ಲಖನೌ: ಪ್ರತಿ ವರ್ಷ ಒಂದಿಲ್ಲೊಂದು ರಾಜ್ಯದಲ್ಲಿ ಚುನಾವಣೆ ನಡೆಯುತ್ತಲೇ ಇರುತ್ತದೆ. ಅದರಲ್ಲಿ ಎಷ್ಟೋ ಮಂದಿಯ ಹೆಸರೇ ಮತದಾರರ ಪಟ್ಟಿಯಿಂದ ಬಿಟ್ಟು ಹೋದ ಬಗ್ಗೆ ಸುದ್ದಿಗಳನ್ನು ಆಗಾಗ ಓದುತ್ತಿರುತ್ತೇವೆ. ಪಟ್ಟಿಯಲ್ಲಿ ಹೆಸರಿಲ್ಲದವರೂ ಸಹ ಹೆಚ್ಚೇನೂ ತಲೆಕೆಡಿಸಿಕೊಳ್ಳದೆ ಸುಮ್ಮನಾಗಿಬಿಡುತ್ತಾರೆ. ಆದರೆ ಕಳೆದ ವರ್ಷ ಉತ್ತರ ಪ್ರದೇಶದಲ್ಲಿ (Fight For Voting Rights ) ನಡೆದ ಚುನಾವಣೆಯಲ್ಲಿ ತನ್ನ ಹೆಸರು ಬಿಟ್ಟು ಹೋದ ಮಹಿಳೆಯೊಬ್ಬರು, ಸುಮ್ಮನೆ ಕೂರದೆ ಇದೇ ವಿಚಾರಕ್ಕೆ ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದಾರೆ. ಇದೀಗ ಅಧಿಕಾರಿಗಳ ವಿರುದ್ಧ ದೂರನ್ನೂ ದಾಖಲಿಸಿದ್ದಾರೆ.
ಇದನ್ನೂ ಓದಿ: Yakub Qureshi Arrested | ಮಾಂಸ ಮಾರಾಟ ದಂಧೆ, ಉತ್ತರ ಪ್ರದೇಶ ಮಾಜಿ ಸಚಿವ ಯಾಕೂಬ್ ಖುರೇಷಿ, ಪುತ್ರನ ಬಂಧನ
ಹೌದು. ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯ ರೋಶನ್‌ಪುರ ಗ್ರಾಮದ ಹೇಮಲತಾ ಹೆಸರಿನ ಮಹಿಳೆಯ ಹೆಸರು ಮತದಾರರ ಪಟ್ಟಿಯಿಂದಲೇ ಕಾಣೆಯಾಗಿತ್ತಂತೆ. ಜಾತಿ ದ್ವೇಷದಿಂದಾಗಿಯೇ ತಮ್ಮ ಹೆಸರನ್ನು ಬೇಕೆಂದು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಹೇಮಲತಾ ದೂರಿದ್ದಾರೆ. ಕಳೆದ ವರ್ಷವೇ ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಂತರ ಪೊಲೀಸ್ ಆಯುಕ್ತರ ಬಳಿಯೂ ತಮ್ಮ ದೂರು ನೀಡಿದ್ದಾರೆ.
ಪೊಲೀಸರ ಬಳಿ ನೀಡಿದ ದೂರಿನಿಂದ ಯಾವುದೇ ಪ್ರಯೋಜನವಾಗದ ಹಿನ್ನೆಲೆ ಹೇಮಲತಾ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನ್ಯಾಯಾಲಯವು ಈ ಅರ್ಜಿಯ ವಿಚಾರಣೆ ನಡೆಸಿದ್ದು, ಅಲ್ಲಿನ ಉಪ ವಿಭಾಗೀಯ ಮೆಜಿಸ್ಟ್ರೇಟ್ ಹಾಗೂ ಇಬ್ಬರು ತಹಸೀಲ್ದಾರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದೆ. ಆದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ.
ವಿರೋಧ ಪಕ್ಷಗಳು ಬೇಕೆಂದಲೇ ಮತದಾರರ ಹೆಸರನ್ನು ತೆಗೆಸಿರುವುದು ಕಂಡುಬಂದಿದೆ. ಹಾಗಾಗಿ ಪೊಲೀಸರು ಒಂದು ವಾರದೊಳಗೆ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ನ್ಯಾಯಾಲಯವೇ ಆದೇಶಿಸಿದ್ದರೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದ ಹಿನ್ನೆಲೆ ಮಹಿಳೆ ಮತ್ತೊಮ್ಮೆ ನ್ಯಾಯಾಲಯ ಮೆಟ್ಟಿಲೇರಿದ್ದಾಳೆ. ಪರಿಶಿಷ್ಟ ಜಾತಿ/ಪಂಗಡಕ್ಕೆ ಸೇರಿರುವ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವುದು ಕಾನೂನುಬಾಹಿರ ಎನ್ನುವ ಕಾನೂನಿದ್ದರೂ ಅದನ್ನು ಇಲ್ಲಿ ಉಲ್ಲಂಘಿಸಲಾಗಿದೆ ಎಂದು ಹೇಮಲತಾ ಪರ ವಕೀಲರು ನ್ಯಾಯಾಲಯಕ್ಕೆ ಹೇಳಿದ್ದಾರೆ. ಮತ್ತೊಮ್ಮೆ ನ್ಯಾಯಾಲಯವು ಈ ವಿಚಾರವಾಗಿ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರಿಗೆ ಸೂಚಿಸಿದೆ.
ಇದನ್ನೂ ಓದಿ: Sultanpuri Like Mishaps | ಉತ್ತರ ಪ್ರದೇಶದಲ್ಲಿ ದೆಹಲಿ ರೀತಿ 2 ಪ್ರತ್ಯೇಕ ಅಪಘಾತ, ಇಬ್ಬರ ದಾರುಣ ಸಾವು
ತೀರ್ಪು ಬಂದು ಎರಡು ತಿಂಗಳ ನಂತರ ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೂವರು ಅಧಿಕಾರಿಗಳೊಂದಿಗೆ ಈ ಅಕ್ರಮದಲ್ಲಿ ಭಾಗಿಯಾಗಿದ್ದ ಕೆಲವು ವ್ಯಕ್ತಿಗಳ ಬಗ್ಗೆಯೂ ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ. “ಇದು ನನಗೊಬ್ಬಳಿಗೇ ಆಗುವ ಮೋಸವಲ್ಲ. ಸಾಕಷ್ಟು ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ಬೇಕೆಂದಲೇ ತೆಗೆದುಹಾಕಿರುತ್ತಾರೆ. ಆದರೆ ಅವರೆಲ್ಲರೂ ಅಲ್ಲೇನೋ ಸಮಸ್ಯೆಯಾಗಿರಬಹುದು ಎಂದು ಸುಮ್ಮನಾಗಿಬಿಡುತ್ತಾರೆ. ಕೆಲವರು ಹೋರಾಡಲು ಹೆದರಿ ಸುಮ್ಮನಾಗುತ್ತಾರೆ. ಆದರೆ ಹಾಗೆ ಮಾಡುವುದಕ್ಕೆ ನಾನು ಸಿದ್ಧವಿರಲಿಲ್ಲ. ಹಾಗಾಗಿ ಹೋರಾಡಿ, ಗೆದ್ದಿದ್ದೇನೆ” ಎನ್ನುತ್ತಾರೆ ಹೇಮಲತಾ.