ್ ಪೇಮೆಂಟ್​ ಮತ್ತು ಫೈನಾನ್ಸಿಯಲ್​ ಟೆಕ್ನಾಲಜಿ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸುತ್ತಿರುವುದನ್ನು ಗಮನಿಸುತ್ತಿದ್ದೇನೆ. ಇದು ಜಗತ್ತನ್ನೇ ಬೆರಗುಗೊಳಿಸಿದೆ. ಒಂದು ಹಳ್ಳಿಯಲ್ಲಿ ಚಹಾ ಮಾರಾಟ ಮಾಡುವ ಮಹಿಳೆ ಕೂಡ ಇಂದು ಡಿಜಿಟಲ್ ಪಾವತಿ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಸರ್ಕಾರದಿಂದ ನೇರವಾಗಿ ಸವಲತ್ತು ಪಡೆಯುತ್ತಿದ್ದಾಳೆ. ಸರ್ಕಾರ ಕೊಡುವ ಸಂಪೂರ್ಣ ಹಣ ಅವಳಿಗೇ ಸಿಗುತ್ತಿದೆ‘ ಎಂದರು.

ಇದನ್ನೂ ಓದಿ: Video: ಅಮೆರಿಕದಲ್ಲೂ ರಾಹುಲ್ ಗಾಂಧಿ ಟ್ರಕ್​ನಲ್ಲಿ ಪ್ರಯಾಣ; ಡ್ರೈವರ್​ ಜತೆ ಚರ್ಚೆ, ಮೂಸೇವಾಲಾ ಹಾಡು

78ವರ್ಷದ ಅಜಿತ್ ದೋವಲ್​ ಅವರು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. 2014ರಿಂದಲೂ ಇದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವು ಸರ್ಜಿಕಲ್ ಸ್ಟ್ರೈಕ್​, ರಾಷ್ಟ್ರೀಯ, ಅಂತಾರಾಷ್ಟ್ರೀಯ ಬೇಹುಗಾರಿಕಾ ಕೆಲಸಗಳಲ್ಲಿ ಮಾಸ್ಟರ್​ ಮೈಂಡ್​. ದೇಶದ ಭದ್ರತೆಗೆ ಧಕ್ಕೆ ಬಂದಾಗ, ಗಲಭೆಗಳಾದಾಗ, ಹೊರಗಿನ ಶತ್ರುಗಳ ಉಪಟಳ ಜಾಸ್ತಿಯಾದಾಗ ಅವುಗಳ ನಿಯಂತ್ರಣದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಾರೆ. ಚುರುಕು ಮತಿಯ ಅಜಿತ್ ದೋವಲ್​ ಅಂತಾರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿಗಳಿಸಿದ್ದಾರೆ ಎಂಬುದಕ್ಕೆ ಇದೀಗ ಅಮೆರಿಕ ರಾಯಭಾರಿ ಆಡಿರುವ ಮಾತುಗಳೇ ಸಾಕ್ಷಿ.

Exit mobile version