ಡೆಹ್ರಾಡೂನ್: ಸರ್ಕಾರಿ ಕೆಲಸ ಸಿಗಬೇಕೆಂದರೆ ಪರೀಕ್ಷೆ ಬರೆದು ಪಾಸ್ ಆಗಬೇಕು. ಆದರೆ ಅದರಲ್ಲೂ ನಕಲು ಮಾಡುವ ಹಾಗೂ ಪ್ರಶ್ನೆ ಪತ್ರಿಕೆಗಳನ್ನೇ ಸೋರಿಕೆ ಮಾಡುವ ಪ್ರಕರಣಗಳು ನಡೆಯುತ್ತಿರುತ್ತವೆ. ಆದರೆ ಇನ್ನು ಮುಂದೆ ಆ ರೀತಿ ಮಾಡುವ ಅಭ್ಯರ್ಥಿಗಳನ್ನು ಹತ್ತು ವರ್ಷಗಳ ಕಾಲ ಸರ್ಕಾರಿ ಕೆಲಸಗಳ ನೇಮಕಾತಿಯಿಂದ ನಿಷೇಧಿಸುವುದಕ್ಕೆ ಉತ್ತರಾಖಂಡದ (Uttarakhand) ಸರ್ಕಾರ ನಿರ್ಧರಿಸಿದೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ | ಉತ್ತರಾಖಂಡದ ಜೋಶಿಮಠ ಪಟ್ಟಣ ಕುಸಿತ ನಮಗೆ ಎಚ್ಚರಿಕೆಯ ಗಂಟೆಯಾಗಲಿ
ಇತ್ತೀಚೆಗೆ ಉತ್ತರಾಖಂಡದಲ್ಲಿ ಯುಕೆಪಿಎಸ್‌ಸಿ ಪರೀಕ್ಷೆಯ ದಿನಾಂಕ ನಿಗದಿಯಾಗಿತ್ತು. ಆದರೆ ಪರೀಕ್ಷೆ ನಡೆಯುವುದಕ್ಕೂ ಮೊದಲೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಈ ವಿಚಾರ ಸುದ್ದಿಯಾಗಿತ್ತು. ಆ ಹಿನ್ನೆಲೆ ಆ ಪರೀಕ್ಷೆಯನ್ನೇ ರದ್ದು ಮಾಡಲಾಗಿತ್ತು. 1.4 ಲಕ್ಷ ಅಭ್ಯರ್ಥಿಗಳು ಈ ಪರೀಕ್ಷೆ ಕಟ್ಟಿದ್ದು, ಅವರೆಲ್ಲರ ಸರ್ಕಾರಿ ನೇಮಕಾತಿಯ ಕನಸು ಭಗ್ನವಾಗಿತ್ತು.
ಈ ಘಟನೆಯ ಬೆನ್ನಲ್ಲೇ ಸರ್ಕಾರ ಪರೀಕ್ಷೆಗಳಲ್ಲಿ ನಕಲು ಮಾಡುವವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಅದಕ್ಕೆಂದೇ “ನಕಲು ವಿರೋಧಿ ಕಾಯ್ದೆ” ರೂಪಿಸಲು ಸಿದ್ಧವಾಗಿದೆ. ಅದರ ಪ್ರಕಾರ ನಕಲು ಮಾಡಿ ಅಥವಾ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಸಿಕ್ಕಿ ಬೀಳುವವರಿಗೆ ಹತ್ತು ವರ್ಷಗಳ ಕಾಲ ಸರ್ಕಾರಿ ನೇಮಕಾತಿಗಳಿಂದ ನಿಷೇಧಿಸಲಾಗುವುದು. ಈ ಕಾಯ್ದೆಯ ಪ್ರಸ್ತಾಪವನ್ನು ಈಗಾಗಲೇ ವಿಧಾನಸಭೆಯಲ್ಲಿ ಮಾಡಲಾಗಿದೆ. ಇನ್ನು ಕೆಲ ತಿಂಗಳುಗಳಲ್ಲಿ ಇದು ಕಾನೂನಿನ ರೂಪ ಪಡೆದುಕೊಳ್ಳಲಿದೆ.
ಈ ಬಗ್ಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಅವರು ಮಾತನಾಡಿದ್ದು, “ನಮ್ಮ ನಕಲು ವಿರೋಧಿ ಕಾಯ್ದೆಯು ದೇಶದಲ್ಲಿಯೇ ಅತ್ಯಂತ ಕಠಿಣವಾದ ನಕಲು ವಿರೋಧಿ ಕಾಯ್ದೆಯಾಗಿರಲಿದೆ. ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡುವುದರ ಜತೆಯಲ್ಲಿ ಅವರ ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗುವುದು” ಎಂದು ಮಾಹಿತಿ ನೀಡಿದ್ದಾರೆ.
ಕಳೆದ ವರ್ಷವೂ ಸಹ ಉತ್ತರಾಖಂಡದಲ್ಲಿ ಸರ್ಕಾರಿ ಕೆಲಸದ ಪರೀಕ್ಷೆಯಲ್ಲಿ ಅಕ್ರಮ ಉಂಟಾಗಿತ್ತು. ನವೆಂಬರ್‌ನಲ್ಲಿ ಯುಕೆಎಸ್‌ಎಸ್‌ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ಸೋರಿಕೆಯಾಗಿತ್ತು.
ಇದನ್ನೂ ಓದಿ | ಮಳೆ ಲೆಕ್ಕಿಸದೇ ಪಿಎಸ್‌ಐ ಅಭ್ಯರ್ಥಿಗಳ ಪ್ರತಿಭಟನೆ: ಮರುಪರೀಕ್ಷೆ ದಿನಾಂಕ ಘೋಷಣೆಗೆ ಪಟ್ಟು