ಲಖನೌ: ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಮತ್ತು ಬಿಜೆಪಿ ನಾಯಕರ ನಡುವೆ ವಾಗ್ವಾದ ಪ್ರಾರಂಭವಾಗಿದೆ. ‘100 ಶಾಸಕರೊಂದಿಗೆ ಬನ್ನಿ, ಸಿಎಂ ಪೋಸ್ಟ್ ಕೊಡುತ್ತೇವೆ’ ಎಂದು ಕರೆದ ಅಖಿಲೇಶ ಯಾದವ್‌ಗೆ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ತಿರುಗೇಟು ಕೊಟ್ಟು, ‘ನೀವು ಹತಾಶರಾಗಿದ್ದೀರಿ ಎಂದು ನಮಗೆ ಗೊತ್ತಿದೆ, ಹಾಗಂತ ಅಸಂಬದ್ಧ ಹೇಳಿಕೆ ನೀಡಬೇಡಿ’ ಎಂದು ಹೇಳಿದ್ದಾರೆ.
ಇತ್ತೀಚೆಗೆ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಸಂದರ್ಶನಕೊಟ್ಟಿದ್ದ ಅಖಿಲೇಶ್ ಯಾದವ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅದರಲ್ಲೂ ಮುಖ್ಯವಾಗಿ ಅಲ್ಲಿನ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯರನ್ನು ಟಾರ್ಗೆಟ್ ಮಾಡಿದ್ದರು. ‘ಅವರೊಬ್ಬ ದುರ್ಬಲ ರಾಜಕಾರಣಿ. ಆದರೆ ತಾವೂ ಮುಂದೆ ಮುಖ್ಯಮಂತ್ರಿಯಾಗಬೇಕು ಎಂಬ ಕನಸು ಕಟ್ಟಿದ್ದಾರೆ. ಬಿಹಾರ ರಾಜಕೀಯದಲ್ಲಿ ಏನಾಯಿತೋ ಅದನ್ನೇ ಉತ್ತರಪ್ರದೇಶದಲ್ಲಿ ಮಾಡಲು ಮೌರ್ಯ ಧೈರ್ಯ ಮಾಡಲಿ. ಅವರು ಬಿಜೆಪಿಯ 100 ಶಾಸಕರೊಂದಿಗೆ ನಮ್ಮ ಸಮಾಜವಾದಿ ಪಕ್ಷಕ್ಕೆ ಬಂದರೆ, ನಾವು ಸರ್ಕಾರ ರಚನೆ ಮಾಡುವ ಜತೆ, ಕೇಶವ್ ಪ್ರಸಾದ್ ಮೌರ್ಯನನ್ನೇ ಮುಖ್ಯಮಂತ್ರಿ ಮಾಡುತ್ತೇವೆ’ ಎಂದಿದ್ದರು.
ಅಖಿಲೇಶ್ ಯಾದವ್ರ ಈ ಮಾತುಗಳಿಗೆ ಕೇಶವ್ ಪ್ರಸಾದ್ ಮೌರ್ಯ ಪ್ರತಿಕ್ರಿಯೆ ನೀಡಿದ್ದಾರೆ. ಬಾರಾಬಂಕಿಯಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು ‘ಅಖಿಲೇಶ್ಗೆ ಅಧಿಕಾರ ಇಲ್ಲದೆ ಒಂಥರ ನೀರಿನಿಂದ ಹೊರಬಿದ್ದ ಮೀನಿನಂತೆ ಒದ್ದಾಡುತ್ತಿದ್ದಾರೆ. ಅವರ ಪಕ್ಷದ 111 ಶಾಸಕರಲ್ಲಿ 10 ರಿಂದ 11 ಮಂದಿಯಷ್ಟೇ ಎಸ್ಪಿಗೆ ನಿಷ್ಠರಾಗಿರಬಹುದು. ಉಳಿದ ನೂರೂ ಶಾಸಕರೂ ಪಕ್ಷ ಬಿಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ ನಮಗೆ ಸಮಾಜವಾದಿ ಪಕ್ಷವನ್ನು ಒಡೆಯಲು ಖಂಡಿತ ಇಷ್ಟವಿಲ್ಲ’ ಎಂದು ಹೇಳಿದ್ದಾರೆ.
ಇಂಥ ಮಾತುಗಳನ್ನಾಡಿದ ಅಖಿಲೇಶ್ ಯಾದವ್ ವಿರುದ್ಧ ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಭೂಪೇಂದ್ರ ಸಿಂಗ್ ಚೌಧರಿ ಕೂಡ ಕಿಡಿಕಾರಿದ್ದಾರೆ. ‘ಅಖಿಲೇಶ್ ಯಾದವ್ ಮೊದಲು ತನ್ನ ಕುಟುಂಬ ಮೈತ್ರಿ ಬಗ್ಗೆ ಯೋಚಿಸಲಿ. ಅವರ ಪಕ್ಷವನ್ನು ಉಳಿಸಿಕೊಳ್ಳಲಿ. ಸಮಾಜವಾದಿ ಪಾರ್ಟಿಯ ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ’ ಎಂದು ಹೇಳಿದ್ದಾರೆ. ಹಾಗೇ, ‘ಕೇಶವ್ ಪ್ರಸಾದ್ ಮೌರ್ಯ ಅವರು ಪಕ್ಷದ ಸಂಘಟನಾ ಕಾರ್ಯಕರ್ತ. ಅವರು ಸ್ವಾರ್ಥಿಯಲ್ಲ. ಪಕ್ಷದ ಸಿದ್ಧಾಂತಕ್ಕೆ ಸದಾ ಬದ್ಧರಾಗಿರುವವರು. ಅಖಿಲೇಶ್ ಯಾದವ್ರನ್ನು ಮೌರ್ಯ ಜೀ ನಿಯಂತ್ರಿಸುತ್ತಾರೆಯೇ ಹೊರತು, ಅಖಿಲೇಶ್ಗೆ ಇವರ ಮೇಲೆ ಪ್ರಭಾವ ಬೀರಲು ಸಾಧ್ಯವೇ ಇಲ್ಲ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಲೋಕಸಭೆಯಲ್ಲಿ ಸಮಾಜವಾದಿ ಪಕ್ಷದ ಸಂಸದರ ಸಂಖ್ಯೆ ಈಗ ಕೇವಲ 3ಕ್ಕೆ ಇಳಿಕೆ, ಅಖಿಲೇಶ್ ಯಾದವ್‌ಗೆ ತೀವ್ರ ಹಿನ್ನಡೆ