Site icon Vistara News

ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ ಸೊಸೆ; ಗುಂಡು ಹಾರಿಸಿಕೊಂಡು ಜೀವ ಬಿಟ್ಟ ಮಾಜಿ ಸಚಿವ

Rajendra Bahuguna

ಉತ್ತರಾಖಂಡ್‌: ಸೊಸೆ ಹೊರಿಸಿದ ಲೈಂಗಿಕ ದೌರ್ಜನ್ಯದ ಆಪಾದನೆಯ ಅವಮಾನ-ನೋವು ಸಹಿಸಲಾಗದೆ ಉತ್ತರಾಖಂಡ್‌ನ ಕಾಂಗ್ರೆಸ್‌ ಮಾಜಿ ಸಚಿವ ರಾಜೇಂದ್ರ ಬಹುಗುಣ (Rajendra Bahuguna) ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಸಾಯದಂತೆ ತಡೆಯಲು ಪೊಲೀಸರು ಎಷ್ಟೇ ಪ್ರಯತ್ನಪಟ್ಟರೂ ಸಫಲವಾಗಲಿಲ್ಲ. ವಾಟರ್‌ ಟ್ಯಾಂಕ್‌ ಮೇಲೆ ಹತ್ತಿ ನಿಂತು, ತಮಗೆ ತಾವೇ ಶೂಟ್‌ ಮಾಡಿಕೊಂಡಿದ್ದಾರೆ. ಇಂಥದ್ದೊಂದು ಭೀಕರ ಸಾವಿನ ದೃಶ್ಯಕ್ಕೆ ಮಾಜಿ ಸಚಿವರ ಕುಟುಂಬದವರು, ನೆರೆಮನೆಯವರೆಲ್ಲ ಸಾಕ್ಷಿಯಾಗಿದ್ದಾರೆ.

ಉತ್ತರಾಖಂಡನಲ್ಲಿ ಈ ಹಿಂದೆ ಕಾಂಗ್ರೆಸ್‌ನ ಎನ್‌.ಡಿ.ತಿವಾರಿ ಸರ್ಕಾರವಿದ್ದಾಗ 2004 ರಿಂದ 2005ರವರೆಗೆ ಸಚಿವ ಸ್ಥಾನ ಪಡೆದಿದ್ದ ರಾಜೇಂದ್ರ ಬಹುಗುಣ (59) ಅತಿ ಭೀಕರವಾಗಿ ಮತ್ತು ನೋವಿನಿಂದ ತಮ್ಮ ಜೀವನ ಅಂತ್ಯ ಮಾಡಿಕೊಂಡಿದ್ದಾರೆ. ಇವರು ಉತ್ತರಾಖಂಡ್‌ನ ಹಲ್ದ್ವಾನಿಯವರು. ಇತ್ತೀಚೆಗೆ ಇವರ ಸೊಸೆ ಬಹುಗುಣ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದರು. ರಾಜೇಂದ್ರ ಬಹುಗುಣ ತನ್ನ ಮಗಳಿಗೆ ಅಂದರೆ ಅವರ ಮೊಮ್ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ಬಹುಗುಣ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಇದರಿಂದ ಇವರು ತೀವ್ರವಾಗಿ ನೊಂದಿದ್ದರು.

ಇದನ್ನೂ ಓದಿ: ರಾಹುಲ್‌ ಗಾಂಧಿ ಹೆಸರಿಗೆ ಸಂಪೂರ್ಣ ಆಸ್ತಿ ಬರೆದುಕೊಟ್ಟ ಉತ್ತರಾಖಂಡ್‌ನ ಅಜ್ಜಿ!

ಇಂದು ಮೊದಲು ಪೊಲೀಸರಿಗೆ ಕರೆ ಮಾಡಿದ ಬಹುಗುಣ, ನಾನು ಇವತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. ಅಲ್ಲಿಂದಲೇ ಪೊಲೀಸರು ಬಹುಗುಣ ಅವರ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ಫೋನ್‌ ಕಟ್‌ ಮಾಡಿದ ಅವರು, ಕೂಡಲೇ ತಮ್ಮ ಮನೆಯ ನೀರಿನ ಟ್ಯಾಂಕ್‌ ಹತ್ತಿದ್ದಾರೆ. ಪೊಲೀಸರು ಕೂಡ ಧಾವಂತದಲ್ಲಿ ಬಹುಗುಣ ಮನೆಗೆ ಬಂದಿದ್ದಾರೆ. ಟ್ಯಾಂಕ್‌ ಮೇಲೆ ನಿಂತಿದ್ದ ಮಾಜಿ ಸಚಿವರಿಗೆ ಮೈಕ್‌ ಮೂಲಕವೇ ಪೊಲೀಸರು ಮನವಿ ಮಾಡುತ್ತಲೇ ಇದ್ದರು. ಆದರೆ ಒಂದು ಕ್ಷಣದಲ್ಲಿ ಗುಂಡು ಹಾರಿಸಿಕೊಂಡು ಎಲ್ಲರ ಕಣ್ಣೆದುರೇ ಸಾವನ್ನಪ್ಪಿದ್ದಾರೆ.

ವಾಟರ್‌ ಟ್ಯಾಂಕ್‌ ಮೇಲೆ ನಿಂತಿದ್ದಾಗಲೂ ಕೂಡ ತಮ್ಮ ಮೇಲಿನ ಆಪಾದನೆ ಸುಳ್ಳು ಎಂದೇ ಅವರು ಪದೇಪದೆ ಹೇಳುತ್ತಿದ್ದರು. ನಾನ್ಯಾವ ತಪ್ಪನ್ನೂ ಮಾಡಿಲ್ಲ. ನನ್ನ ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿಲ್ಲ. ನನ್ನ ಮೇಲೆ ಸುಳ್ಳು ಆಪಾದನೆ ಹೊರಿಸಲಾಗಿದೆ ಎಂದೇ ನೋವಿನಿಂದ ಕೂಗುತ್ತಿದ್ದರು ಎಂದು ಹಿರಿಯ ಪೊಲೀಸ್‌ ಅಧಿಕಾರಿ ಪಂಕಜ್‌ ಭಟ್‌ ತಿಳಿಸಿದ್ದಾರೆ. ಇದೀಗ ಬಹುಗುಣ ಪುತ್ರ ಅಜಯ್‌ ಬಹುಗುಣ ನೀಡಿದ ದೂರಿನ ಅನ್ವಯ, ರಾಜೇಂದ್ರ ಬಹುಗುಣ ವಿರುದ್ಧ ಆಪಾದನೆ ಮಾಡಿ ದೂರು ನೀಡಿದ್ದ ಅವರ ಸೊಸೆ, ಆಕೆಯ ತಂದೆ ಮತ್ತು ನೆರೆಮನೆಯ ಒಬ್ಬಾತನ ವಿರುದ್ಧ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: Drone Modi: ಮೋದಿ ಡ್ರೋನ್‌ ಹಾರಿಸಲೂ ಸೈ! ಮೇಲೇರುವುದನ್ನು ನೋಡಿ ಖುಷಿಯೋ ಖುಷಿ

Exit mobile version