Site icon Vistara News

ಹೊಸ ಮದರಸಾಗಳಿಗೆ ಇಲ್ಲ ಅನುದಾನ; ಯೋಗಿ ಆದಿತ್ಯನಾಥ್‌ ಸರ್ಕಾರದ ನೂತನ ನಿಯಮ

Uttar Pradesh Government

ಲಖನೌ: ಉತ್ತರ ಪ್ರದೇಶದಲ್ಲಿ ಇನ್ನು ಮುಂದೆ ಹೊಸದಾಗಿ ನಿರ್ಮಾಣ ಆಗುವ ಯಾವುದೇ ಹೊಸ ಮದರಸಾಗಳಿಗೂ ರಾಜ್ಯ ಸರ್ಕಾರ (Uttar Pradesh Government) ದಿಂದ ಅನುದಾನ ಸಿಗುವುದಿಲ್ಲ. ರಾಜ್ಯದಲ್ಲಿ ಹೊಸದಾಗಿ ನಿರ್ಮಾಣವಾಗುವ ಮದರಸಾಗಳನ್ನು ಅನುದಾನ ಪಟ್ಟಿಯಿಂದ ಹೊರಗಿಡಬೇಕು ಎಂಬ ಪ್ರಸ್ತಾಪಕ್ಕೆ, ಮೇ 17ರಂದು ನಡೆದ ಸಂಪುಟ ಸಭೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಅನುಮೋದನೆ ನೀಡಿದೆ ಎಂದು ಸುದ್ದಿ ಮಾಧ್ಯಮ ಎಎನ್‌ಐ ವರದಿ ಮಾಡಿದೆ. ಉತ್ತರ ಪ್ರದೇಶ ಸರ್ಕಾರ 2021-22ರ ಬಜೆಟ್‌ನಲ್ಲಿ ಮದರಸಾ ಆಧುನೀಕರಣ ಯೋಜನೆಯಡಿ 479 ಕೋಟಿ ರೂಪಾಯಿಯನ್ನು ಮೀಸಲಿಟ್ಟಿತ್ತು. ಉತ್ತರ ಪ್ರದೇಶದಲ್ಲಿ ಒಟ್ಟು 16 ಸಾವಿರ ನೋಂದಾಯಿತ ಮದರಸಾಗಳಿದ್ದು, 20 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಇದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಒಟ್ಟು 558 ಮದರಸಾಗಳು ಸರ್ಕಾರದಿಂದ ನೆರವು ಪಡೆದಿವೆ.

ಉತ್ತರ ಪ್ರದೇಶದಲ್ಲಿ ಮದರಸಾಗಳಲ್ಲಿ ಕಡ್ಡಾಯವಾಗಿ ರಾಷ್ಟ್ರಗೀತೆ ಹಾಡಬೇಕು ಎಂದು ಇತ್ತೀಚೆಗಷ್ಟೇ ಮುಖ್ಯಮಂತ್ರಿ ಆದಿತ್ಯನಾಥ್‌ ಆದೇಶ ಹೊರಡಿಸಿದ್ದರು. ಮದರಸಾದಲ್ಲಿ ಕಲಿಯುವ ವಿದ್ಯಾರ್ಥಿಗಳಲ್ಲಿ ಕೂಡ ದೇಶ ಭಕ್ತಿ ಬೆಳೆಯಬೇಕು. ಅಲ್ಪಸಂಖ್ಯಾತ ಸಮುದಾಯದವರಿಗೆ ಮದರಸಾ ಶಿಕ್ಷಣ ಅತ್ಯಂತ ಮುಖ್ಯ. ಇಲ್ಲಿ ಪ್ರತಿದಿನ ರಾಷ್ಟ್ರಗೀತೆ ಹಾಡುವುದರಿಂದ ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ ಉತ್ತೇಜಿತಗೊಳ್ಳುತ್ತದೆ. ಅವರು ಸಮಾಜದ ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ಸರ್ಕಾರ ನೂತನ ಆದೇಶ ತಂದಿದೆ ಎಂದು ರಾಜ್ಯ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ದನೀಶ್‌ ಆಜಾದ್‌ ಅನ್ಸಾರಿ ಹೇಳಿದ್ದರು.

ಇದನ್ನೂ ಓದಿ | ಅಂಜನಾದ್ರಿಗೆ ಆಗಮಿಸಲು ಯೋಗಿ ಆದಿತ್ಯನಾಥರಿಗೆ ಆಹ್ವಾನ

ಉತ್ತರ ಪ್ರದೇಶದಲ್ಲಿ ಮದರಸಾಗಳ ಶಿಕ್ಷಣ ವ್ಯವಸ್ಥೆಯನ್ನು ನವೀಕರಿಸಲು ರಾಜ್ಯ ಸರ್ಕಾರ ಪ್ರಯತ್ನ ಮಾಡುತ್ತಿದೆ. ಇಲ್ಲಿ ಈಗ ವಿದ್ಯಾರ್ಥಿಗಳು ಧಾರ್ಮಿಕ ವಿಚಾರಗಳೊಂದಿಗೆ ಗಣಿತ, ವಿಜ್ಞಾನ ಮತ್ತು ಕಂಪ್ಯೂಟರ್‌ ಶಿಕ್ಷಣವನ್ನೂ ನೀಡಲಾಗುತ್ತಿದೆ ಎಂದೂ ಸಚಿವರು ಮಾಹಿತಿ ನೀಡಿದ್ದಾರೆ. ಸರ್ಕಾರದ ಹೊಸ ಆದೇಶದಂತೆ ಮದರಸಾಗಳಲ್ಲಿ ಈಗ ರಾಷ್ಟ್ರಗೀತೆ ಕಡ್ಡಾಯವಾಗಿದ್ದು, ತರಗತಿ ಪ್ರಾರಂಭಕ್ಕೂ ಮೊದಲು ವಿದ್ಯಾರ್ಥಿಗಳು ʼಜನ ಗಣ ಮನ..ʼ ಹಾಡಲೇಬೇಕು. ಯುಪಿ ಸರ್ಕಾರದ ಈ ಹೊಸ ನಿಯಮವನ್ನು ಕೇವಲ ಆ ರಾಜ್ಯದಲ್ಲಷ್ಟೇ ಅಲ್ಲದೆ, ಬೇರೆ ರಾಜ್ಯಗಳ ಜನರೂ ಶ್ಲಾಘಿಸಿದ್ದಾರೆ.

ಸಿನಿಮಾ ಹಾಲ್‌ಗಳಲ್ಲಿ ಚಲನಚಿತ್ರ ಪ್ರದರ್ಶನಕ್ಕೂ ಮುನ್ನ ರಾಷ್ಟ್ರಗೀತೆ ಹಾಡಬೇಕು ಎಂಬ ಆದೇಶವನ್ನು ಸುಪ್ರೀಂಕೋರ್ಟ್‌ 2016ರಲ್ಲಿ ಜಾರಿಗೊಳಿಸಿದೆ. ಅದರಂತೆ ಎಲ್ಲ ಚಲನಚಿತ್ರ ಮಂದಿರಗಳಲ್ಲೂ ಪ್ರಾರಂಭದಲ್ಲಿ ರಾಷ್ಟ್ರಗೀತೆ ಪ್ರಸಾರ ಮಾಡಲಾಗುತ್ತಿತ್ತು. ವೀಕ್ಷಕರೂ ಎದ್ದು ನಿಂತು ಗೌರವ ಸೂಚಿಸುತ್ತಿದ್ದರು. 2016ರಲ್ಲಿ ಮೊದಲ ಬಾರಿ ಆದೇಶ ನೀಡಿದಾಗ ಸುಪ್ರೀಂಕೋರ್ಟ್‌ ಇದನ್ನು ಕಡ್ಡಾಯ ಮಾಡಿತ್ತು. ಅದಾದ ಎರಡು ವರ್ಷಗಳ ಬಳಿಕ ತೀರ್ಪನ್ನು ಮತ್ತೊಮ್ಮೆ ಪರಿಷ್ಕರಿಸಿ, ಚಲನಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯವಲ್ಲ. ಕೇಂದ್ರ ಸರ್ಕಾರ ಇದಕ್ಕಾಗಿ ಒಂದು ಸೂಕ್ತ ಮಾರ್ಗದರ್ಶಿ ಹೊರಡಿಸಬೇಕು ಎಂದಿತ್ತು.

ಇದನ್ನೂ ಓದಿ | ವಿದ್ಯಾರ್ಥಿನಿಯನ್ನು ವೇದಿಕೆಗೆ ಕರೆದಿದ್ದಕ್ಕೆ ಛೀಮಾರಿ ಹಾಕಿದ ಮುಸ್ಲಿಂ ವಿದ್ವಾಂಸನ ವಿರುದ್ಧ ಕೇರಳ ರಾಜ್ಯಪಾಲ ಗರಂ

Exit mobile version