ದೇವಸ್ಥಾನ ಉತ್ಸವಕ್ಕಾಗಿ ಅಲಂಕರಿಸಲು ಕೇಸರಿ ಬಣ್ಣದ ಬಂಟಿಂಗ್ಸ್ (ಅಲಂಕಾರಿಕ ಬಾವುಟ)ಗಳನ್ನು ಮಾತ್ರ ಬಳಸಬೇಡಿ. ಬೇರೆ ವಿವಿಧ ಬಣ್ಣಗಳ ಬಂಟಿಂಗ್ಸ್ಗಳನ್ನೂ ಹಾಕಿ ಎಂದು ಪೊಲೀಸರು, ಕೇರಳದ ತಿರುವನಂತಪುರಂನಲ್ಲಿರುವ ವೆಲ್ಲಾಯಾನಿಯಲ್ಲಿರುವ ಭದ್ರಕಾಳಿ ದೇವಸ್ಥಾನದ ಆಡಳಿತ ಮಂಡಳಿಗೆ ಸೂಚಿಸಿದ್ದಾರೆ. ಪೊಲೀಸರ ಈ ಆದೇಶದ ಬಗ್ಗೆ ದೇಗುಲದ ಉತ್ಸವದ ಸಮಿತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕೇರಳ ಸಿಪಿಐ (ಎಂ) ಸರ್ಕಾರದ ಅಜೆಂಡಾವನ್ನು ಪೊಲೀಸರು ದೇವಾಲಯಗಳ ಮೇಲೆ ಹೇರುತ್ತಿದ್ದಾರೆ. ನಾವು ಕೇರಳ ಹೈಕೋರ್ಟ್ಗೆ ಈ ಬಗ್ಗೆ ಅರ್ಜಿ ಸಲ್ಲಿಸುತ್ತೇವೆ ಎಂದು ಸಮಿತಿಯ ಅಧ್ಯಕ್ಷ ಭುವನಚಂದ್ರನ್ ತಿಳಿಸಿದ್ದಾರೆ.
ಭದ್ರಕಾಳಿ ದೇವಸ್ಥಾನದಲ್ಲಿ ಪ್ರತಿ ಮೂರು ವರ್ಷಗಳಿಗೆ ಒಮ್ಮೆ ಅದ್ಧೂರಿ ಉತ್ಸವ ನಡೆಯುತ್ತದೆ. ಕಳೆದ ವರ್ಷ ಕೆಲವು ಸಮಸ್ಯೆಗಳು ಆಗಿದ್ದವು. ಹೀಗಾಗಿ ಪ್ರಸಕ್ತ ಬಾರಿ ಕಾನೂನು-ಸುವ್ಯವಸ್ಥೆಯನ್ನು ಪರಿಗಣಿಸಿ ಅಲಂಕಾರಕ್ಕೆ ಸಂಬಂಧಪಟ್ಟಂತೆ ನೋಟಿಸ್ ನೀಡಲಾಗಿತ್ತು. ನೋಟಿಸ್ ನೀಡುತ್ತಿದ್ದಂತೆ ನಮ್ಮ ತಾತ್ಕಾಲಿಕ ನೆರವು ಪೋಸ್ಟ್ಗಳ ಮೇಲೆ ದಾಳಿಯಾಗಿದೆ. ಇದು ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರು ಮತ್ತು ಅವರ ಬೆಂಬಲಿಗರ ಕೃತ್ಯ ಎಂದು ಗೊತ್ತಾಗಿದೆ. ಆಸ್ತಿ ಹಾನಿ ಮತ್ತು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಅವರೆಲ್ಲರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಅದೊಂದು ದೇವಸ್ಥಾನ ಎಂದಮೇಲೆ ಅದು ಹಿಂದು ಧಾರ್ಮಿಕ ಕ್ಷೇತ್ರ ಎಂದೇ ಆಗಿರುತ್ತದೆ. ಕೇಸರಿ ಬಣ್ಣವೇ ಹಿಂದುಗಳ ಬಾವುಟ. ಆದರೆ ಪೊಲೀಸರು ದೇವಸ್ಥಾನ ಉತ್ಸವ ಅಲಂಕಾರಕ್ಕೆ ಬೇರೆ ಬಣ್ಣಗಳ ಬಂಟಿಂಗ್ಸ್ಗಳನ್ನೂ ಬಳಸಿ ಎಂದು ನೋಟಿಸ್ ನೀಡಿದ್ದಾರೆ. ಆದರೆ ಈ ಸೂಚನೆ ಸಂವಿಧಾನಕ್ಕೆ ವಿರುದ್ಧ. ಹಿಂದುಗಳು ಮತ್ತು ಹಿಂದು ಧಾರ್ಮಿಕ ಕ್ಷೇತ್ರಗಳ ಬಗ್ಗೆ ಯಾಕೆ ತಾರತಮ್ಯ ಮಾಡಬೇಕು? ಇಂಥ ನೋಟಿಸ್ಗಳನ್ನು ಉಳಿದ ಧರ್ಮಗಳ ಕಾರ್ಯಕ್ರಮಗಳಿಗೂ ನೀಡುತ್ತೀರಾ? ಎಂದು ನಾನು ಪಿಣರಾಯಿ ವಿಜಯನ್ ಸರ್ಕಾರಕ್ಕೆ ಕೇಳಲು ಬಯಸುತ್ತೇನೆ. ಕೂಡಲೇ ಜಿಲ್ಲಾಡಳಿತ ಈ ನೋಟಿಸ್ನ್ನು ವಾಪಸ್ ಪಡೆಯಬೇಕು‘ ಎಂದು ಕೇರಳ ಬಿಜೆಪಿ ಕಾರ್ಯದರ್ಶಿ ಎಸ್.ಸುರೇಶ್ ಆಗ್ರಾಹಿಸಿದ್ದಾರೆ.
ಇದನ್ನೂ ಓದಿ: ಆರ್‌ಎಸ್‌ಎಸ್ ಶಿಸ್ತು ಕಲಿಸುತ್ತದೆ; ಕೋಟಿ ಕೋಟಿ ಮಾಡಿ ಅಂತ ಹೇಳಿಕೊಟ್ಟಿಲ್ಲ: ಪರಿಷತ್‌ನಲ್ಲಿ ಜೆಡಿಎಸ್ ಸದಸ್ಯ ಭೋಜೇಗೌಡ ಮಾತು
‘ಬಿಜೆಪಿ ಮತ್ತು ಆರ್ಎಸ್ಎಸ್ನವರು ದೇವಸ್ಥಾನಗಳನ್ನು ಒಂದು ಪಕ್ಷಕ್ಕೆ ಸೀಮಿತಗೊಳಿಸುತ್ತಿದ್ದಾರೆ. ಆರ್‌ಎಸ್‌ಎಸ್ ಮತ್ತು ವಿಶ್ವ ಹಿಂದು ಪರಿಷತ್ನ ಬಾವುಟಗಳ ಬಣ್ಣ ಯಾವುದು ಎಂದು ಎಲ್ಲರಿಗೂ ಗೊತ್ತಿದೆ. ಅವರು ಜನರ ದಾರಿ ತಪ್ಪಿಸಲು ಸಾಧ್ಯವೇ ಇಲ್ಲ. ಈ ದೇಗುಲ ಸಮಿತಿ ಆರ್ಎಸ್ಎಸ್ಗೆ ಸೇರಿದ್ದು ಎಂಬುದನ್ನು ತೋರಿಸುವ ಸಲುವಾಗಿಯೇ ಹೀಗೆ ಕೇಸರಿ ಅಲಂಕಾರ ಮಾಡುತ್ತಿದ್ದಾರೆ’ ಎಂದು ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ವಿ.ಜಾಯ್ ತಿಳಿಸಿದ್ದಾರೆ.