ಮುಂಬಯಿಯ ವರ್ಸೋವಾ-ಬಾಂದ್ರಾ ಸಮುದ್ರ ಸಂಪರ್ಕ ಸೇತುವೆ (Versova-Bandra sea link)ಗೆ, ವೀರ ಸಾವರ್ಕರ್ ಸೇತು (Veer Savarkar Setu) ಎಂದು ಮರುನಾಮಕರಣ ಮಾಡಲಾಗಿದೆ. ವರ್ಸೋವಾ-ಬಾಂದ್ರಾ ಸೀ ಲಿಂಕ್ಗೆ ವೀರ ಸಾವರ್ಕರ್ (Veer Savarka) ಹೆಸರು ಇಡುವುದಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಮೇ 28ರಂದು, ವೀರ ಸಾವರ್ಕರ್ ಜಯಂತಿಯಂದು ಘೋಷಣೆ ಮಾಡಿದ್ದರು. ಅದರಂತೆ ಈಗ ಹೆಸರನ್ನು ಅಧಿಕೃತಗೊಳಿಸಲಾಗಿದೆ. ಹಾಗೇ, ಮುಂಬಯಿ ಟ್ರಾನ್ಸ್ ಹಾರ್ಬರ್ (ಸೆವ್ರಿ-ನ್ಹಾವಾ ಶೆವಾ ಟ್ರಾನ್ಸ್ ಹಾರ್ಬರ್ ಲಿಂಕ್) ಲಿಂಕ್ಗೆ ಅಟಲ್ ಬಿಹಾರಿ ವಾಜಪೇಯಿ ಸ್ಮೃತಿ ನ್ಹವಾ ಶೇವಾ ಅಟಲ್ ಸೇತು ಎಂದೂ ನಾಮಕರಣ ಮಾಡಲಾಗಿದೆ.
ವರ್ಸೋವಾ-ಬಾಂದ್ರಾ ಸಮುದ್ರ ಸಂಪರ್ಕ ಸೇತುವೆಗೆ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಹೆಸರನ್ನು ಇಡಬೇಕು ಎಂದು ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರು ಮುಖ್ಯಮಂತ್ರಿ ಏಕನಾಥ್ ಶಿಂಧೆಗೆ ಹಲವು ದಿನಗಳ ಹಿಂದೆಯೇ ಪತ್ರ ಬರೆದಿದ್ದರು. ಅದಾದ ಬಳಿಕ ಸಾವರ್ಕರ್ ಜಯಂತಿಯಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಈ ಘೋಷಣೆ ಮಾಡಿದ್ದರು. ಇಂದು ಮಹಾರಾಷ್ಟ್ರ ಸರ್ಕಾರದ ಸಂಪುಟ ಸಭೆ ನಡೆದಿದ್ದು, ಈ ಸಭೆಯಲ್ಲಿ ನಿರ್ಧಾರವನ್ನು ಅಂತಿಮಗೊಳಿಸಲಾಗಿದೆ.
ಇದನ್ನೂ ಓದಿ: New Parliament Building: ಸಾವರ್ಕರ್ ಜಯಂತಿಯಂದೇ ನೂತನ ಸಂಸತ್ ಭವನಕ್ಕೆ ಮೋದಿ ಚಾಲನೆ
ಮುಂಬಯಿಯ ವರ್ಸೋವಾದಿಂದ ಬಾಂದ್ರಾವರೆಗೆ ಸಮುದ್ರ ಮಾರ್ಗದಲ್ಲಿ ಸಂಪರ್ಕಿಸುವ ಈ ಸೇತುವೆ ಇನ್ನೂ ನಿರ್ಮಾಣ ಹಂತದಲ್ಲಿ ಇದೆ. ಸುಮಾರು 17.17 ಕಿಮೀ ಉದ್ದವಿದೆ. 8 ಪಥದ ಈ ಸಮುದ್ರ ಸಂಪರ್ಕ ಸೇತುವೆಯಿಂದ ಮುಂಬಯಿಯ ಪಶ್ಚಿಮ ಎಕ್ಸ್ಪ್ರೆಸ್ ಹೈವೇ ಮತ್ತು ಪೂರ್ವದಲ್ಲಿರುವ ಮುಂಬಯಿ ಸಬ್ಅರ್ಬನ್ ರೈಲ್ವೆ ಮಾರ್ಗದಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಲಿದೆ.