Site icon Vistara News

Global Investors Summit: ಉತ್ತರ ಪ್ರದೇಶದ ದೃಷ್ಟಿಕೋನ ಬದಲಾಗಿದೆ, ಹೂಡಿಕೆದಾರರಿಗೆ ಸ್ವಾಗತ ಎಂದ ಪ್ರಧಾನಿ ಮೋದಿ

Uttar Pradesh has changed its approach Says PM Modi in Global Investors Summit

#image_title

ಇಂದಿನಿಂದ ಮೂರು ದಿನಗಳ ಕಾಲ ಉತ್ತರ ಪ್ರದೇಶದ ಲಖನೌನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಶೃಂಗಸಭೆ (Uttar Pradesh Global Investors Summit 2023)ಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದರು. ಬಳಿಕ ಮಾತನಾಡಿ, ‘ಈ ಶೃಂಗಸಭೆಗೆ ಎಲ್ಲ ಹೂಡಿಕೆದಾರರನ್ನೂ ಸ್ವಾಗತಿಸುತ್ತೇನೆ. ಈಗ ಉತ್ತರ ಪ್ರದೇಶದಲ್ಲಿ ಉತ್ತಮ ಆಡಳಿತವಿದೆ. ಶಾಂತಿ ಮತ್ತು ಕಾನೂನು-ಸುವ್ಯವಸ್ಥೆ, ಸ್ಥಿರತೆ ಇದೆ’ ಎಂದು ಹೇಳಿದರು.

‘ಮೂಲ ಸೌಕರ್ಯಗಳ ಅಭಿವೃದ್ಧಿ ಮಾಡುವ ಜತೆ, ಉತ್ತರ ಪ್ರದೇಶ ರಾಜ್ಯ ತನ್ನ ಯೋಚನಾ ರೀತಿ ಮತ್ತು ದೃಷ್ಟಿಕೋನವನ್ನು ಬದಲಿಸಿಕೊಂಡಿದೆ. ಇದರಿಂದಾಗಿ ನೀವಿಲ್ಲಿ ಉದ್ಯಮವನ್ನು ಸಲೀಸಾಗಿ ಮಾಡಬಹುದು. ವಿದ್ಯುತ್​​ನಿಂದ ಸಂಪರ್ಕ ಕ್ಷೇತ್ರದವರೆಗೆ ಪ್ರತಿ ವಲಯದಲ್ಲೂ ಅದ್ಭುತವಾಗಿ ಅಭಿವೃದ್ಧಿಯಾಗಿದೆ. ನವ ಭಾರತದ ಬೆಳವಣಿಗೆಗೆ ಇದು ಪೂರಕವಾಗಿದೆ. ಒಟ್ಟಾರೆ ರಾಜ್ಯ ಸಮಗ್ರ ಅಭಿವೃದ್ಧಿ ಕಾಣುತ್ತಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.
‘ಹೈನುಗಾರಿಕೆ, ಮೀನುಗಾರಿಕೆ, ಕೃಷಿ, ಆಹಾರ ಸಂಸ್ಕರಣಾ ವಲಯ, ನೈಸರ್ಗಿಕ ಬೇಸಾಯ ಕ್ಷೇತ್ರದಲ್ಲಿ ಉತ್ತರ ಪ್ರದೇಶ ಸರ್ಕಾರವು ಹಲವು ವಿನೂತನ ಉಪಕ್ರಮಗಳನ್ನು ಕೈಗೊಂಡಿದೆ. ಭಾರತವು ಸದ್ಯ ಬೆಳೆ ವೈವಿಧ್ಯೀಕರಣದತ್ತ ಗಮನಹರಿಸುತ್ತಿದೆ. ಹಾಗೇ, ರೈತರ ವೆಚ್ಚ ಕಡಿಮೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ನೈಸರ್ಗಿಕ ವ್ಯವಸಾಯ ಪದ್ಧತಿ ಉತ್ತೇಜನಕ್ಕೆ ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ‘ಇಡೀ ದೇಶದ ಅಭಿವೃದ್ಧಿಗೆ ಉತ್ತರ ಪ್ರದೇಶ ಅಪಾರ ಕೊಡುಗೆ ನೀಡುತ್ತಿರುವುದು ಹೆಮ್ಮೆಯ ವಿಷಯ, ಈ ರಾಜ್ಯ ಹೂಡಿಕೆದಾರರ ಪಾಲಿಗೆ ದೊಡ್ಡ ಹಬ್​ ಆಗಿ ವಿಕಾಸಗೊಳ್ಳುತ್ತಿದೆ’ ಎಂದು ಹೇಳಿದರು.

‘ಉತ್ತರ ಪ್ರದೇಶವನ್ನು ಅಭಿವೃದ್ಧಿಗೊಳಿಸುವುದು ದೊಡ್ಡ ಸವಾಲು ಎಂದು ಈ ಹಿಂದೆ ಅನೇಕರು ಹೇಳಿದ್ದರು. ಅದರಲ್ಲೂ ಇಲ್ಲಿನ ಕಾನೂನು-ಸುವ್ಯವಸ್ಥೆಯಂತೂ ಸುಧಾರಿಸಲು ಸಾಧ್ಯವೇ ಇಲ್ಲ ಎಂದು ಹೇಳಲಾಗುತ್ತಿತ್ತು. ಬರಿ ಹಗರಣಗಳಿಗೇ ಈ ರಾಜ್ಯ ಹೆಸರಾಗಿತ್ತು. ಅಭಿವೃದ್ಧಿಯ ಭರವಸೆಯೇ ಇರಲಿಲ್ಲ. ಆದರೆ ನಮ್ಮ ಸರ್ಕಾರ ಬಂದ ಮೇಲೆ ಸಂಪೂರ್ಣ ಬದಲಾಗಿದೆ. ಸಾಮಾಜಿಕ, ಭೌತಿಕ ಮತ್ತು ಡಿಜಿಟಲ್​ ಮೂಲಸೌಕರ್ಯ ಪ್ರಮಾಣ ಏರಿಕೆಯಾಗಿದೆ. ಹೂಡಿಕೆದಾರರ ಅನುಕೂಲಕ್ಕೆ ಇಲ್ಲಿನ ಆರೋಗ್ಯ, ಶಿಕ್ಷಣ, ಹಸಿರೀಕರಣ, ಸಾಮಾಜಿಕ ಮೂಲಸೌಕರ್ಯಗಳು ಪೂರಕವಾಗಲಿವೆ’ ಎಂದು ಹೇಳಿದರು.

ಇದನ್ನೂ ಓದಿ: Reliance Industries : ಉತ್ತರಪ್ರದೇಶದಲ್ಲಿ ರಿಲಯನ್ಸ್‌ನಿಂದ 75,000 ಕೋಟಿ ರೂ. ಹೂಡಿಕೆ: ಮುಕೇಶ್‌ ಅಂಬಾನಿ

ಉತ್ತರ ಪ್ರದೇಶದಲ್ಲಿ ಹೂಡಿಕೆ ಪ್ರಮಾಣವನ್ನು ಹೆಚ್ಚಿಸಬೇಕು ಎಂಬ ಕಾರಣಕ್ಕೆ ಎಲ್ಲ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ. ಆ ನಿಟ್ಟಿನಲ್ಲಿ ವಿಶ್ವದೆಲ್ಲೆಡೆಯ ನೀತಿ ನಿರೂಪಕರು, ಉದ್ಯಮ ವಲಯದ ಪ್ರಮುಖರು, ಚಿಂತಕರು, ಶೈಕ್ಷಣಿಕ ವಲಯದ ಪ್ರಮುಖರನ್ನು ಒಟ್ಟುಗೂಡಿಸಿ, ಸೆಳೆಯುವ ಸಲುವಾಗಿ ಇಲ್ಲಿ ಜಾಗತಿಕ ಹೂಡಿಕೆದಾರರ ಶೃಂಗಸಭೆ ಆಯೋಜಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಟ್ರಿಲಿಯನ್​ ಡಾಲರ್​ ಆರ್ಥಿಕತೆ ಹೊಂದುವ ಗುರಿ ಹೊಂದಿರುವ ಉತ್ತರ ಪ್ರದೇಶ, ಪ್ರಸಕ್ತ ಶೃಂಗಸಭೆಯಲ್ಲಿ 25 ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹೂಡಿಕೆ ಪ್ರಸ್ತಾಪಗಳನ್ನು ಇಟ್ಟಿದೆ.

Exit mobile version