ಡೆಹ್ರಾಡೂನ್: ಉತ್ತರಾಖಂಡ್ನ ಹೆದ್ದಾರಿ ಮತ್ತು ಸಾಮಾಜಿಕ ಕಲ್ಯಾಣ ಇಲಾಖೆ ಸಚಿವ ಚಂದನ್ ರಾಮ್ ದಾಸ್ (Chandan Ram Das) ಅವರು ಇಂದು ಬಾಘೇಶ್ವರ್ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ 65ವರ್ಷ ವಯಸ್ಸಾಗಿತ್ತು. ಇಂದು ಮಧ್ಯಾಹ್ನ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತು ಮತ್ತು ಒಮ್ಮೆಲೇ ಆರೋಗ್ಯ ಕ್ಷೀಣವಾಯಿತು. ಕೂಡಲೇ ಸಚಿವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು, ಐಸಿಯುವಿನಲ್ಲಿ ಇಟ್ಟು ಚಿಕಿತ್ಸೆ ನೀಡಲಾಯಿತು. ಆದರೆ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬಿಜೆಪಿಯ ಹಿರಿಯ ನಾಯಕರಾಗಿದ್ದ ಚಂದನ್ ರಾಮ್ ದಾಸ್ ಅವರು 2007ರಿಂದಲೂ ಬಾಘೇಶ್ವರ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ನಾಲ್ಕು ಅವಧಿಗೆ ಶಾಸಕರಾದರೂ ಇದೇ ಮೊದಲ ಬಾರಿಗೆ ಸಚಿವರಾಗಿದ್ದರು.
ಚಂದನ್ ರಾಮ್ ದಾಸ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದಾರೆ. ‘ಉತ್ತರಾಖಂಡ್ ಸರ್ಕಾರದಲ್ಲಿ ಸಚಿವರಾಗಿದ್ದ ಚಂದನ್ ರಾಮ್ ದಾಸ್ ನಿಧನ ನೋವು ತಂದಿದೆ. ಉತ್ತರಾಖಂಡ್ ಅಭಿವೃದ್ಧಿಗೆ ಅವರು ಮಹತ್ವದ ಕೊಡುಗೆ ಕೊಟ್ಟಿದ್ದಾರೆ. ಉತ್ತರಾಖಂಡ್ ಜನರ ಸೇವೆಯನ್ನು ಶ್ರದ್ಧೆಯಿಂದ ಮಾಡಿದ್ದಾರೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಲಭ್ಯವಾಗಲಿ’ ಎಂದಿದ್ದಾರೆ. ಹಾಗೇ, ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಟ್ವೀಟ್ ಮಾಡಿ ‘ನನ್ನ ಕ್ಯಾಬಿನೇಟ್ನ ಸಹೋದ್ಯೋಗಿ ಚಂದನ್ ರಾಮ್ ದಾಸ್ ನಿಧನದ ವಾರ್ತೆ ಕೇಳಿ ಶಾಕ್ ಆಗಿದೆ. ರಾಜಕೀಯ ಮತ್ತು ಸಾಮಾಜಿಕ ಸೇವೆ ಈ ಎರಡೂ ಕ್ಷೇತ್ರಗಳಿಗೆ ಇದು ತುಂಬಲಾರದ ನಷ್ಟ’ ಎಂದಿದ್ದಾರೆ. ಇನ್ನಿತರ ಹಲವು ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ. ಸಚಿವರ ಸಾವಿನ ನಿಮಿತ್ತ ಉತ್ತರಾಖಂಡ್ನಲ್ಲಿ ಎಲ್ಲ ಕಡೆ ಸರ್ಕಾರಿ ಕಚೇರಿಗಳು ಇಂದು ಬಂದ್ ಆಗಿವೆ. ಮೂರು ದಿನ ಶೋಕಾಚರಣೆ ಘೋಷಿಸಲಾಗಿದೆ.