Site icon Vistara News

Patra Chawl land Scam | ಸಂಜಯ್​ ರಾವತ್​ ಪತ್ನಿ ವರ್ಷಾಗೆ ಇಡಿಯಿಂದ ಸಮನ್ಸ್​

Varsha Raut summoned by ED In Patra Chawl case

ನವ ದೆಹಲಿ: ಪಾತ್ರಾ ಚಾಲ್​ ಭೂಹಗರಣ ಪ್ರಕರಣದಲ್ಲಿ ಶಿವಸೇನೆ ಸಂಸದ ಸಂಜಯ್​ ರಾವತ್​ ಈಗಾಗಲೇ ಇಡಿಯಿಂದ ಬಂಧಿತರಾಗಿದ್ದಾರೆ. ಈಗ ಅವರ ಪತ್ನಿ ವರ್ಷಾ ರಾವತ್​ಗೂ ಸಂಕಷ್ಟ ಎದುರಾಗಿದೆ. ವಿಚಾರಣೆಗೆ ಹಾಜರಾಗುವಂತೆ ವರ್ಷಾ ರಾವತ್​​ಗೆ ಇ ಡಿ ಅಧಿಕಾರಿಗಳು ಸಮನ್ಸ್​ ನೀಡಿದ್ದಾರೆ. ಪಾತ್ರಾ ಚಾಲ್​ ಭೂಹಗರಣ ಕೇಸ್​ನಲ್ಲಿ ಸಂಜಯ್​ ರಾವತ್ ಎರಡು ಬಾರಿ ಇ ಡಿ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಆಗಸ್ಟ್​ 1ರಂದು ಅವರ ಮುಂಬಯಿಯಲ್ಲಿರುವ ಮನೆಗೇ ಇ ಡಿ ಅಧಿಕಾರಿಗಳು ಲಗ್ಗೆ ಇಟ್ಟಿದ್ದರು. ಸಂಜಯ್​ ರಾವತ್​ ಮನೆಯನ್ನು ಶೋಧಿಸಿ, 11.50 ಲಕ್ಷ ರೂಪಾಯಿಗೂ ಅಧಿಕ ನಗದನ್ನು ವಶಪಡಿಸಿಕೊಂಡು, ನಂತರ ರಾವತ್​ರನ್ನು ಬಂಧಿಸಿದ್ದರು.

ಪಾತ್ರಾ ಚಾಲ್‌ ಭೂಹಗರಣ ಎನ್ನುವುದು ೧೦೩೪ ಕೋಟಿ ರೂ.ಹಗರಣ ಎಂದು ಹೇಳಲಾಗಿದೆ. ಇದರಲ್ಲಿ ಪ್ರಧಾನವಾಗಿರುವುದೇ ಸಂಜಯ್‌ ರಾವತ್‌ ಅವರ ಪತ್ನಿ ವರ್ಷಾ ರಾವತ್‌. ಈ ಹಗರಣ ಹಿಂದೆಯೇ ಬೆಳಕಿಗೆ ಬಂದು ಸಂಜಯ್‌ ರಾವತ್‌ ಅವರ ಆಪ್ತರಾದ ಪ್ರವೀಣ್‌ ರಾವತ್‌ ಅವರಿಗೆ ಸೇರಿದ ೯ ಕೋಟಿ ರೂ. ಮೌಲ್ಯದ ಆಸ್ತಿ ಮತ್ತು ವರ್ಷಾ ರಾವತ್‌ ಅವರಿಗೆ ಸೇರಿದ ೨ ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ.

ಭೂಮಿಗೆ ಸಂಬಂಧಿಸಿದ ದಾಖಲೆ ಇತ್ಯರ್ಥಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಇದಕ್ಕೆ ಭಾರಿ ಪ್ರಮಾಣದ ಲಂಚ ಪಡೆಯಲಾಗಿದೆ ಎನ್ನುವುದು ಪ್ರಧಾನ ಆರೋಪ. ಪ್ರವೀಣ್‌ ರಾವತ್‌ ಅವರು ಸುಮಾರು ೫೫ ಕೋಟಿ ರೂಪಾಯಿಯನ್ನು ವರ್ಷಾ ಅವರ ಖಾತೆಗೆ ಹಸ್ತಾಂತರಿಸಿದ್ದನ್ನು ಇ.ಡಿ ಗಮನಿಸಿದೆ. ಇದರ ಜತೆಗೆ ಸಂಜಯ್‌ ರಾವತ್‌ ಮತ್ತು ಅವರ ಆಪ್ತರಿಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಕ್ಕೆ ವಿಮಾನ ಯಾನ ಟಿಕೆಟ್‌ಗಳನ್ನು ಕೂಡಾ ಬುಕ್‌ ಮಾಡಲಾಗಿತ್ತು. ಇದೇ ವರ್ಷ ಜನವರಿಯಲ್ಲಿ ವರ್ಷಾರನ್ನು ಒಮ್ಮೆ ಇಡಿ ವಿಚಾರಣೆಗೆ ಒಳಪಡಿಸಿತ್ತು.

ಇದನ್ನೂ ಓದಿ: ಶಿವಸೇನೆ ಸಂಸದ ಸಂಜಯ್‌ ರಾವತ್‌ಗೆ ಆಗಸ್ಟ್‌ 4 ರವರೆಗೆ ಇಡಿ ಕಸ್ಟಡಿ; 8 ದಿನಗಳ ಮನವಿಗೆ ಇಲ್ಲ ಸಮ್ಮತಿ

Exit mobile version