ಮುಂಬಯಿ: ಅದೇನೋ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಹಿಡಿದ ಗ್ರಹಚಾರ ಬಿಡುವಂತೆ ಕಾಣುತ್ತಿಲ್ಲ. ಎಮ್ಮೆ, ಹಸು ಆಯ್ತು, ಈಗ ಮುಂಬಯಿ ಸೆಂಟ್ರಲ್ನಿಂದ ಗುಜರಾತ್ನ ಗಾಂಧಿನಗರಕ್ಕೆ ಹೊರಟಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಗೂಳಿ ಅಡ್ಡಬಂದಿದೆ. ಆ ಗೂಳಿಗೆ ಡಿಕ್ಕಿ ಹೊಡೆದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಮುಂಭಾಕ್ಕೆ ಹಾನಿಯಾಗಿದೆ. ಇಂದು ಸಂಜೆಯೊಳಗೆ ಅದು ದುರಸ್ತಿಯಾಗುವ ಸಾಧ್ಯತೆ ಇದೆ.
ಇಂದು (ಅ.29) ಬೆಳಗ್ಗೆ 8.17ರ ಹೊತ್ತಿಗೆ ಮುಂಬಯಿಯ ಅತುಲ್ ಬಳಿ ಘಟನೆ ನಡೆದಿದ್ದು, ಇದರಿಂದಾಗಿ ಸುಮಾರು 15 ನಿಮಿಷ ಅಲ್ಲಿಯೇ ರೈಲು ನಿಂತಿತ್ತು. ಇನ್ನು ಟ್ರೇನ್ನ ಮುಂಭಾಗ ಬಿಟ್ಟರೆ ಇನ್ನೇನೂ ಹಾನಿಯಾಗಿಲ್ಲ ಎಂದು ಪಶ್ಚಿಮ ರೈಲ್ವೆ ಮುಖ್ಯ ಪಿಆರ್ಒ ಸುಮಿತ್ ಠಾಕೂರ್ ತಿಳಿಸಿದ್ದಾರೆ. ಈ ರೈಲು ಅಕ್ಟೋಬರ್ 6ರಂದು ಎಮ್ಮೆಗಳಿಗೆ ಡಿಕ್ಕಿ ಹೊಡೆದಿತ್ತು, ಹಾಗೇ ಮರುದಿನ ಹಸುವೊಂದಕ್ಕೆ ಡಿಕ್ಕಿಯಾಗಿತ್ತು. ಅದರ ಬೆನ್ನಲ್ಲೇ ಈಗ ಗೂಳಿಗೆ ಡಿಕ್ಕಿಯಾಗಿದೆ. ಅಂದಹಾಗೇ, ಈ ಮುಂಬಯಿ-ಗುಜರಾತ್ ರೈಲಿಗೆ ಇತ್ತೀಚೆಗೆಷ್ಟೇ ಪ್ರಧಾನಿ ಮೋದಿ ಚಾಲನೆ ಕೊಟ್ಟಿದ್ದಾರೆ. ಇದು ದೇಶದ ಮೂರನೇ ವಂದೇ ಭಾರತ್ ಟ್ರೇನ್ ಆಗಿದೆ.
ಇದನ್ನೂ ಓದಿ: Modi programme| ಚೆನ್ನೈ- ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ನ. 11ರಂದು ಬೆಂಗಳೂರಿಂದ ಚಾಲನೆ