Site icon Vistara News

ಪ್ರಧಾನಿ ನರೇಂದ್ರ ಮೋದಿಗಾಗಿ ಔತಣಕೂಟ ಏರ್ಪಡಿಸಲಿದ್ದಾರೆ ಜೋ ಬೈಡೆನ್​; ಶೀಘ್ರದಲ್ಲೇ ಮೋದಿ ಅಮೆರಿಕ ಪ್ರವಾಸ?

US President Biden and modi

ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಅವರು ಅತಿ ಶೀಘ್ರದಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿ (PM Modi)ಯವರಿಗಾಗಿ ಔತಣಕೂಟ ಏರ್ಪಡಿಸಲಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್​ (US President Jeo Biden) ಬೇಸಿಗೆಯಲ್ಲಿ ಔತಣಕೂಟ ಆಯೋಜಿಸಲಿದ್ದು ಅದಕ್ಕೆ ಅವರು ಪ್ರಧಾನಿ ಮೋದಿಯನ್ನು ಆಮಂತ್ರಿಸಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಸಾಮಾನ್ಯವಾಗಿ ಅಮೆರಿಕದ ಶ್ವೇತಭವನ ಜೂನ್​ ತಿಂಗಳಲ್ಲಿ ಸ್ಟೇಟ್​ ಡಿನ್ನರ್​​ ಆಯೋಜಿಸಲಾಗುತ್ತದೆ. ಅಧ್ಯಕ್ಷರೇ ಆಯೋಜಿಸುವ ಈ ಡಿನ್ನರ್​ ಭರ್ಜರಿಯಾಗಿ ನಡೆಯುತ್ತದೆ. ಯಾವ ರಾಷ್ಟ್ರದ ನಾಯಕರಿಗೆ ಆಹ್ವಾನ ನೀಡುತ್ತಾರೋ, ಅವರು ಪಾಲ್ಗೊಳ್ಳುವ ಜತೆಗೆ, ಸರ್ಕಾರದ ಪ್ರಮುಖರೆಲ್ಲ ಇರುತ್ತಾರೆ. ಈ ಸಲದ ಸ್ಟೇಟ್​ ಡಿನ್ನರ್ ಜೂನ್​​ಗೂ ಪೂರ್ವದಲ್ಲೇ, ಬೇಸಿಗೆಯಲ್ಲಿ ನಡೆಯಲಿದೆ ಎನ್ನಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಿದರೆ, ಅದು ಈ ಘಟ್ಟದಲ್ಲಿ ಅತ್ಯಂತ ಮಹತ್ವ ಪಡೆಯಲಿದೆ. ಇಂಡೋ-ಫೆಸಿಪಿಕ್​ ವಲಯದಲ್ಲಿ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿರುವ ಕುತಂತ್ರಿ ಚೀನಾವನ್ನು ಹತ್ತಿಕ್ಕಲು ನೀತಿ ರೂಪಿಸುವ ನಿಟ್ಟಿನಲ್ಲಿ ಅಮೆರಿಕ ಮತ್ತು ಭಾರತ ನಾಯಕರ ಭೇಟಿ ಪ್ರಾಮುಖ್ಯತೆ ಪಡೆಯಲಿದೆ. ಉಕ್ರೇನ್​ ಮೇಲೆ ರಷ್ಯಾ ಸಾರಿರುವ ಯುದ್ಧವನ್ನು ಅಮೆರಿಕ ಖಂಡಿಸುತ್ತಲೇ ಬಂದಿದೆ. ರಷ್ಯಾ-ಉಕ್ರೇನ್​ ಯುದ್ಧವನ್ನು ನಿಲ್ಲಿಸುವ ಸಾಮರ್ಥ್ಯ ಇರುವುದು ಭಾರತದ ಪ್ರಧಾನಿ ಮೋದಿ ಅವರಿಗೆ ಮಾತ್ರ ಎಂಬ ಮಾತನ್ನು ಪದೇಪದೆ ಹೇಳುತ್ತಲೇ ಇದೆ. ಡೊನಾಲ್ಡ್​ ಟ್ರಂಪ್​ ಇರುವಾಗಿನಿಂದಲೂ ಪ್ರಧಾನಿ ನರೇಂದ್ರ ಮೋದಿಗೆ ಅಮೆರಿಕ ವಿಶೇಷ ಸ್ಥಾನಮಾನ ನೀಡುತ್ತಲೇ ಇದೆ. 2023ನೇ ಸಾಲಿನ ಜಿ20 ಶೃಂಗ ಈ ಬಾರಿ ಭಾರತದಲ್ಲಿ ನಡೆಯಲಿದ್ದು, ಇದರಲ್ಲಿ ರಷ್ಯಾ-ಉಕ್ರೇನ್​ ವಿಷಯವೇ ಬಹುಮುಖ್ಯವಾಗಿ ಚರ್ಚೆಯಾಗಲಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ದೃಷ್ಟಿಯಿಂದಲೂ ಪ್ರಧಾನಿ ಮೋದಿ -ಜೋ ಬೈಡೆನ್​ ಭೇಟಿ ಮಹತ್ವ ಎನ್ನಿಸಲಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಡಿಸೆಂಬರ್​ನಲ್ಲಿ ಫ್ರೆಂಚ್​ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರಿಗಾಗಿ ಔತಣಕೂಟ ಆಯೋಜಿಸಿದ್ದರು. ಹಾಗೇ, ಅವರು ಏಪ್ರಿಲ್​ 26ರಂದು ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೆಯೋಲ್​ಗಾಗಿ ಡಿನ್ನರ್​ ಏರ್ಪಡಿಸಿದ್ದಾರೆ. ಅದಾದ ಮೇಲೆ ಪ್ರಧಾನಿ ನರೇಂದ್ರ ಮೋದಿ ಜತೆ ಡಿನ್ನರ್​ ಇದೆ ಎಂದು ಹೇಳಲಾಗಿದೆ. ಅಷ್ಟಲ್ಲದೆ, ಮೇ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಕ್ವಾಡ್​ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಮತ್ತು ಪ್ರಧಾನಿ ನರೇಂದ್ರ ಮೋದಿ ಪರಸ್ಪರ ಭೇಟಿಯಾಗಲಿದ್ದಾರೆ. ಜೋ ಬೈಡೆನ್​ ಮತ್ತು ಪ್ರಧಾನಿ ಮೋದಿ ನಡುವಿನ ಔತಣಕೂಟಕ್ಕೆ ಇನ್ನೂ ದಿನಾಂಕ ನಿಗದಿಯಾಗಿಲ್ಲ.

ಇದನ್ನೂ ಓದಿ: ಜಿ7 ಶೃಂಗದಲ್ಲಿ ಪ್ರಧಾನಿ ಮೋದಿ; ಬೈಡೆನ್‌, ಮ್ಯಾಕ್ರನ್, ಟ್ರುಡೊ ಜತೆ ದ್ವಿಪಕ್ಷೀಯ-ಸೌಹಾರ್ದಯುತ ಚರ್ಚೆ

Exit mobile version