Site icon Vistara News

ಸ್ಕಾರ್ಪೀನ್​ ವರ್ಗದ 5ನೇ ಜಲಾಂತರ್ಗಾಮಿ ‘ವಾಗಿರ್’ ಜನವರಿ 23ರಿಂದ ನೌಕಾಪಡೆಯಲ್ಲಿ ಕಾರ್ಯಾರಂಭ; ಇದು ಸ್ಯಾಂಡ್ ಶಾರ್ಕ್​​

Vagir To Be Commissioned On Jan 23 to Navy

ಸ್ಕಾರ್ಪೀನ್​ ವರ್ಗದ ಐದನೇ ಜಲಾಂತರ್ಗಾಮಿ ‘ವಾಗಿರ್​’ ನೌಕೆಯನ್ನು ಭಾರತೀಯ ನೌಕಾಪಡೆ ಜನವರಿ 23ರಿಂದ ಕಾರ್ಯಾರಂಭ ಮಾಡಲಿದೆ. ಭಾರತೀಯ ನೌಕಾ ಯೋಜನೆ-75ಯಡಿ, ದೇಶೀಯವಾಗಿ ನಿರ್ಮಿಸಲಾದ ಈ ಜಲಾಂತರ್ಗಾಮಿ, ಸುಭಾಷ್​ ಚಂದ್ರ ಬೋಸ್​ ಜನ್ಮದಿನದಂದೇ ಅಂದರೆ ‘ಪರಾಕ್ರಮ ದಿವಸ್​’ ದಂದು ನೌಕಾಪಡೆಗೆ ನಿಯೋಜನೆಗೊಳ್ಳುತ್ತಿರುವುದು ವಿಶೇಷ.

ಫ್ರೆಂಚ್​ ಸಹಯೋಗದಲ್ಲಿ, ಮುಂಬಯಿಯ ಮಝಗಾಂವ್ ಡಾಕ್​ ಶಿಪ್​​ಬ್ಯುಲ್ಡರ್ಸ್​ ಲಿಮಿಟೆಡ್​​ ತಯಾರಿಸಿರುವ ಸ್ಕಾರ್ಪೀನ್ ದರ್ಜೆಯ ಈ ವಾಗಿರ್​​ನ್ನು ನೌಕಾಪಡೆಗೆ ನಿಯೋಜನೆಗೊಳಿಸುವ ಕಾರ್ಯಕ್ರಮ ಜನವರಿ 23ರಂದು ಮುಂಬಯಿಯ ನೇವಲ್​ ಡಾಕ್​ಯಾರ್ಡ್​​ನಲ್ಲಿ ನಡೆಯಲಿದ್ದು, ಅಂದಿನ ಕಾರ್ಯಕ್ರಮದಲ್ಲಿ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್​ ಆರ್​. ಹರಿ ಕುಮಾರ್​ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಇನ್ನು ಸ್ಕಾರ್ಪೀನ್ ವರ್ಗದ ನಾಲ್ಕು ಜಲಾಂತರ್ಗಾಮಿಗಳು ಈಗಾಗಲೇ ನೌಕಾಪಡೆಯನ್ನು ಸೇರಿವೆ. ಅದರಲ್ಲಿ ಮೊಟ್ಟಮೊದಲನೆಯದು ಐಎನ್​​ಎಸ್​ ಕಲ್ವಾರಿ. ಇದು 2015ರ ಅಕ್ಟೋಬರ್​ 27ರಂದು ಲೋಕಾರ್ಪಣೆಗೊಂಡು, 2017ರ ಡಿಸೆಂಬರ್​ 14ರಿಂದ ಸೇವೆ ಆರಂಭ ಮಾಡಿದೆ. ಹಾಗೇ, ಎರಡನೇಯದು ಐಎನ್​ಎಸ್​ ಖಾಂಡೇರಿ. ಇದು ಲೋಕಾರ್ಪಣೆಗೊಂಡಿದ್ದು 2017ರ ಜನವರಿ 12ಕ್ಕೆ. ಕಾರ್ಯಾರಂಭ ಮಾಡಿದ್ದು 2019ರ ಸೆಪ್ಟೆಂಬರ್​ 28ರಂದು. ಬಳಿಕ ಐಎನ್​​ಎಸ್​ ಕಾರಂಜ್​ ಜಲಾಂತರ್ಗಾಮಿ 2018ರಂದು ಉದ್ಘಾಟನೆಗೊಂಡಿತು. ಬಳಿಕ 2021ರ ಮಾರ್ಚ್​ 10ರಿಂದ ಕಾರ್ಯಾರಂಭ ಮಾಡಿತು. ಹಾಗೇ ನಾಲ್ಕನೇ ಜಲಾಂತರ್ಗಾಮಿ ನೌಕೆ ಐಎನ್​ಎಸ್​ ವೇಲಾ 2019ರ ಮೇ ತಿಂಗಳಲ್ಲಿ ಲೋಕಾರ್ಪಣೆಗೊಂಡು, 2021ರ ನವೆಂಬರ್​ನಿಂದ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದೆ. ಇದೀಗ ನೌಕಾಪಡೆಗೆ ನಿಯೋಜನೆಗೊಳ್ಳುತ್ತಿರುವ ವಾಗಿರ್​ ಲೋಕಾರ್ಪಣೆಗೊಂಡಿದ್ದು 2020ರ ನವೆಂಬರ್​ 12ರಂದು. ಜನವರಿ 23ರಿಂದ ಸೇವೆ ಆರಂಭಿಸುತ್ತಿದೆ.

ವಾಗಿರ್​ ಮೊಟ್ಟಮೊದಲಿಗೆ 2022ರ ಫೆಬ್ರವರಿಯಲ್ಲಿ ಸಮುದ್ರದಲ್ಲಿ ವಿಹಾರ ನಡೆಸಿತು. ಅದಾದ ಬಳಿಕ ಇಲ್ಲಿಯವರೆಗೆ ಸರಣಿ ವಿಹಾರ ನಡೆಸಿ, ಪ್ರಾಯೋಗಿಕ ಸಂಚಾರ ಮಾಡಿದೆ. ಈ ಜಲಾಂತರ್ಗಾಮಿಯನ್ನು ಸ್ಯಾಂಡ್ ಶಾರ್ಕ್​ ಎಂದೂ ಕರೆಯಲಾಗುತ್ತದೆ. ‘ರಹಸ್ಯ ಮತ್ತು ನಿರ್ಭಯತೆ’ಯನ್ನು ಬಿಂಬಿಸುವ ಜಲಾಂತರ್ಗಾಮಿ ಈ ವಾಗಿರ್​ ಎಂದು ಕೇಂದ್ರ ಸರ್ಕಾರ ಹೇಳಿದೆ.

ಇದನ್ನೂ ಓದಿ: Army Salute | ಭೂಸೇನೆ, ನೌಕಾಪಡೆ, ವಾಯುಸೇನೆಗಳು ಯಾಕೆ ಬೇರೆ ಬೇರೆ ಸೆಲ್ಯೂಟ್ ಹೊಂದಿವೆ?

Exit mobile version