Site icon Vistara News

Vande Bharat: ಭಾರತದಲ್ಲಿ ಈಗ ಸಂಚರಿಸುತ್ತಿವೆ 10 ವಂದೇ ಭಾರತ್​ ರೈಲುಗಳು; ಮಾರ್ಗ, ಕ್ರಮಿಸುವ ದೂರದ ವಿವರ ಇಲ್ಲಿದೆ

Vande Bharat trains routes in India

#image_title

ಭಾರತದಲ್ಲಿ ವಂದೇ ಭಾರತ್​ ರೈಲುಗಳ (Vande Bharat Trains) ಸಂಚಾರ ವಿಸ್ತರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi)ಯವರು ಶುಕ್ರವಾರ ಎರಡು ವಂದೇ ಭಾರತ್​ ಟ್ರೇನ್​​ಗಳಿಗೆ ಹಸಿರು ನಿಶಾನೆ ತೋರಿಸಿದ್ದಾರೆ. ಅಲ್ಲಿಗೆ ದೇಶದಲ್ಲಿ ಒಟ್ಟು 10 ವಂದೇ ಭಾರತ್​ ರೈಲುಗಳು ಸಂಚಾರ ಪ್ರಾರಂಭಿಸಿದಂತೆ ಆಗಿದೆ. ಅಂದಹಾಗೇ, ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರು ಮುಂಬಯಿ-ಸೊಲ್ಲಾಪುರ ಮಾರ್ಗದ ಮತ್ತು ಮುಂಬಯಿ-ಶಿರಡಿ ಮಾರ್ಗದ ರೈಲುಗಳ ಸಂಚಾರವನ್ನು ಉದ್ಘಾಟಿಸಿದ್ದಾರೆ.

ವಂದೇ ಭಾರತ್​ ಎರಡು ರೈಲುಗಳಿಗೆ ಹಸಿರು ನಿಶಾನೆ ತೋರಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ ‘ಇಂದಿನ ಆಧುನಿಕ ಭಾರತದಲ್ಲಿ ವಂದೇ ಭಾರತ್​ ರೈಲು ಅತ್ಯಗತ್ಯವಾಗಿದೆ. ಭಾರತದ ವೇಗಕ್ಕೆ ಈ ರೈಲುಗಳು ಪ್ರತಿಬಿಂಬ. ಇದೀಗ ಭಾರತದಲ್ಲಿ 10 ವಂದೇ ಭಾರತ್​ ರೈಲುಗಳು ಸಂಚರಿಸುತ್ತಿವೆ’ ಎಂದು ಹೇಳಿದರು.
ವಂದೇ ಭಾರತ್​ ರೈಲುಗಳು ಸಂಚರಿಸುವ 10 ಮಾರ್ಗಗಳು ಹೀಗಿವೆ..

  1. ನವದೆಹಲಿ-ವಾರಾಣಸಿ ವಂದೇ ಭಾರತ್ ಎಕ್ಸ್​ಪ್ರೆಸ್​
    ಇದು ದೇಶದ ಮೊದಲ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲಾಗಿದ್ದು, 2019ರ ಫೆಬ್ರವರಿ 15ರಂದು ಉದ್ಘಾಟನೆಗೊಂಡಿದೆ. ಇದು ದೆಹಲಿ-ಕಾನ್ಪುರ-ಅಲಹಾಬಾದ್​-ವಾರಾಣಸಿ ಮಾರ್ಗದಲ್ಲಿ ಸಂಚಾರ ಮಾಡುತ್ತದೆ. ಸೋಮವಾರ-ಗುರುವಾರ ಹೊರತುಪಡಿಸಿ, ಉಳಿದೆಲ್ಲ ದಿನ ಇದರ ಸಂಚಾರ ಇರುತ್ತದೆ. ಒಟ್ಟಾರೆ 759 ಕಿಲೋಮೀಟರ್​ ದೂರ ಕ್ರಮಿಸುತ್ತದೆ.
  2. ನವ ದೆಹಲಿ-ಶ್ರೀಮಾತಾ ವೈಷ್ಣೋದೇವಿ ಕಾತ್ರಾ (ಜಮ್ಮು-ಕಾಶ್ಮೀರ)
    ಈ ವಂದೇ ಭಾರತ್ ರೈಲು ದೆಹಲಿ ಮತ್ತು ಜಮ್ಮು-ಕಾಶ್ಮೀರದ ಕಾತ್ರಾದಲ್ಲಿರುವ ಮಾತಾ ವೈಷ್ಣೋದೇವಿ ಕ್ಷೇತ್ರದ ನಡುವೆ ಸಂಚಾರ ಮಾಡುತ್ತದೆ. ಮಂಗಳವಾರ ಒಂದು ಬಿಟ್ಟು ಉಳಿದೆಲ್ಲ ದಿನದಲ್ಲೂ ಇದರ ಸಂಚಾರ ಇರುತ್ತದೆ. ದೆಹಲಿಯಿಂದ ಕಾತ್ರಾಕ್ಕೆ ತಲುಪಲು 8 ತಾಸು ತೆಗೆದುಕೊಳ್ಳುತ್ತದೆ.
  3. ಗಾಂಧಿನಗರ-ಮುಂಬಯಿ ವಂದೇ ಭಾರತ್​ ಎಕ್ಸ್​ಪ್ರೆಸ್​
    ಈ ರೈಲು ಸೆಪ್ಟೆಂಬರ್​ 2022ರ ಸೆಪ್ಟೆಂಬರ್​ 30ರಂದು ಸಂಚಾರ ಪ್ರಾರಂಭ ಮಾಡಿತು. ಭಾನುವಾರ ಹೊರತು ಪಡಿಸಿ ಉಳಿದೆಲ್ಲ ದಿನ ಸಂಚರಿಸುತ್ತದೆ. ಮುಂಬಯಿ ಕೇಂದ್ರ ರೈಲ್ವೆ ನಿಲ್ದಾಣದಿಂದ ಮುಂಜಾನೆ 6ಗಂಟೆಗೆ ಹೊರಟು, ಮಧ್ಯಾಹ್ನ 12.25ರ ಹೊತ್ತಿಗೆ ಗಾಂಧಿನಗರ ತಲುಪುತ್ತದೆ. ಸುಮಾರು 522 ಕಿಮೀ ದೂರ ಕ್ರಮಿಸುತ್ತದೆ.
  4. ನವದೆಹಲಿ-ಹಿಮಾಚಲ ಪ್ರದೇಶದ ಅಂಬ್ ಅಂಡೋರಾ ವಂದೇ ಭಾರತ್ ಎಕ್ಸ್‌ಪ್ರೆಸ್
    ಈ ರೈಲು ದೆಹಲಿಯಿಂದ ಮುಂಜಾನೆ 5.50ಕ್ಕೆ ಹೊರಟು, ಅಂಬ್​ ಅಡೋರಾಕ್ಕೆ ಬೆಳಗ್ಗೆ 11.05ಗಂಟೆಗೆ ತಲುಪುತ್ತದೆ. ಶುಕ್ರವಾರ ಹೊರತುಪಡಿಸಿ ಉಳಿದೆಲ್ಲ ದಿನ ಸಂಚಾರ ಇರುತ್ತದೆ.
  5. ಚೆನ್ನೈ-ಮೈಸೂರು ವಂದೇ ಭಾರತ್​ ರೈಲು
    ಇದು ದಕ್ಷಿಣ ಭಾರತದ ಮೊದಲ ವಂದೇ ಭಾರತ್​ ರೈಲು. ಬುಧವಾರ ಒಂದು ದಿನ ಬಿಟ್ಟು ಉಳಿದೆಲ್ಲ ದಿನ ಇದರ ಸಂಚಾರ ಇರುತ್ತದೆ. ಚೆನ್ನೈನಿಂದ ಮುಂಜಾನೆ 5.50ಕ್ಕೆ ಹೊರಟು ಮಧ್ಯಾಹ್ನ 12.20ಕ್ಕೆ ಮೈಸೂರು ತಲುಪುತ್ತದೆ. ಒಟ್ಟು 401 ಕಿಮೀ ದೂರ ಕ್ರಮಿಸುತ್ತದೆ.
  6. ನಾಗ್ಪುರ-ಬಿಲಾಸ್​​ಪುರ ವಂದೇ ಭಾರತ್​ ರೈಲು
    ಮಹಾರಾಷ್ಟ್ರದ ನಾಗ್ಪುರ ಮತ್ತು ಛತ್ತೀಸ್​ಗಢ್​​ನ ಬಿಲಾಸ್​ಪುರವನ್ನು ಸಂಪರ್ಕಿಸುವ ರೈಲು ಇದು. ಶನಿವಾರ ಹೊರತು ಪಡಿಸಿ ಉಳಿದೆಲ್ಲ ದಿನ ಸಂಚಾರ ಮಾಡುತ್ತದೆ. ನಾಗ್ಪುರ ರೈಲ್ವೆ ಸ್ಟೇಶನ್​​ನಿಂದ ಮಧ್ಯಾಹ್ನ 2.5ಕ್ಕೆ ಹೊರಟರೆ, ಸಂಜೆ 7.35ಕ್ಕೆ ಬಿಲಾಸ್​ಪುರಕ್ಕೆ ತಲುಪುತ್ತದೆ.
  7. ಹೌರಾಹ್​-ನ್ಯೂ ಜಲ್ಪೈಗುರಿ ವಂದೇ ಭಾರತ್ ಎಕ್ಸ್‌ಪ್ರೆಸ್
    ಈ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು 2022ರ ಡಿಸೆಂಬರ್​ 30ರಂದು ವರ್ಚ್ಯುವಲ್​ ಆಗಿ ಚಾಲನೆ ಕೊಟ್ಟಿದ್ದಾರೆ. ಬುಧವಾರ ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲೂ ರೈಲು ಸಂಚಾರವಿದೆ. ಮುಂಜಾನೆ 5.55ಕ್ಕೆ ಹೌರಾಹ್​​ನಿಂದ ಹೊರಡುವ ರೈಲು, ಮಧ್ಯಾಹ್ನ 1.25ರ ಹೊತ್ತಿಗೆ, 454 ಕಿಮೀ ದೂರದಲ್ಲಿ ಇರುವ ನ್ಯೂ ಜಲ್ಪೈಗುರಿ ತಲುಪುತ್ತದೆ.
  8. ಸಿಕಂದರಾಬಾದ್​-ವಿಶಾಖಪಟ್ಟಣಂ ವಂದೇ ಭಾರತ್ ಎಕ್ಸ್​ಪ್ರೆಸ್​
    ತೆಲಂಗಾಣದ ಸಿಕಂದರಾಬಾದ್​ ಮತ್ತು ಆಂಧ್ರಪ್ರದೇಶದ ವಿಶಾಖಪಟ್ಟಣಂ ನಡುವೆ ಈ ರೈಲು ಸಂಚಾರ ಮಾಡುತ್ತದೆ. ಭಾನುವಾರ ಒಂದು ದಿನ ಈ ಮಾರ್ಗದ ರೈಲು ಇಲ್ಲ. ಅದರ ಹೊರತಾಗಿ ಪ್ರತಿದಿನ ಮಧ್ಯಾಹ್ನ 3ಗಂಟೆಗೆ ಸಿಕಂದರಾಬಾದ್ ಜಂಕ್ಷನ್​ ಬಿಡುವ ರೈಲು, ರಾತ್ರಿ 11.30ರ ಹೊತ್ತಿಗೆ ವಿಶಾಖಪಟ್ಟಣಂ ರೈಲ್ವೆ ಸ್ಟೇಶನ್​ ತಲುಪುತ್ತದೆ.
  9. ಮುಂಬಯಿ-ಸೊಲ್ಲಾಪುರ ರೈಲು
    ಈ ರೈಲು ಮುಂಬಯಿ ಮತ್ತು ಸೊಲ್ಲಾಪುರ ನಡುವೆ ಸಂಚಾರ ಮಾಡುತ್ತದೆ. ಬುಧವಾರ ಮಾತ್ರ ಈ ರೈಲು ಸಂಚಾರ ಇರುವುದಿಲ್ಲ. ಮುಂಬಯಿಯ ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣದಿಂದ ಸಂಜೆ 4.05ಗಂಟೆಗೆ ಹೊರಟು, ರಾತ್ರಿ 10.40ಕ್ಕೆ ಸೊಲ್ಲಾಪುರಕ್ಕೆ ತಲುಪುತ್ತದೆ. ಮುಂಬಯಿಯಿಂದ-ಸೊಲ್ಲಾಪುರಕ್ಕೆ ಆರೂವರೆ ಗಂಟೆಯಲ್ಲಿ ಪ್ರಯಾಣ ಮಾಡಬಹುದು.
  10. ಮುಂಬಯಿ-ಶಿರಡಿ ವಂದೇ ಭಾರತ್​ ರೈಲು
    ಈ ರೈಲು ಮುಂಬಯಿಯಿಂದ ಶ್ರೀನಗರದ ಶಿರಡಿಗೆ 5 ಗಂಟೆ, 20 ನಿಮಿಷದಲ್ಲಿ ತಲುಪುತ್ತದೆ. ಮುಂಬಯಿಯಲ್ಲಿ ಮುಂಜಾನೆ 6.20ಕ್ಕೆ ಬಿಟ್ಟು, ಶಿರಡಿಗೆ ಸಂಜೆ 11.40ಕ್ಕೆ ತಲುಪುತ್ತದೆ. ಗುರುವಾರ ಈ ರೈಲು ಸಂಚಾರ ಇಲ್ಲ.

ವಂದೇ ಭಾರತ್​ ರೈಲಿನ ವಿಶೇಷತೆ
ವಂದೇ ಭಾರತ್‌ ರೈಲಿನಲ್ಲಿ ಸ್ವಯಂಚಾಲಿತ ಬಾಗಿಲುಗಳಿರುತ್ತವೆ. ಮನರಂಜನೆಯ ಉದ್ದೇಶಕ್ಕೆ ಹಾಟ್‌ ಸ್ಪಾಟ್‌ ವೈ-ಫೈ ಸೌಲಭ್ಯ ಸಿಗುತ್ತದೆ. ಸೀಟುಗಳು ಸುಖಾಸೀನ ಕಲ್ಪಿಸುತ್ತವೆ. ಎಲ್ಲ ಶೌಚಾಲಯಗಳು ಬಯೊ-ವಾಕ್ಯೂಮ್‌ ಮಾದರಿಯದ್ದಾಗಿದೆ. ಅಡುಗೆ ಕೋಣೆಯೂ ಇದ್ದು, ಬಿಸಿ ಊಟ, ಬಿಸಿ ಮತ್ತು ತಣ್ಣೀರು ವಿತರಣೆಯ ಸೌಲಭ್ಯವಿದೆ. ಪ್ರತಿ ಬೋಗಿಯಲ್ಲೂ ವೈ-ಫೈ ಕಂಟೆಂಟ್‌ ಸಿಗುತ್ತದೆ. ಪ್ರತಿ ಕೋಚ್‌ನಲ್ಲೂ 32 ಇಂಚಿನ ಸ್ಕ್ರೀನ್‌ ಇರುತ್ತದೆ. ವೀಕ್ಷಕರಿಗೆ ನ್ಯೂಸ್‌ ಹಾಗೂ ಇನ್ಫೋಟೈನ್‌ಮೆಂಟ್‌ ದೊರೆಯುತ್ತದೆ. ವಿಕಲಚೇತನರಿಗೆ ಸೀಟ್‌ ಹ್ಯಾಂಡಲ್‌, ಬ್ರೈಲ್‌ ಲಿಪಿಯಲ್ಲಿ ಸೀಟಿನ ಸಂಖ್ಯೆ, 180 ಡಿಗ್ರಿ ಸುತ್ತುವ ಆಸನಗಳು ಎಕ್ಸಿಕ್ಯುಟಿವ್‌ ಬೋಗಿಗಳಲ್ಲಿ ಲಭ್ಯ. ವಂದೇ ಭಾರತ್‌ ಎಕ್ಸ್‌ಪ್ರೆಸ್‌ 392 ಟನ್‌ ಭಾರವಿದೆ. 16 ಬೋಗಿಗಳನ್ನು ಒಳಗೊಂಡಿದೆ. ಒಟ್ಟು ಸೀಟುಗಳ ಸಾಮರ್ಥ್ಯ 1128 ಆಗಿದೆ.

ಇದನ್ನೂ ಓದಿ: Vande Bharat Metro: ವಂದೇ ಭಾರತ್ ರೀತಿಯಲ್ಲೇ ರಾಜ್ಯಕ್ಕೆ ವಂದೇ ಮೆಟ್ರೋ ಟ್ರೈನ್! ಬೆಂಗಳೂರಲ್ಲೇ ಚಾಲನೆ?

Exit mobile version