ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath)ರಿಗೆ ಜೀವ ಬೆದರಿಕೆ ಕರೆ/ಸಂದೇಶ/ಇಮೇಲ್ಗಳು ಹೊಸದಲ್ಲ. ಇದೀಗ ಮತ್ತೆ ಅವರಿಗೆ ಜೀವ ತೆಗೆಯುವುದಾಗಿ ಬೆದರಿಕೆ ಬಂದಿದೆ (Death Threat to Yogi Adityanath). ಉತ್ತರ ಪ್ರದೇಶದಲ್ಲಿ ಜನಸಾಮಾನ್ಯರು ತುರ್ತು ಸಂದರ್ಭ ಎದುರಾದಾಗ ಕರೆ ಮಾಡಲೆಂದು ನಿಗದಿಪಡಿಸಿರುವ 112 ಸಂಖ್ಯೆಗೆ ವ್ಯಕ್ತಿಯೊಬ್ಬ ಕರೆ ಮಾಡಿ, ‘ನಾನು ಸಿಎಂ ಯೋಗಿಯನ್ನು ಶೀಘ್ರವೇ ಕೊಲ್ಲುತ್ತೇನೆ’ ಎಂದು ಹೇಳಿದ್ದಾನೆ. 112 ನಂಬರ್ಗೆ ಈ ಕರೆ ಬರುತ್ತಿದ್ದಂತೆ ಇದನ್ನು ಆಪರೇಟ್ ಮಾಡುವ ಕಮಾಂಡರ್ ಕೂಡಲೇ ಉತ್ತರ ಪ್ರದೇಶದ ಸುಶಾಂತ್ ಗೋಲ್ಫ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಅಷ್ಟೇ ಅಲ್ಲ, ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ವಾಟ್ಸ್ಆ್ಯಪ್ಗೂ ಇದೇ ಮೆಸೇಜ್ ಕಳಿಸಿದ್ದಾನೆ. ಆತನ ವಾಟ್ಸ್ಆ್ಯಪ್ ಡಿಪಿಯಲ್ಲಿ ಅಲ್ಲಾ ಎಂದು ಬರೆದುಕೊಂಡಿದೆ. ಕರೆ ಮಾಡಿದವನ ಹೆಸರು ರಿಹಾನ್ ಎಂದು ಗುರುತಿಸಲಾಗಿದ್ದು, ಕೇಸ್ ದಾಖಲಿಸಲಾಗಿದೆ. ಉತ್ತರ ಪ್ರದೇಶ ಉಗ್ರ ನಿಗ್ರಹ ದಳ (UP ATS)ಕ್ಕೂ ಮಾಹಿತಿ ರವಾನೆ ಮಾಡಲಾಗಿದೆ. ಎಟಿಎಸ್ ಫುಲ್ ಅಲರ್ಟ್ ಆಗಿದೆ. ಇನ್ನು ಯೋಗಿ ಆದಿತ್ಯನಾಥ್ಗೆ ಹೀಗೆ ಪದೇಪದೇ ಬೆದರಿಕೆ ಬರುತ್ತಲೇ ಇರುತ್ತದೆ. ಇತ್ತೀಚೆಗೆ ಬಿಹಾರದ 16ವರ್ಷದ ಹುಡುಗನೊಬ್ಬ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಜೀವ ಬೆದರಿಕೆಯೊಡ್ಡಿದ್ದ. ಮಾಧ್ಯಮ ಸಂಸ್ಥೆಯೊಂದಕ್ಕೆ ಆತ ಕರೆ ಮಾಡಿದ್ದ. ಬಳಿಕ ಅವನನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: Atiq Ahmed Murder: ಅತೀಕ್ ಅಹ್ಮದ್-ಅಶ್ರಫ್ ಅಹ್ಮದ್ ಹತ್ಯೆಯಾದ ತಕ್ಷಣ ಸಿಎಂ ಯೋಗಿ ಆದಿತ್ಯನಾಥ್ ಮಾಡಿದ್ದೇನು?
ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಹಲವು ಬೆಳವಣಿಗೆಗಳು ಆಗಿವೆ. ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ ಮತ್ತು ಅವನ ಸಹೋದರ ಅಶ್ರಫ್ ಅಹ್ಮದ್ ಹತ್ಯೆಯಾಗಿದೆ. ಅತೀಕ್ ಪುತ್ರ ಅಸಾದ್ನನ್ನು ಪೊಲೀಸರೇ ಎನ್ಕೌಂಟರ್ ಮಾಡಿದ್ದಾರೆ. ಈ ಅತೀಕ್ಗೆ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಜತೆ ಸಂಪರ್ಕವಿತ್ತು ಎಂದು ಆತನೇ ಒಪ್ಪಿಕೊಂಡಿದ್ದ. ‘ಮಾಫಿಯಾಗಳಿಗೆ ಮಣ್ಣು ಮುಕ್ಕಿಸುತ್ತೇವೆ’ ಎಂದು ಯೋಗಿ ಆದಿತ್ಯನಾಥ್ ಘಂಟಾಘೋಷವಾಗಿ ಘೋಷಣೆ ಮಾಡಿದ್ದಾರೆ. ಏಪ್ರಿಲ್ 24ರಂದು ಕೂಡ ಅಮ್ರೋಹಾದಲ್ಲಿ ಭಾಷಣ ಮಾಡಿದ್ದ ಯೋಗಿ ಆದಿತ್ಯನಾಥ್, ನಾವು ಮಾಫಿಯಾ ನಿರ್ಮೂಲನೆಯಲ್ಲಿ ಯಶಸ್ವಿಯಾಗಿದ್ದೇವೆ ಎಂದಿದ್ದರು. ಅದರ ಬೆನ್ನಲ್ಲೇ ಅವರಿಗೆ ಜೀವ ಬೆದರಿಕೆ ಎದುರಾಗಿದೆ.