ಲಖನೌ: ಉತ್ತರ ಪ್ರದೇಶ ಸರ್ಕಾರ (Uttar Pradesh Government) ಜೈಲು ನೀತಿಯಲ್ಲಿ ತಿದ್ದುಪಡಿ ಮಾಡಿದೆ. ಅದರ ಅನ್ವಯ ಇನ್ನು, 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜೀವಾವಧಿ ಶಿಕ್ಷಿತ ಕೈದಿಗಳೂ ಸಹ ಅವಧಿಪೂರ್ವವಾಗಿಯೇ ಜೈಲಿನಿಂದ ಬಿಡುಗಡೆಗೊಳಿಸುವಂತೆ ಮನವಿ ಸಲ್ಲಿಸಬಹುದು. ಈ ಹಿಂದೆ ಇದಕ್ಕೆ ಅವಕಾಶ ಇರಲಿಲ್ಲ. ಜೀವಾವಧಿ ಶಿಕ್ಷೆಗೆ ಗುರಿಯಾದ ಕೈದಿಗಳು ಅವಧಿ ಪೂರ್ವವಾಗಿ ಬಿಡುಗಡೆಗೆ ಮನವಿ ಮಾಡಬೇಕು ಎಂದರೆ ಅವರು, ಯಾವುದೇ ವಿನಾಯಿತಿ ಇಲ್ಲದೆ 20 ವರ್ಷ ಜೈಲು, ವಿನಾಯಿತಿಯೊಂದಿಗೆ 25 ವರ್ಷ ಜೈಲು ಶಿಕ್ಷೆ ಅನುಭವಿಸಿರಬೇಕಿತ್ತು ಮತ್ತು ಆ ಕೈದಿಗೆ ಕಡ್ಡಾಯವಾಗಿ 60 ವರ್ಷ ತುಂಬಬೇಕಿತ್ತು. (ವಿನಾಯಿತಿಯೊಂದಿಗೆ ಜೈಲು ಶಿಕ್ಷೆ ಎಂದರೆ, ಮಧ್ಯೆ ಏನಾದರೂ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರೆ ಅಥವಾ ಪೆರೋಲ್ ಪಡೆದು ಜೈಲಿನಿಂದ ಹೊರಬರುವುದು).
ಹೀಗೆ ಜೀವಾವಧಿ ಶಿಕ್ಷೆಗೆ ಗುರಿಯಾದವರ ಅವಧಿ ಪೂರ್ವ ಬಿಡುಗಡೆಗೆ 60 ವರ್ಷ ವಯಸ್ಸಿನ ಮಿತಿ ಹೇರಿದ್ದರ ಬಗ್ಗೆ ಸುಪ್ರೀಂಕೋರ್ಟ್ ಆಕ್ಷೇಪ ವ್ಯಕ್ತಪಡಿಸಿತ್ತು ಮತ್ತು ನೀತಿಯನ್ನು ಮರುಪರಿಶೀಲನೆ ಮಾಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚನೆ ನೀಡಿತ್ತು. ವಿನಾಯಿತಿ ಇಲ್ಲದೆ 22ವರ್ಷ ಮತ್ತು ವಿನಾಯಿತಿಯೊಂದಿಗೆ 28 ವರ್ಷ ಜೈಲು ಶಿಕ್ಷೆ ಅನುಭವಿಸಿದ, ಇನ್ನೂ 60 ವರ್ಷ ವಯಸ್ಸಾಗದ ಕೈದಿಯೊಬ್ಬ ತನ್ನ ಅವಧಿ ಪೂರ್ವ ಬಿಡುಗಡೆಗಾಗಿ ಮನವಿ ಮಾಡಿದ್ದ. ಆತನಿಗೆ ಜಾಮೀನು ನೀಡಲು ಸರ್ಕಾರದ ನೀತಿ ಅಡ್ಡವಾಗಿತ್ತು. ಹೀಗಾಗಿ ಆತ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ. ಆತನ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಎಂ.ಎಂ. ಸುಂದ್ರೇಶ್ ಅವರನ್ನೊಳಗೊಂಡ ಪೀಠ, ಹೀಗೆ ಕೈದಿಗಳ ಅವಧಿಪೂರ್ವ ಬಿಡುಗಡೆಗೆ ವಯಸ್ಸಿನ ಮಿತಿ ಹಾಕಿದ್ದು ಸಮರ್ಥನೀಯವಲ್ಲ. ಹಾಗಾಗಿ ನೀತಿ ಮರು ಪರಿಶೀಲನೆ ಮಾಡಿ ಎಂದು ಹೇಳಿತ್ತು. ಅದರಂತೆ ಉತ್ತರ ಪ್ರದೇಶ ಸರ್ಕಾರ ಜೈಲು ನೀತಿ ತಿದ್ದುಪಡಿ ಮಾಡಿದೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಈ ಬಾರಿ ರಸ್ತೆಯಲ್ಲಿ ನಮಾಜ್ ನಡೆದಿಲ್ಲ: ಇತಿಹಾಸದಲ್ಲೆ ಮೊದಲು
ಇದೀಗ ಪರಿಷ್ಕೃತ ನೀತಿಯ ಅನ್ವಯ, ಕೊಲೆ ಅಥವಾ ಇನ್ನಿತರ ಯಾವುದೇ ಅಪರಾಧಗಳನ್ನು ಮಾಡಿ ಜೀವಿತಾವಧಿ ಶಿಕ್ಷೆ ಪಡೆದ ಕೈದಿ, ವಿನಾಯಿತಿ ಇಲ್ಲದೆ 16ವರ್ಷ ಮತ್ತು ವಿನಾಯಿತಿಯೊಂದಿಗೆ 20ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರೆ, ಅಂಥವರು ಬಿಡುಗಡೆಗೆ ಕೋರಿ ಅರ್ಜಿ ಸಲ್ಲಿಸಬಹುದು. ಅಂಥವರ ಮನವಿಯನ್ನು ಸರ್ಕಾರ ಪರಿಗಣಿಸಲಿದೆ ಮತ್ತು ಪರಿಶೀಲನೆ ಬಳಿಕ ಜೈಲಿನಿಂದ ಬಿಡುಗಡೆಯನ್ನೂ ಮಾಡಲಿದೆ.
ಈ ಹೊಸ ಜೈಲು ನೀತಿಯಿಂದ ಅನೇಕ ಕೈದಿಗಳಿಗೆ ಸಹಾಯವಾಗುತ್ತದೆ. ರಾಜ್ಯಾದ್ಯಂತ ಬಹುತೇಕ ಕಾರಾಗೃಹಗಳು ಕೈದಿಗಳ ದಟ್ಟಣೆಯಿಂದ ಕೂಡಿವೆ. ನೀತಿ ತಿದ್ದುಪಡಿ ಮಾಡಿದ್ದರಿಂದ ಒಂದಷ್ಟು ಕೈದಿಗಳು ಕಡಿಮೆಯಾಗಲಿದ್ದಾರೆ ಎಂದು ಉತ್ತರ ಪ್ರದೇಶ ಕಾರಾಗೃಹ ಮಹಾನಿರ್ದೇಶಕ ಆನಂದ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ ಅಪಘಾತದಲ್ಲಿ ಏಳು ಕನ್ನಡಿಗರ ಸಾವು: ಯೋಗಿ ಆದಿತ್ಯನಾಥ ಜತೆ CM ಬೊಮ್ಮಾಯಿ ಮಾತು