ಜೈಪುರ: 2020ರಲ್ಲಿ ಬಿಜೆಪಿ ನಮ್ಮ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸಿದಾಗ ನಮ್ಮ ಸಹಾಯಕ್ಕೆ ಬಂದಿದ್ದು ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕಿ ವಸುಂಧರಾ ರಾಜೆ (Vasundhara Raje) ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Rajasthan Chief Minister Ashok Gehlot) ಅವರು ಭಾನುವಾರ ಹೇಳಿದ್ದರು. ಆದರೆ ಗೆಹ್ಲೋಟ್ ಅವರ ಈ ಮಾತನ್ನು ವಸುಂಧರಾ ರಾಜೆ ವಿರೋಧಿಸಿದ್ದಾರೆ. ‘ಅಶೋಕ್ ಗೆಹ್ಲೋಟ್ ಅವರಿಗೆ ಈ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭಯ ಶುರುವಾಗಿದೆ. ಹೀಗಾಗಿ ಅವರೇನೋ ಸಂಚು ಮಾಡುತ್ತಿದ್ದಾರೆ. ಅದರ ಒಂದು ಭಾಗವಾಗಿಯೇ ಇಂಥ ಹೇಳಿಕೆ ನೀಡುತ್ತಿದ್ದಾರೆ’ ಎಂದು ಹೇಳಿದ್ದಾರೆ.
ವಸುಂಧರಾ ರಾಜೆಯ ಭದ್ರಕೋಟೆ ಎನ್ನಿಸಿದ ಧೋಲ್ಪುರ ಜಿಲ್ಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅಶೋಕ್ ಗೆಹ್ಲೋಟ್ ‘2020ರಲ್ಲಿ ನಮ್ಮ ಸರ್ಕಾರಕ್ಕೆ ತೊಂದರೆ ಉಂಟಾಗಿತ್ತು. ಸಚಿನ್ ಪೈಲೆಟ್ ಮತ್ತು ಇತರ 18 ಶಾಸಕರು ಬಂಡಾಯ ಎದ್ದಿದ್ದರು. ಬಿಜೆಪಿಯವರು ಕುದುರೆ ವ್ಯಾಪಾರ ಶುರು ಮಾಡಿಕೊಂಡಿದ್ದರು. ಆಗ ವಸುಂಧರಾ ರಾಜೆ ಮತ್ತು ಬಿಜೆಪಿ ನಾಯಕ ಕೈಲಾಶ್ ಮೇಘ್ವಾಲ್ ಅವರು ನಮ್ಮ ಸಹಾಯಕ್ಕೆ ಬಂದರು. ಈ ಶಾಸಕರನ್ನು ಖರೀದಿಸುವುದರ ವಿರುದ್ಧ ಅವರು ತಿರುಗಿಬಿದ್ದಿದ್ದರು. ಚುನಾಯಿತ ಸರ್ಕಾರವನ್ನು ಕೆಡವುವ ಸಂಪ್ರದಾಯ ನಮ್ಮಲ್ಲಿ ಇಲ್ಲ ಎಂದು ವಸುಂಧರಾ ರಾಜೆ ಮತ್ತು ಕೈಲಾಶ್ ಮೇಘ್ವಾಲ್ ಹೇಳಿದ್ದರು. ಇವರ ಗಟ್ಟಿ ನಿಲುವಿನಿಂದಲೇ ನಮ್ಮ ಸರ್ಕಾರ ಅಂದು ಉಳಿಯಿತು’ ಎಂದು ಹೇಳಿದ್ದರು. ಅಷ್ಟೇ ಅಲ್ಲ, ‘ಆಗ ಬಿಜೆಪಿಯ ನಾಯಕಿಯಾಗಿದ್ದ ಶೋಭಾರಾಣಿ ಕುಶ್ವಹಾ’ ಅವರನ್ನೂ ಗೆಹ್ಲೋಟ್ ಹೊಗಳಿದ್ದರು.
2020ರಲ್ಲಿ ನಮ್ಮ ಸರ್ಕಾರ ಕುತ್ತು ತಂದವರು ಅಮಿತ್ ಶಾ, ಧರ್ಮೇಂದ್ರ ಪ್ರಧಾನ್ ಮತ್ತು ಗಜೇಂದ್ರ ಶೇಖಾವತ್ ಆಗಿದ್ದರು. ಇವರು ಮೂವರೂ ಸೇರಿಕೊಂಡು ಕಾಂಗ್ರೆಸ್ ಸರ್ಕಾರ ಕೆಡವಲು ಪಿತೂರಿ ನಡೆಸಿದ್ದರು. ಹಣ ಹಂಚಿದ್ದು, ಸಂಪೂರ್ಣ ಯೋಜನೆ ರೂಪಿಸಿದ್ದೆಲ್ಲ ಈ ಮೂವರೇ ಆಗಿದ್ದರು ಎಂದೂ ಅಶೋಕ್ ಗೆಹ್ಲೋಟ್ ಆರೋಪ ಮಾಡಿದ್ದರು.
ವಸುಂಧರಾ ರಾಜೆ ತಿರುಗೇಟು
ಅಶೋಕ್ ಗೆಹ್ಲೋಟ್ ಅವರ ಈ ಹೇಳಿಕೆಗೆ ಬಿಜೆಪಿ ನಾಯಕಿ ವಸುಂಧರಾ ರಾಜೆ ತಿರುಗೇಟು ಕೊಟ್ಟಿದ್ದಾರೆ. ‘ಅಶೋಕ್ ಗೆಹ್ಲೋಟ್ ಅವರು ಕಟ್ಟುಕತೆ ಹೆಣೆದಿದ್ದಾರೆ. 2023ರ ಚುನಾವಣೆಯಲ್ಲಿ ಸೋಲುವ ಭಯ ಅವರನ್ನು ಆವರಿಸಿದೆ. ಹೀಗಾಗಿ ನನ್ನ ಹೆಸರು ತೆಗೆದುಕೊಂಡಿದ್ದಾರೆ. ಇದು ನನಗೆ ಅವಮಾನ. ಅವರ ಪಕ್ಷದಲ್ಲಿ ಬಂಡಾಯ ಶುರುವಾಗಿದೆ. ಹೀಗಾಗಿ ಗೆಹ್ಲೋಟ್ ಇಂಥ ಹೇಳಿಕೆ ಕೊಡುತ್ತಿದ್ದಾರೆ. ಒಂದೊಮ್ಮೆ ಕುದುರೆ ವ್ಯಾಪಾರ ನಡೆದಿದ್ದೇ ಆದರೆ, ಅದರ ಹಿಂದಿನ ಮಾಸ್ಟರ್ಮೈಂಡ್ ಅಶೋಕ್ ಗೆಹ್ಲೋಟ್ ಅವರೇ ಆಗಿದ್ದಾರೆ. ಅವರ ಪಕ್ಷದ ಯಾವುದಾದರೂ ಶಾಸಕರು ಹಣ ಪಡೆದಿದ್ದೇ ಆದರೆ, ಅವರ ವಿರುದ್ಧ ಎಫ್ಐಆರ್ ದಾಖಲು ಮಾಡಲಿ’ ಎಂದು ವಸುಂಧರಾ ರಾಜೆ ಹೇಳಿದ್ದಾರೆ.