ನವ ದೆಹಲಿ: ಉತ್ತರಾಖಂಡ್ನ ವನತಾರಾ ರೆಸಾರ್ಟ್ನ ರಿಸಪ್ಷನಿಸ್ಟ್ (ಸ್ವಾಗತಕಾರಿಣಿ) ಹತ್ಯೆ (Uttarakhand Receptionist Murder) ಕೇಸ್ನಲ್ಲಿ ಪ್ರಮುಖ ಆರೋಪಿ ಪುಲ್ಕಿತ್ ಆರ್ಯಾ ಬಂಧಿತನಾಗಿದ್ದಾನೆ. ಈತ ಉತ್ತರಾಖಂಡ್ ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ವಿನೋದ್ ಆರ್ಯಾ ಅವರ ಪುತ್ರ. ಈಗ ಮಗ ಮಾಡಿದ ತಪ್ಪಿಗೆ, ತಂದೆ ವಿನೋದ್ ಆರ್ಯಾ ಕೂಡ ಶಿಕ್ಷೆ ಅನುಭವಿಸುವಂತಾಗಿದೆ. ವಿನೋದ್ರನ್ನು ಬಿಜೆಪಿ ಪಕ್ಷದಿಂದಲೇ ಉಚ್ಚಾಟನೆ ಮಾಡಲಾಗಿದೆ. ಹಾಗೇ, ಪುಲ್ಕಿತ್ ಆರ್ಯಾರ ಸಹೋದರ ಅಂಕಿತ್ ಆರ್ಯಾ ಕೂಡ ಬಿಜೆಪಿಯಲ್ಲೇ ಇದ್ದರು. ಅವರನ್ನೂ ಪಕ್ಷದಿಂದ ತೆಗೆದುಹಾಕಲಾಗಿದೆ.
ವನತಾರಾ ರೆಸಾರ್ಟ್ನ ಮಾಲೀಕನಾಗಿದ್ದ ಪುಲ್ಕಿತ್ ಆರ್ಯಾ, ಇಲ್ಲಿ ಕೆಲಸ ಮಾಡುತ್ತಿದ್ದ ಸ್ವಾಗತಕಾರಿಣಿ ಅಂಕಿತಾಳನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳಲು ಯತ್ನಿಸಿದ್ದ. ಅಂದರೆ ರೆಸಾರ್ಟ್ಗೆ ಬರುವ ಅತಿಥಿಗಳಿಗೆ ಲೈಂಗಿಕವಾಗಿ ಸಹಕರಿಸಲು ಪೀಡಿಸುತ್ತಿದ್ದ. ಅಲ್ಲದೇ, ತಾನೇ ಸ್ವತಃ ಅಂಕಿತಾ ಜತೆ ಅಸಭ್ಯವಾಗಿ ನಡೆದುಕೊಂಡಿದ್ದ. ಆಕೆಯಿಂದ ಪ್ರತಿರೋಧ ಹೆಚ್ಚಾಗಿತ್ತು. ಹೀಗಾಗಿ ರೆಸಾರ್ಟ್ನ ಇನ್ನಿಬ್ಬರು ಉದ್ಯೋಗಿಗಳೊಂದಿಗೆ ಸೇರಿ ಅಂಕಿತಾಳನ್ನು ಗಂಗಾನದಿಗೆ ನೂಕಿ ಹತ್ಯೆ ಮಾಡಿದ್ದ. ಪುಲ್ಕಿತ್ ಮತ್ತು ಆತನಿಗೆ ಹತ್ಯೆಗೆ ಸಹಕರಿಸಿದ ಇನ್ನಿಬ್ಬರು ಸೇರಿ ಮೂವರೂ ಅರೆಸ್ಟ್ ಆಗಿದ್ದಾರೆ.
ಅಂಕಿತಾ ಸೋಮವಾರ (ಸೆ.19)ದಿಂದ ನಾಪತ್ತೆಯಾಗಿದ್ದಳು. ಆಕೆಯ ಮನೆಯವರು ಪೊಲೀಸರಿಗೆ ದೂರು ಕೊಟ್ಟಿದ್ದರು. ಎಷ್ಟೇ ಹುಡುಕಿದರೂ ಸಿಕ್ಕಿರಲಿಲ್ಲ. ಸೆ.23ರ ಬೆಳಗ್ಗೆ ಒಂದು ಕಾಲುವೆ ಬಳಿ ಅಂಕಿತಾ ಮೃತದೇಹ ಪತ್ತೆಯಾಗಿತ್ತು. ಹಾಗೇ ಆಕೆಯನ್ನು ಹತ್ಯೆ ಮಾಡಿದ್ದು ಬಿಜೆಪಿ ನಾಯಕನ ಪುತ್ರನೇ ಎಂದು ಗೊತ್ತಾಗಲೂ ತುಂಬ ಹೊತ್ತು ಹಿಡಿಯಲಿಲ್ಲ. ಅರೆಸ್ಟ್ ಆದ ಪುಲ್ಕಿತ್ ಕೂಡ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಬಿಜೆಪಿ ನಾಯಕನ ಮಗನೇ ಹತ್ಯೆ ಮಾಡಿದ್ದಾನೆ ಎಂದು ಗೊತ್ತಾಗುತ್ತಿದ್ದಂತೆ ಸ್ಥಳೀಯರು ವಿಪರೀತ ಪ್ರತಿಭಟನೆ ನಡೆಸಿದ್ದಾರೆ. ವನತಾರಾ ರೆಸಾರ್ಟ್ ಕಟ್ಟಡಕ್ಕೂ ಬೆಂಕಿ ಇಟ್ಟಿದ್ದರು. ಇಂದು (ಸೆ.24) ಮುಂಜಾನೆ ಬಿಜೆಪಿ ಸರ್ಕಾರವೇ ವನತಾರಾ ರೆಸಾರ್ಟ್ನ್ನು ನೆಲಸಮಗೊಳಿಸಲು ಆದೇಶಿಸಿತ್ತು. ಅದರಂತೆ ಜೆಸಿಬಿ ಮೂಲಕ ಕಟ್ಟಡವನ್ನು ಸಂಪೂರ್ಣ ಧ್ವಂಸ ಮಾಡಲಾಗಿದೆ.
ಇದನ್ನೂ ಓದಿ: 19 ವರ್ಷದ ರಿಸಪ್ಷನಿಸ್ಟ್ ಹತ್ಯೆ; ಉತ್ತರಾಖಂಡ ಬಿಜೆಪಿ ಮಾಜಿ ಸಚಿವನ ಪುತ್ರನ ರೆಸಾರ್ಟ್ ಸಂಪೂರ್ಣ ನೆಲಸಮ